ಬೆಂಗಳೂರು, ನ.೩- ವೃಷಭಾವತಿ ನದಿ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವುದಾಗಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ ಪಾಟೀಲ್ ಭರವಸೆ ನೀಡಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಅದಮ್ಯ ಚೇತನ ಸಂಸ್ಥೆ ಆಯೋಜಿಸಿದ್ದ ೨೦೧ನೇ ಹಸಿರು ಭಾನುವಾರ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾಕಾಶಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಕಪ್ಪು ಚುಕ್ಕೆಯಾಗಿರುವ ವೃಷಭಾವತಿ ಕೊಳಚೆ ನೀರನ್ನು ಶುಚಿಗೊಳಿಸಲು ಎಸ್ಟಿಪಿ ಪ್ಲಾಂಟ್ ನಿರ್ಮಿಸಿಕೊಡಬೇಕೆಂಬ ವಿವಿ ಕುಲಪತಿ ಪ್ರೊ. ವೇಣುಗೋಪಾಲï ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ವೃಷಭಾವತಿಗೆ ಕಾಯಕಲ್ಪ ಕಲ್ಪಿಸುವುದಾಗಿ ತಿಳಿಸಿದರು. ವೃಷಭಾವತಿಯನ್ನು ಸ್ವಚ್ಛಗೊಳಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
ರಾಜ್ಯವನ್ನು ತಲ್ಲಣಗೊಳಿಸಿರುವ ಭಾರಿ ಪ್ರವಾಹಕ್ಕೆ ಅರಣ್ಯ ನಾಶ ಕಾರಣ ಎಂದು ಹೇಳಿದ ಸಚಿವರು, ಅರಣ್ಯವನ್ನು ಉಳಿಸಿ ಬೆಳೆಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ. ಒಂದೆಡೆ ಭೀಕರ ಬರಗಾಲ ಇನ್ನೊಂದೆಡೆ ಭಾರಿ ಪ್ರವಾಹ ಕಾಡುತ್ತಿದೆ. ಇದಕ್ಕೆ ಪರಿಸರನಾಶದಂತಹ ಮನುಷ್ಯನ ಸ್ವಯಂಕೃತ ಅಪರಾಧವೇ ಕಾರಣ ಹೊರತು ದೇವರ ಶಾಪವಲ್ಲ ಎಂದು ತಿಳಿಸಿದರು.
ಕಾರ್ಖಾನೆಗಳು ಉಗುಳುತ್ತಿರುವ ವಿಷವಾಯು ತಡೆಗಟ್ಟುವುದು ಸೇರಿದಂತೆ ಸಸಿಗಳನ್ನು ನೆಟ್ಟು ಪೋಷಿಸಲು ಮುಂದಾಗದಿರುವುದು ಪ್ರಾಕೃತಿಕ ವಿಕೋಪಕ್ಕೆ ಮೂಲ ಕಾರಣವಾಗಿದೆ. ಕಾಂಕ್ರೀಟ್ ಕಾಡು ಬೆಂಗಳೂರಿನಲ್ಲಿ ಸಸಿಗಳನ್ನು ನೆಟ್ಟು ಪೋಷಿಸಲು ಮುಂದಾಗಿರುವ ಅದಮ್ಯ ಚೇತನ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಪ್ರಶಂಸಿಸಿದರು.
ಎಲ್ಲ ಸಾಮಾಜಿಕ ಕಾರ್ಯಗಳಿಗೆ ಸರ್ಕಾರ ಹಾಗೂ ಇಲಾಖೆಯಿಂದ ಸಂಪೂರ್ಣ ಸಹಕಾರ ನೆರವು ನೀಡುವುದಾಗಿ ಇದೇ ವೇಳೆ ಭರವಸೆ ನೀಡಿದರು.
ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ಡಾ ತೇಜಸ್ವಿನಿ ಅನಂತ್ ಕುಮಾರ್, ಸದಸ್ಯ ಶ್ರೀಕೃಷ್ಣ ಸಂಪಂಗವ್ಕಾರ್ , ವಿವಿ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್, ಪ್ರೊ.ರೇಣುಕಾ ಪ್ರಸಾದ್, ನಾಗರತ್ನಮ್ಮ ಉಪಸ್ಥಿತರಿದ್ದರು.
ಮಾವು, ಹಲಸು, ಬೇವು ಹಾಗೂ ನೇರಳೆ ಸೇರಿದಂತೆ ೨೦೧ ಸಸಿಗಳನ್ನು ನೆಡಲಾಯಿತು .