ಡಿ.ಕೆ.ಶಿವಕುಮಾರ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಂಗಳೂರು,ನ.೩- ಕಳೆದೆರಡು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಕಾಂಗ್ರೆಸ್‌ನ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇಂದು ಡಿಸ್ಚಾರ್ಜ್ ಆಗಿದ್ದಾರೆ.

ಅಧಿಕ ರಕ್ತದೊತ್ತಡ ಮತ್ತು ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದ ಡಿ.ಕೆ.ಶಿವಕುಮಾರ್ ಅವರು ನ.೧ರಂದು ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಆಸ್ಪತ್ರೆಯ ವೈದ್ಯರಾದ ಡಾ.ಶಂಕರ್ ಅವರು ಡಿ.ಕೆ.ಶಿವಕುಮಾರ್‌ಗೆ ಚಿಕಿತ್ಸೆ ನೀಡಿದರು.ಡಿ.ಕೆ.ಶಿವಕುಮಾರ್ ಅವರ ಪ್ಲೇಟ್ಲೇಟ್ ಪ್ರಮಾಣ ೮೮ ಸಾವಿರಕ್ಕೆ ಕುಸಿದಿತ್ತು. ಹೀಗಾಗಿ ಡೆಂಘೀ ಜ್ವರದ ಆತಂಕವೂ  ಎದುರಾಗಿತ್ತು. ಕಳೆದೆರಡು ದಿನಗಳಿಂದ ನಿರಂತರ ಪರೀಕ್ಷೆ ಹಾಗೂ ಚಿಕಿತ್ಸೆಯಿಂದಾಗಿ ಡಿ.ಕೆ.ಶಿವಕುಮಾರ್ ಚೇತರಿಸಿಕೊಂಡಿದ್ದಾರೆ. ರಕ್ತ ಪರೀಕ್ಷೆಯಿಂದ ಡಿ.ಕೆ.ಶಿವಕುಮಾರ್‌ಗೆ  ಡೆಂಘೀ ಜ್ವರ ಇಲ್ಲ ಎಂದು ಖಚಿತವಾಗಿದೆ.

ಇಂದು ಬೆಳಗ್ಗೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.

ಮನೆಗೆ ತೆರಳುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು,  ನನಗೆ ವೈದ್ಯರು ಎರಡು ತಿಂಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಸದ್ಯಕ್ಕೆ ನಾನು ವಿಶ್ರಾಂತಿ ಪಡೆಯಬೇಕು.ಏನನ್ನೂ ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ