ಬೆಂಗಳೂರು,ನ.೩- ಮುಂಬರುವ ವಿಧಾನಸಭೆ ಉಪಚುನಾವಣೆಗೆ ದಿಕ್ಸೂಚಿ ಎಂದೇ ಪರಿಗಣಿಸಲಾಗಿರುವ ರಾಜ್ಯದ ೧೪ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಲ್ಲಿಸಲಾಗಿರುವ ನಾಮಪತ್ರಗಳನ್ನು ವಾಪಸ್ಪಡೆಯಲು ನಾಳೆ ಕಡೆಯ ದಿನವಾಗಿದೆ.
ಅಕ್ಟೋಬರ್ ೨೪ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ನಿನ್ನೆ ನಾಮಪತ್ರಗಳ ಪರಿಶೀಲನೆ ನಡೆದಿದ್ದು,ಕ್ರಮಬದ್ಧವಾಗಿರುವ ನಾಮಪತ್ರಗಳಪಟ್ಟಿಯನ್ನು ಆಯಾ ಚುನಾವಣಾಧಿಕಾರಿಗಳು ಪ್ರಕಟಿಸಿದ್ದಾರೆ.
ವಿವಿಧ ರಾಜಕೀಯ ಪಕ್ಷಗಳು ಸೇರಿದಂತೆ ನಗರಸ್ಥಳೀಯ ಸಂಸ್ಥೆಗೆ ಉಮೇದುವಾರಿಕೆ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆಯಲು ಇನ್ನೊಂದು ದಿನ ಮಾತ್ರ ಬಾಕಿ ಉಳಿದಿದೆ.
ನಾಳೆ ಸಂಜೆ ವೇಳೆಗೆ ಚುನಾವಣೆಯ ಕಣದಲ್ಲಿ ಉಳಿಯುವ ಅಂತಿಮ ಪಟ್ಟಿಯನ್ನು ಆಯಾ ಚುನಾವಣಾಧಿಕಾರಿಗಳು ಪ್ರಕಟಿಸಲಿದ್ದಾರೆ. ಹೀಗಾಗಿ ವಿವಿಧ ರಾಜಕೀಯ ಪಕ್ಷಗಳ ನಡುವೆ ನಗರಸ್ಥಳೀಯ ಸಂಸ್ಥೆಗಳ ಚುನಾವಣೆ ಕಣ ರಂಗೇರಗೊಡಗಿದೆ.
ಕಾಂಗ್ರೆಸ್,ಜೆಡಿಎಸ್,ಬಿಜೆಪಿ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಳ್ಳದೆ ಕ್ಷೇತ್ರದಲ್ಲಿ ಏಕಾಂಗಿಸ್ಪರ್ಧೆಗಿಳಿದಿವೆ. ಈ ಚುನಾವಣೆಯನ್ನು ಮೂರು ಪಕ್ಷಗಳು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ತಮ್ಮ ಅಭ್ಯರ್ಥಿಗಳ ಗೆಲುವಿಗೆ ಕಾರ್ಯತಂತ್ರಗಳನ್ನು ರೂಪಿಸಿವೆ.
ನ.೧೨ರಂದು ಮತದಾನ ನಡೆಯಲಿದ್ದು, ನ.೧೪ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ದಾವಣಗೆರೆ ಮತ್ತು ಮಂಗಳೂರು ಮಹಾನಗರ ಪಾಲಿಕೆ, ಕನಕಪುರ, ಕೋಲಾರ, ಮುಳಬಾಗಿಲು, ಕೆಜಿಎಫ್, ಗೌರಿಬಿದನೂರು, ಚಿಂತಾಮಣಿ ನಗರಸಭೆಗಳಿಗೆ ಚುನಾವಣೆ ನಡೆಯುತ್ತಿದೆ. ಹಾಗೆಯೇ ಮಾಗಡಿ , ಬಿರೂರು, ಕಂಪ್ಲಿ ಪುರಸಭೆಗಳಿಗೆ ಜೋಗ್-ಕಾರ್ಗಲ್, ಕುಂದಗೋಳ ಹಾಗೂ ಕೂಡ್ಲಿಗಿ ಪಟ್ಟಣ ಪಂಚಾಯ್ತಿಗಳಿಗೆ ಚುನಾವಣೆ ನಡೆಯಲಿದೆ.
೧೪ ನಗರಸ್ಥಳೀಯ ಸಂಸ್ಥೆಗಳ ೪೧೮ ವಾರ್ಡ್ಗಳಿಗೆ ಚುನಾವಣೆ ನಡೆಯಲಿದ್ದು, ರಾಜ್ಯ ಚುನಾವಣಾ ಆಯೋಗ ೧೩೮೮ ಮತಗಟ್ಟೆಗಳನ್ನು ತೆರೆದಿದೆ. ೧೩,೦೪,೬೧೪ ಮಂದಿ ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.
ಇದೇ ಸಂದರ್ಭದಲ್ಲಿ ಐದು ನಗರಸ್ಥಳೀಯ ಸಂಸ್ಥೆಗಳ ಐದು ವಾರ್ಡ್ಗಳಿಗೆ ಉಪಚುನಾವಣೆಯು ನಡೆಯುತ್ತಿದೆ. ವಿವಿಧ ಕಾರಣಗಳಿಂದ ತೆರವಾಗಿರುವ ಒಂದು ಜಿಲ್ಲಾಪಂಚಾಯ್ತಿ,೪ ತಾಲ್ಲೂಕು ಪಂಚಾಯ್ತಿ ಹಾಗೂ ೨೧೩ ಗ್ರಾಪಂ ಸದಸ್ಯ ಸ್ಥಾನಗಳಿಗೂ ಉಪಚುನಾವಣೆ ನಡೆಯುತ್ತಿದೆ. ಈ ಕ್ಷೇತ್ರಗಳಲ್ಲೂ ನಾಮಪತ್ರ ವಾಪಸ್ ಪಡೆಯಲು ನಾಳೆ ಕಡೆಯ ದಿನವಾಗಿದೆ.