ಬೆಂಗಳೂರು,ನ.೩-ಬಿಜೆಪಿ ಕಚೇರಿಯಲ್ಲಿ ಬಿ.ಎಸ್. ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿದ್ದಾಗ ನೇಮಕಗೊಂಡಿದ್ದ ಯಾರಿಗೂ ಉಳಿಗಾಲ ಇಲ್ಲದಂತಾಗಿದೆ. ಪದಾಧಿಕಾರಿಗಳ ನಂತರ ಕಚೇರಿಯಿಂದ ಹೊರಹೋಗುವ ಸರದಿ ಈಗ ರಕ್ಷಣಾ ಸಿಬ್ಬಂದಿಗಳದ್ದಾಗಿದೆ.
ಶನಿವಾರವಷ್ಟೇ ಬಿಜೆಪಿ ಮಾಧ್ಯಮ ಸಂಚಾಲಕ ಹುದ್ದೆಯಿಂದ ಶಾಂತಾರಾಮ್ ಅವರನ್ನು ಕೈಬಿಟ್ಟ ಬೆನ್ನಲ್ಲೇ ಇಂದು ನಾಲ್ವರು ಸೆಕ್ಯುರಿಟಿ ಗಾರ್ಡ್ಗಳನ್ನು ಸೇವೆಯಿಂದ ಮುಕ್ತಗೊಳಿಸಲಾಗಿದೆ.
ಹಗಲಿನ ವೇಳೆ ಭದ್ರತೆಗೆ ಕ್ಯಾಡ್ ಮನ್ ಸಂಸ್ಥೆಯ ಎಜೆನ್ಸಿಯ ೬ ಜನ ಸಿಬ್ಬಂದಿ ನಿಯೋಜನೆ ಮಾಡಿದ್ದು, ರಾತ್ರಿ ವೇಳೆ ೪ ಸಿಬ್ಬಂದಿ ನಿಯೋಜಿಸಲಾಗಿತ್ತು.
೧೦ ಸಿಬ್ಬಂದಿಯಲ್ಲಿ ಬಿಎಸ್ವೈ ರಾಜ್ಯಾಧ್ಯಕ್ಷರಾಗಿದ್ದ ವೇಳೆ ನೇಮಕಗೊಂಡ ನಾಲ್ವರು ಸೆಕ್ಯೂರಿಟಿ ಸಿಬ್ಬಂದಿಯನ್ನು ಸೇವೆಯಿಂದ ಮುಕ್ತಗೊಳಿಸಲಾಗಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಸೂಚನೆ ಮೇರೆಗೆ ಹೊಸ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ತಿಳಿದುಬಂದಿದೆ.