ಬೆಂಗಳೂರು,ನ.೩- ದೇಶವನ್ನು ಅಧೋಗತಿಗೆ ತಲುಪಿಸಿದ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಕಾಂಗ್ರೆಸ್ ವಿವಿಧ ಹಂತಗಳಲ್ಲಿ ರಾಜ್ಯಾದ್ಯಂತ ಚೈತನ್ಯ ಸಮಾವೇಶ ಹಾಗೂ ಸ್ವಾಭಿಮಾನಿ ಸಮಾವೇಶಗಳನ್ನು ಆಯೋಜನೆ ಮಾಡುತ್ತಿದೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಪ್ರತಿಭಟನೆಯ ವಿವರಗಳನ್ನು ನೀಡಿದರು.
ನೋಟ್ ಬ್ಯಾನ್‌ನಿಂದಾಗಿ ದೇಶದ ಆರ್ಥಿಕ ಸ್ಥಿತಿ ಹಾಳಾಯಿತು. ಚೇತರಿಸಿಕೊಳ್ಳುವ ಮುನ್ನವೇ ಆರು ತಿಂಗಳಲ್ಲೇ ಜಿಎಸ್‌ಟಿ ಪದ್ದತಿಯನ್ನು ಜಾರಿಗೆ ತರಲಾಗಿದೆ. ಈ ಎರಡೂ ನಿರ್ಧಾರಗಳಿಂದ ಆರ್ಥಿಕ ವ್ಯವಸ್ಥೆ ಕುಸಿದು ಹೋಗಿದೆ. ಈಗ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ(ಆರ್‌ಸಿಇಪಿ) ಒಪ್ಪಂದಕ್ಕೆ ಸಹಿ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕುವುದಲ್ಲದೆ ಆರ್ಥಿಕತೆಯ ಸಂಪೂರ್ಣ ನಾಶವಾಗಲಿದೆ ಎಂದು ಎಚ್ಚರಿಸಿದರು.
ಕೇಂದ್ರದ ಆರ್ಥಿಕ ನೀತಿಗಳ ವಿರುದ್ದ ಕಾಂಗ್ರೆಸ್ ನಾಳೆ ಕುಂದಗೋಳದಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸುತ್ತಿದೆ. ನ.೫ರಂದು ಶಿವಮೊಗ್ಗದಲ್ಲಿ, ೭ರಂದು ಹಾಸನದಲ್ಲಿ, ೧೨ರಂದು ಬಿಜಾಪುರದಲ್ಲಿ, ೧೩ರಂದು ರಾಯಚೂರಿನಲ್ಲಿ , ೧೪ರಂದು ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಲಿದ್ದು, ನ.೧೧ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿದ್ದು, ರಾಜ್ಯಾದ್ಯಂತ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ನ.೯ರಂದು ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯಲಿವೆ.
ಆರ್‌ಸಿಇಪಿಯಿಂದ ತೊಂದರೆಗೊಳಗಾಗುವ ಹೈನುಗಾರಿಕೆ ಹೆಚ್ಚಿರುವ ಕೋಲಾರ, ಹಾಸನ, ತುಮಕೂರು ಜಿಲ್ಲೆಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ ಆಯೋಜನೆ ಮಾಡಿದೆ ಎಂದು ಅವರು ತಿಳಿಸಿದರು.
೧೬ ವರ್ಷದಲ್ಲೇ ಅತ್ಯಂತ ಕಡಿಮೆ ಖಾಸಗಿ ಬಂಡವಾಳ ಹೂಡಿಕೆ ಮೋದಿ ಅವರ ಸರ್ಕಾರದ ಅವಧಿಯಲ್ಲಾಗಿದೆ.ಕೈಗಾರಿಕಾ ಬೆಳವಣಿಗೆ ಶೇ.೧.೧ಕ್ಕೆ ಕುಸಿದಿದೆ.
ಉತ್ಪಾದನೆಯ ಪ್ರಮಾಣವೂ ಕುಸಿತಗೊಂಡಿದೆ.ರಫ್ತು ೬.೬ಕ್ಕೆ ಇಳಿಕೆಯಾಗಿದೆ. ಬ್ಯಾಂಕ್‌ಗಳಲ್ಲಿ ಅನುತ್ಪಾದಕ ಆಸ್ತಿಯ ಪ್ರಮಾಣ ೮ ಲಕ್ಷ ಕೋಟಿ ದಾಟಿದೆ. ಮೋದಿ ಆಡಳಿತದಲ್ಲಿ ಹಲವಾರು ಉದ್ಯಮಿಗಳು ಸುಮಾರು ೧.೭೪ ಲಕ್ಷ ಕೋಟಿ ಬ್ಯಾಂಕ್ ಸಾಲವನ್ನು ಮರು ಪಾವತಿಸದೆ ವಿದೇಶಕ್ಕೆ ಪರಾರಿಯಾಗಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಕಳೆದ ವರ್ಷ ೧.೯೦ ಲಕ್ಷ ಕೋಟಿ ಆರ್ಥಿಕತೆಯ ಕೊರತೆಯನ್ನು ಎದುರಿಸಿತ್ತು. ಈ ವರ್ಷ ಅದು ೨ ಲಕ್ಷ ಕೋಟಿ ದಾಟುವ ನಿರೀಕ್ಷೆ ಇದೆ ಎಂದರು.
ಆರ್ಥಿಕತೆಯ ಸುಧಾರಣೆಗಾಗಿ ಆರ್‌ಬಿಐನಲ್ಲಿ ಮೀಸಲಿದ್ದ ೧.೭೬ ಲಕ್ಷ ಕೋಟಿಯನ್ನು ಕೇಂದ್ರ ಸರ್ಕಾರ ಬಳಕೆ ಮಾಡಿಕೊಂಡಿದೆ. ಈಗ ಚಿನ್ನ ಮಾರಾಟ ಮಾಡಲು ಮುಂದಾಗಿದೆ. ಈಗ ಕಾರ್ಪೋರೇಟ್ ತೆರಿಗೆ ಕಡಿಮೆ ಮಾಡಿರುವುದರಿಂದ ಸಂಪನ್ಮೂಲ ಕ್ರೂಢೀಕರಣದಲ್ಲಿ ಶೇ.೧೬ರಷ್ಟು ಕುಸಿತವಾಗುವ ಸಾಧ್ಯತೆ ಇದೆ.
ಕೃಷಿ ಬೆಳವಣಿಗೆ ಶೇ.೨ಕ್ಕೆ ಇಳಿದಿದೆ. ಇಂತಹ ಸಂದರ್ಭದಲ್ಲಿ ಮತ್ತಷ್ಟು ಅನಾಹುತಕಾರಿ ತೀರ್ಮಾನಗಳನ್ನು ಮೋದಿ ಸರ್ಕಾರ ತೆಗೆದುಕೊಳ್ಳಲು ಹೊರಟಿರುವುದು ದೇಶದ ಆರ್ಥಿಕತೆಗೆ ಗಂಡಾಂತರ ಉಂಟು ಮಾಡುತ್ತಿದೆ ಎಂದು ದಿನೇಶ್ ಗುಂಡೂರಾವ್ ಆತಂಕ ವ್ಯಕ್ತಪಡಿಸಿದರು.