ಬೆಂಗಳೂರು,ನ.೪-ನಮ್ಮ ಪಕ್ಷದ ವಿರುದ್ದ ಅಪಪ್ರಚಾರ ಮಾಡುವ ಬದಲು ತಾಕತ್ತಿದ್ದರೆ ಉಪಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದು ತೋರಿಸಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಪಕ್ಷ ಕಾಂಗ್ರೆಸ್ಗೆ ನೇರ ಪಂಥಾಹ್ವಾನ ನೀಡಿದ್ದಾರೆ.
ನೀವು ಏನೇ ಆರೋಪ ಮಾಡಿದರೂ ಜನರು ನಿಮ್ಮ ಸುಳ್ಳುಗಳನ್ನು ನಂಬುವುದಿಲ್ಲ. ಅಧಿಕಾರ ಕಳೆದುಕೊಂಡು ಹತಾಶರಾಗಿರುವ ನೀವು ್ಯ ಮನಬಂದAತೆ ಮಾತನಾಡುತ್ತಿದ್ದೀರಾ. ಇಂತಹ ಅಪಪ್ರಚಾರ ಮಾಡುವ ಬದಲು ಉಪಚುನಾವಣೆಯ ಅಖಾಡಕ್ಕೆ ಬನ್ನಿ. ನಿಮ್ಮ ಯೋಗ್ಯತೆ ಏನೆಂಬುದು ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಪ್ರಚಾರಕ್ಕಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿ ಇರುವವರೆಗೂ ಆ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಖಾಯಂ ಆಗಿಯೇ ಪ್ರತಿಪಕ್ಷದ ಸ್ಥಾನ ಸಿಗಲಿದೆ ಎಂದು ವ್ಯಂಗ್ಯವಾಡಿದರು.
ಮೂರುವರೆ ವರ್ಷ ಇನ್ನು ಪ್ರತಿಪಕ್ಷದ ಸ್ಥಾನದಲ್ಲಿ ಕೂರಬೇಕಾಗುತ್ತದೆ ಎಂದು ಹತಾಶರಾಗಿ ಸಿದ್ದರಾಮಯ್ಯ ಮನಬಂದಂತೆ ಮಾತನಾಡುತ್ತಾರೆ. ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿರುವುದು ಮೂರ್ಖತನದ ಪರಮಾವಧಿ ಎಂದು ಕಿಡಿಕಾರಿದರು.
ನಿಮ್ಮ ನಾಯಕತ್ವದಲ್ಲೇ ಲೋಕಸಭೆ ಚುನಾವಣೆ ನಡೆಯಿತು.ನಿಮ್ಮ ಯೋಗ್ಯತೆಗೆ ಒಂದು ಸ್ಥಾನ ಗೆದ್ದಿದ್ದೀರ. ನೀವು ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕಿತ್ತು. ನಿಮ್ಮಂಥವರನ್ನು ಪ್ರತಿಪಕ್ಷದ ನಾಯಕರನ್ನಾಗಿ ಹೇಗೆ ಮಾಡಿತೋ ಗೊತ್ತಿಲ್ಲ. ಕಾಂಗ್ರೆಸ್ಗೆ ಕೊನೆ ಮೊಳೆ ಹೊಡೆಯುವುದು ನೀವೇ ಎಂದು ವ್ಯಂಗ್ಯವಾಡಿದರು.
ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಅವರು ತಮ್ಮದೇ ಆದ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇದನ್ನು ಸುಪ್ರೀಂ ಕೋರ್ಟ್ ಗಮನಕ್ಕೂ ತಂದಿದ್ದಾರೆ.ಇನ್ನೇನು ತೀರ್ಪು ಪ್ರಕಟವಾಗಲಿದೆ ಎಂಬ ಸಂದರ್ಭದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದೀರಿ ಇದು ನಿಮಗೆ ಶೋಭೆ ತರುತ್ತದೆಯೇ ಎಂದು ಪ್ರಶ್ನಿಸಿದರು.
ನೆರೆ ಸಂತ್ರಸ್ತರಿಗೆ ಸರ್ಕಾರ ಕೈಗೊಂಡಿರುವ ಪರಿಹಾರ ಕಾರ್ಯವನ್ನು ಜಾಹಿರಾತಿನಲ್ಲಿ ನೀಡಿದರೆ ಅದಕ್ಕೂ ಟೀಕೆ ಮಾಡುತ್ತೀರಿ, ನಾವು ನೀಡಿರುವ ಲೆಕ್ಕ ಸರಿಯಿಲ್ಲ ಎಂದರೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳ ಜೊತೆ ಮಾಹಿತಿ ಪಡೆಯಬಹುದು. ಸಂತ್ರಸ್ತರಲ್ಲೂ ಏಕೆ ಗೊಂದಲ ಸೃಷ್ಟಿಸುತ್ತೀರಿ ಎಂದು ಪ್ರಶ್ನೆ ಮಾಡಿದರು.
ಅನರ್ಹರು ಶಾಸಕ ಸ್ಥಾನಕ್ಕೆ ಏಕೆ ರಾಜೀನಾಮೆ ನೀಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು.ಅವರು ನಿಯಮಬದ್ಧವಾಗಿ ರಾಜೀನಾಮೆ ಕೊಟ್ಟಿದ್ದನ್ನು ನೀವು ಅಂಗೀಕರಿಸಿದ್ದರೆ ಈ ಗೊಂದಲ ಸೃಷ್ಟಿಯಾಗುತ್ತಿರಲಿಲ್ಲ.ಅಂದಿನ ವಿಧಾನಸಭೆ ಸ್ಪೀಕರ್ ರಮೇಶ್ಕುಮಾರ್ ಮತ್ತು ಸಿದ್ದರಾಮಯ್ಯ ಪಿತೂರಿ ನಡೆಸಿ ರಾಜೀನಾಮೆ ಪತ್ರವನ್ನೇ ಅಂಗೀಕರಿಸಲಿಲ್ಲ. ಪುನಃ ರಾಜೀನಾಮೆ ಕೊಟ್ಟರೂ ನಿಯಮಬದ್ದವಾಗಿ ನೀಡಿಲ್ಲ ಎಂದು ಆಕ್ಷೇಪಿಸಿದ್ದೀರಿ.೧೭ ಮಂದಿ ಶಾಸಕರನ್ನು ಯಾವ ಪುರುಷಾರ್ಥಕ್ಕೆ ಅನರ್ಹ ಮಾಡಿದಿರಿ ಎಂದು ಯಡಿಯೂರಪ್ಪ ಪ್ರಶ್ನಿಸಿದರು.
ಅನರ್ಹರು ಏಕೆ ರಾಜೀನಾಮೆ ಕೊಟ್ಟರು ಎಂಬುದು ಜಗತ್ತಿಗೆ ಗೊತ್ತು. ನಾನು ಮಾತನಾಡಿರುವುದನ್ನು ತಿರುಚಲು ಹೊರಟ್ಟೀದ್ದೀರಿ. ಉಪಚುನಾವಣೆಗೂ ಮುನ್ನ ಜನತೆಯಲ್ಲಿ ಗೊಂದಲ ಸೃಷ್ಟಿಸಿ ಅದರ ಲಾಭ ಪಡೆಯಬಹುದೆಂಬ ಸಿದ್ದರಾಮಯ್ಯನವರ ಲೆಕ್ಕಾಚಾರ. ನೀವು ಯಾವ ಕಾರಣಕ್ಕೂ ಯಶಸ್ವಿಯಾಗುವುದಿಲ್ಲ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುವ ಕನಸನ್ನು ಕೈ ಬಿಡಲಿ ಎಂದು ವ್ಯಂಗ್ಯವಾಡಿದರು.
ನಾನು ವಿಡಿಯೋದಲ್ಲಿ ಏನು ಮಾತನಾಡಿದ್ದೀನಿ ಎಂಬುದು ನನಗೆ ಗೊತ್ತು. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಮಾತನಾಡಿರುವುದನ್ನು ಯಾರೂ ಚಿತ್ರೀಕಿಸಿದರೂ ಎಂಬುದು ಗೊತ್ತಿಲ್ಲ. ನನ್ನ ಹೇಳಿಕೆಯಿಂದ ನ್ಯಾಯಾಲಯದಲ್ಲಿ ಅನರ್ಹರಿಗೆ ಯಾವುದೇ ರೀತಿಯ ಹಿನ್ನಡೆ ಉಂಟಾಗುವುದಿಲ್ಲ. ಖಂಡಿತ ಅವರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ. ನ್ಯಾಯಾಲಯದ ತೀರ್ಪು ಬಂದ ಬಳಿಕ ಅವರು ಕಾಂಗ್ರೆಸ್, ಜೆಡಿಎಸ್ಸೋ ಅಥವಾ ಸ್ವತಂತ್ರವಾಗಿ ಸ್ಪರ್ಧಿಸುತ್ತಾರೆ ಅದು ಅವರಿಗೆ ಸಂಬAಧಿಸಿದ ವಿಷಯ. ಇದರಲ್ಲಿ ನಮ್ಮ ಪಾತ್ರವೇನಿಲ್ಲ ಎಂದು ಪುನರುಚ್ಚರಿಸಿದರು.