ನಿವಾಸದಿಂದಲೇ ಸಹಾಯವಾಣಿ ಮೂಲಕ ರೈತರಿಗೆ ಬೆಳೆ ಸಾಲಮನ್ನಾದ ಮಾಹಿತಿ-ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ನ.೪- ರೈತರ ಅನುಕೂಲಕ್ಕಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೆಳೆ ಸಾಲ ಮನ್ನಾ ಸಹಾಯವಾಣಿಯನ್ನು ಆರಂಭಿಸಿದ್ದಾರೆ. ತಮ್ಮ ನಿವಾಸದಿಂದಲೇ ಸಹಾಯವಾಣಿ ಮೂಲಕ ರೈತರಿಗೆ ಬೆಳೆ ಸಾಲಮನ್ನಾದ ಮಾಹಿತಿ ಒದಗಿಸುತ್ತಿದ್ದಾರೆ.

ಇದಕ್ಕಾಗಿ ಸಹಾಯವಾಣಿ ೯೧೬೪೩೦೫೮೬೮ ತೆರೆದಿದ್ದಾರೆ. ಬೆಳಗ್ಗೆ ೧೦ ರಿಂದ ಸಂಜೆ ೫ರ ವರೆಗೂ ರೈತರು ಕರೆ ಮಾಡಿ ತಮ್ಮ ಬೆಳೆ ಸಾಲ ಮನ್ನವಾಗಿರುವ ವಿಚಾರಕ್ಕೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಪಡೆಯಬಹುದು ಎಂದು ಕುಮಾರಸ್ವಾಮಿ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ಪ್ರತಿದಿನ ನೂರಾರು ರೈತರು ತಮ್ಮ ಬೆಳೆ ಸಾಲಮನ್ನಾ ವಿಚಾರವಾಗಿ ಮಾಹಿತಿ ಪಡೆಯಲು ನನ್ನ ಮನೆಗೆ ಬರುತ್ತಿದ್ದಾರೆ. ದೂರದ ಊರಿನಿಂದ ಬರುವ ರೈತರಿಗೆ ಕಷ್ಟವಾಗಬಾರದು ಎಂಬ ಉದ್ದೇಶದಿಂದ ಸಹಾಯವಾಣಿಯನ್ನು ಆರಂಭಿಸಲಾಗಿದೆ. ರೈತರು ತಮ್ಮ ಊರಿನಿಂದಲೇ ಸಹಾಯವಾಣಿಗೆ ಕರೆ ಮಾಡಿ ಸೂಕ್ತ ಮಾಹಿತಿ ನೀಡಿ ಬೆಳೆ ಸಾಲಮನ್ನಾದ ವಿವರ ಪಡೆಯಬಹುದಾಗಿದೆ ಎಂದಿದ್ದಾರೆ.

ರೈತರ ಓಲೈಕೆ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ರೈತರ ಬೆಳೆ ಸಾಲಮನ್ನಾ ಮಾಡಲಾಗಿದ್ದು, ಸಾಲಮನ್ನಾದ ಪ್ರಯೋಜನ ಪಡೆದ ರೈತರನ್ನು ಓಲೈಸಲು ಜೆಡಿಎಸ್ ಮುಂದಾಗಿದೆ. ರಾಜ್ಯಾದ್ಯಂತ ಬೆಳೆ ಸಾಲಮನ್ನಾ ಪಡೆದ ರೈತರ ದೂರವಾಣಿ ಸಹಿತ ಮಾಹಿತಿಯನ್ನು ಕಲೆ ಹಾಕಲಾಗಿದೆ.

ಪ್ರತಿ ತಾಲ್ಲೂಕು ಹಾಗೂ ಜಿಲ್ಲಾವಾರು ಸಾಲಮನ್ನಾ ಪಡೆದ ರೈತರ ಮಾಹಿತಿಯ ಕೈಪಿಡಿಗಳನ್ನು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ನೀಡಲಾಗಿದೆ. ಸ್ಥಳೀಯವಾಗಿ ಸಾಲಮನ್ನಾ ಪ್ರಯೋಜನ ಪಡೆದ ರೈತರನ್ನು ಸಂಪರ್ಕಿಸಿ ಎಷ್ಟು ಸಾಲಮನ್ನಾ ಆಗಿದೆ ಎಂಬ ಮಾಹಿತಿಯನ್ನು ರೈತರಿಗೆ ನೀಡಿ ಅವರ ಮನ ಗೆಲ್ಲುವ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ. ಅಲ್ಲದೆ, ಕುಮಾರಸ್ವಾಮಿ ಅವರ ಶುಭಾಶಯದ ಸಂದೇಶಗಳನ್ನು ಹಬ್ಬ, ಉತ್ಸವದ ಸಂದರ್ಭದಲ್ಲಿ ಮೊಬೈಲ್ ಮೂಲಕ ಸಾಲಮನ್ನಾದ ಫಲಾನುಭವಿಗಳಿಗೆ ಕಳುಹಿಸುತ್ತಿದ್ದಾರೆ.

ಹಿರಿಯ ಮುಖಂಡರು ನಿರಾಸಕ್ತಿ ತೋರಿದರೆ ಇಲ್ಲವೆ ಬೇರೆ ಪಕ್ಷದ ಕಡೆ ಮುಖ ಮಾಡಿದರೂ ಕೂಡ ಧೃತಿಗೆಡಬೇಕಾಗಿಲ್ಲ. ಪ್ರತಿ ಊರು, ಹೋಬಳಿ, ತಾಲ್ಲೂಕಿನಲ್ಲೂ ಸಾಲಮನ್ನಾ ಪಡೆದ ರೈತ ಕುಟುಂಬಗಳಿವೆ. ಆ ಕುಟುಂಬಗಳನ್ನು ಸಂಪರ್ಕಿಸಿ ಜೆಡಿಎಸ್ ಸದಸ್ಯತ್ವ ಪಡೆಯುವಂತೆ ಮನವಿ ಮಾಡುವುದರ ಜತೆಗೆ ಮುಂದಿನ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸಲು ಪಕ್ಷದ ಕಾರ್ಯಕರ್ತರಿಗೆ ಜೆಡಿಎಸ್ ವರಿಷ್ಠರು ನಿರ್ದೇಶನ ನೀಡಿದ್ದಾರೆ.

ಮುಂಬರುವ ಚುನಾವಣೆಗೆ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಿ ಬೆಳೆ ಸಾಲ ಮನ್ನಾದ ಪೂರ್ಣ ಲಾಭ ಪಡೆಯುವ ಪ್ರಯತ್ನವನ್ನು ಜೆಡಿಎಸ್ ಮಾಡತೊಡಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ