ಬೆಂಗಳೂರು,ನ.೩-ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭರತನಾಟ್ಯ ನೋಡುವ ಸಲುವಾಗಿ ತಮ್ಮ ಭಾಷಣವನ್ನೇ ಮುಂದೂಡಿದ ಪ್ರಸಂಗ ನಗರದ ಜೆಎನ್ ಟಾಟಾ ಆಡಿಟೋರಿಯಂನಲ್ಲಿ ನಡೆದಿದೆ.
ಅಗ್ನಿವಹ್ನಿಕುಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಡಿಯೂರಪ್ಪ ಅವರು ಅಗ್ನಿ ಪುಸ್ತಕವನ್ನು ಬಿಡುಗಡೆ ಮಾಡಿದರು. ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವಂತೆ ಆಯೋಜಕರು ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಿದರು.
ಆದರೆ ಈ ಸಂದರ್ಭದಲ್ಲಿ ಭರತನಾಟ್ಯ ಕಲಾವಿದೆಯೊಬ್ಬರು ನೃತ್ಯ ಪ್ರದರ್ಶನ ಮಾಡಲು ಸಿದ್ದರಾಗಿ ನಿಂತಿದ್ದರು. ಅವರ ನೃತ್ಯವನ್ನು ತಡೆ ಹಿಡಿದು ಯಡಿಯೂರಪ್ಪನವರು ಮಾತನಾಡಬೇಕೆಂದು ಆಯೋಜಕರು ಹೇಳಿದರು.
ಅದನ್ನು ಒಪ್ಪದೆ ರೀ..ಮೊದಲು ಭರತನಾಟ್ಯ ಆಗಲಿ ಆಮೇಲೆ ನಾನು ಮಾತನಾಡುತ್ತೇನೆ ಎಂದು ಯಡಿಯೂರಪ್ಪ ಸೂಚಿಸಿದರು.
ಮುಖ್ಯಮಂತ್ರಿಯವರ ಕಲಾಭಿರುಚಿ ಕಂಡು ಸಭಾಂಗಣದಲ್ಲಿ ನಗುವಿನ ಅಲೆ ಎದ್ದಿತು. ಯಡಿಯೂರಪ್ಪನವರ ಆಶಯದಂತೆ ಮೊದಲು ನೃತ್ಯ ಪ್ರದರ್ಶನ ನಡೆದು ನಂತರ ಭಾಷಣ ಮುಂದುವರೆಯಿತು.