ಬೆಂಗಳೂರು/ಹೊಸಕೋಟೆ: ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರ ಮನವಿ ಮೇರೆಗೆ ಇಂದು ಹೊಸಕೋಟೆಯಲ್ಲಿ ಭರಪೂರ ಅಭಿವೃದ್ಧಿ ಯೋಜನೆಗಳಿಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡುತ್ತಿದ್ದಾರೆ. ಎಂಟಿಬಿ ನಾಗರಾಜ್ಗೆ ಟಿಕೆಟ್ ನೀಡಿದರೆ ಬಂಡಾಯ ಏಳುವುದಾಗಿ ಬಹಿರಂಗವಾಗಿಯೇ ಭಿನ್ನಮತ ವ್ಯಕ್ತಪಡಿಸುತ್ತಿರುವ ಶರತ್ ಬಚ್ಚೇಗೌಡ ಈಗ ಯಾರ ಕೈಗೂ ಸಿಗುತ್ತಿಲ್ಲ. ಸಿಎಂ ಆಗಮಿಸುತ್ತಿರುವ ಹೊತ್ತಲ್ಲೇ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಅವರು ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ. ಇವತ್ತಿನ ವಿವಿಧ ಕಾರ್ಯಕ್ರಮಗಳಿಗೆ ಮಾಜಿ ಸಚಿವ ಬಚ್ಚೇಗೌಡ ಮತ್ತು ಶರತ್ ಬಚ್ಚೇಗೌಡ ಇಬ್ಬರೂ ಆಗಮಿಸುವ ಸಾಧ್ಯತೆ ಇಲ್ಲವೆನ್ನಲಾಗುತ್ತಿದೆ.
ಇನ್ನು, ಶರತ್ ಬಚ್ಚೇಗೌಡ ಬಂಡಾಯ ಏಳುವುದು ಬಹುತೇಕ ಖಚಿತವೆಂಬಂತೆ ಇರುವ ಹಿನ್ನೆಲೆಯಲ್ಲಿ ಆರ್. ಅಶೋಕ್ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ಧಾರೆ. ಬಂಡಾಯ ಎದ್ದವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಅಶೋಕ್ ಹೇಳಿದ್ಧಾರೆ. ಉಪಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೆಟ್ ಕೊಡುತ್ತೋ ಅವರ ಪರವಾಗಿ ಎಲ್ಲರೂ ಕೆಲಸ ಮಾಡಬೇಕು. ಒಂದು ವೇಳೆ ಅವರ ವಿರುದ್ಧ ನಿಂತರೆ ಶಿಸ್ತಿನ ಕ್ರಮ ಜರುಗಿಸಿ ಪಕ್ಷದಿಂದ ಉಚ್ಛಾಟನೆ ಮಾಡಲಾಗುತ್ತದೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ.
ಎಂಟಿಬಿ ನಾಗರಾಜ್ ನಮ್ಮ ಪಕ್ಷದವರಲ್ಲ. ಹೊಸಕೋಟೆಯಲ್ಲಿ ಅವರು ಒಳ್ಳೆಯ ಕೆಲಸ ಮಾಡಿದ್ಧಾರೆ. ಇಂದು ಅವರ ಕ್ಷೇತ್ರದಲ್ಲಿ ನೀರಾವರಿ ಕಾಮಗಾರಿಗೆ ಸಿಎಂ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಇದು ಸರ್ಕಾರೀ ಕಾರ್ಯಕ್ರಮವೇ ಹೊರತು ಯಾವುದೇ ರಾಜಕೀಯ ಕಾರ್ಯಕ್ರಮವಲ್ಲ. ಈ ಕಾರ್ಯಕ್ರಮಕ್ಕೆ ಆ ಭಾಗದ ಸಂಸದರು ಬರುತ್ತಾರೆ. ಶರತ್ ಬಚ್ಚೇಗೌಡ ಅವರಿಗೂ ಆಹ್ವಾನ ಹೋಗಿದೆ ಎಂದು ಆರ್. ಅಶೋಕ್ ಸ್ಪಷ್ಟಪಡಿಸಿದ್ಧಾರೆ.
ಹೊಸಕೋಟೆಯಲ್ಲಿ 100 ಕೋಟಿ ವೆಚ್ಚ ಏತ ನೀರಾವರಿ ಯೋಜನೆಯ ಕಾಮಗಾರಿಗಳಿಗೆ ಇವತ್ತು ಶಂಕಿ ಸ್ಥಾಪನೆಯಾಗುತ್ತಿದೆ. ಅನುಗೊಂಡನಹಳ್ಳಿ, ಜಡಿಗೇನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಕಾಮಗಾರಿಗಳು ನಡೆಯುತ್ತವೆ. ಕೆಆರ್ ಪುರಂ ಎಸ್ಟಿಪಿಐನಿಂದ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ.