ಬೆಂಗಳೂರು, ನ.೩-ಗಾಂಧೀಜಿಯವರ ಸ್ವಚ್ಛ ಭಾರತ ಪರಿಕಲ್ಪನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನನಸು ಮಾಡಲು ಮುಂದಾಗಿದ್ದು, ಇದಕ್ಕೆ ನಾವೆಲ್ಲಾ ಕೈಜೋಡಿಸುವ ಪಣತೊಡಬೇಕಾಗಿದೆ ಎಂದು ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಕರೆ ನೀಡಿದ್ದಾರೆ.
ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಮಹಾತ್ಮ ಗಾಂಧಿ ಸಂಕಲ್ಪ ಯಾತ್ರೆಗೆ ಯಡಿಯೂರು ಗಣೇಶ ದೇವಾಲಯದ ಬಳಿ ಗೋಪೂಜೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಗಾಂಧೀಜಿಯವರ ೧೫೦ ನೇ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಮ್ಮಿಕೊಂಡಿರುವ ಸ್ವಚ್ಛತಾ ಅಭಿಯಾನಕ್ಕೆ ನಾವೆಲ್ಲರೂ ಕೈಜೋಡಿಸಬೇಕಾಗಿದ್ದು, ಈ ಮೂಲಕ ನಮ್ಮ ನಗರವನ್ನು ಸ್ವಚ್ಛವಾಗಿಡುವುದರೊಂದಿಗೆ ಪರಿಸರ ಕಾಪಾಡುವ ಪಣತೊಡಬೇಕಾಗಿದೆ ಎಂದು ಹೇಳಿದರು.
ಸ್ವಚ್ಛತೆಯ ಬಗ್ಗೆ ಜನಜಾಗೃತಿ ಹಾಗೂ ಏಕ ಬಳಕೆ ಪ್ಲಾಸ್ಟಿಕ್ ಬಳಸುವುದನ್ನು ಕಡಿಮೆ ಮಾಡುವ ಬಗ್ಗೆ ಜಾಗೃತಿ ಮೂಡಿಸುವುದು ಸಂಕಲ್ಪ ಯಾತ್ರೆಯ ಉದ್ದೇಶವಾಗಿದ್ದು , ಇದರೊಂದಿಗೆ ಮೋದೀಜಿಯವರ ಜನಪರ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕಿದೆ ಎಂದರು.
ಯಡಿಯೂರು , ಕರೇಸಂದ್ರ ,ಗಣೇಶ ಮಂದಿರ ವಾರ್ಡ ಮೂಲಕ ಸಂಚರಿಸಿದ ಪಾದಯಾತ್ರೆ ಬನಶಂಕರಿ ವಾರ್ಡ್ ವರೆಗೆ ಸಂಚರಿಸಿತು.
ಪಾದಯಾತ್ರೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್,ಪಾಲಿಕೆ ಸದಸ್ಯರಾದ ಪೂರ್ಣಿಮಾ ರಮೇಶ್, ಉಮೇಶ್, ಬಿಜೆಪಿ ಮುಖಂಡರಾದ ಎನ್.ಆರ್. ರಮೇಶ್, ಉಮೇಶ್, ಬಸವರಾಜ್ ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.