ಬೆಂಗಳೂರು, ನ.1-ಭಾರೀ ಕುತೂಹಲ ಕೆರಳಿಸಿರುವ ಉಪಚುನಾವಣೆಯ ಎಂಟು ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಕಾಂಗ್ರೆಸ್ ಉಳಿದ ಏಳು ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸದೆ ಕುತೂಹಲ ಕೆರಳಿಸಿದೆ.
ಯಶವಂತಪುರ, ಶಿವಾಜಿನಗರ, ಕೆ.ಆರ್.ಪೇಟೆ, ಅಥಣಿ, ಗೋಕಾಕ್, ಕಾಗವಾಡ, ವಿಜಯನಗರ ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿಲ್ಲ. ಈ ಏಳೂ ಕ್ಷೇತ್ರಗಳು ಹೈವೋಲ್ಟೇಜ್ ಕ್ಷೇತ್ರಗಳಾಗಿದ್ದು, ಜಿದ್ದಾಜಿದ್ದಿನ ಕಣಗಳಾಗಿವೆ.
ಯಶವಂತಪುರದಲ್ಲಿ ಎಸ್.ಟಿ.ಸೋಮಶೇಖರ್ ಮರು ಆಯ್ಕೆ ಬಯಸಿ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.ಇವರ ವಿರುದ್ಧ ಪ್ರಭಾವಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಕಾಂಗ್ರೆಸ್ ಪ್ರಯತ್ನ ನಡೆಸಿತ್ತು.ಮಾಗಡಿಯ ಬಾಲಕೃಷ್ಣ ಅವರನ್ನು ಇಲ್ಲಿಗೆ ಕರೆತರುವ ಪ್ರಯತ್ನ ನಡೆಸಿತ್ತಾದರೂ ಅವರು ಒಪ್ಪಲಿಲ್ಲ. ಹೀಗಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ರಾಜ್‍ಕುಮಾರ್ ಅವರನ್ನು ಕಣಕ್ಕಿಳಿಸುವ ತಯಾರಿ ನಡೆದಿದೆ.
ಶಿವಾಜಿನಗರ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ.ಈ ಬಾರಿ ಕಾಂಗ್ರೆಸ್ ತೊರೆದು ಹೋಗಿರುವ ರೋಷನ್‍ಬೇಗ್ ಅವರು ಬಿಜೆಪಿ ಅಭ್ಯರ್ಥಿಯಾಗುವ ನಿರೀಕ್ಷೆಯಿದ್ದು, ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿ ತೊಡಗಿದೆ.
ಇಸ್ತಿಯಾಕ್ ಅಹಮ್ಮದ್, ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್, ಮನ್ಸೂರ್ ಅಲಿ ಖಾನ್, ಎಸ್.ಎ.ಹುಸೇನ್ ಮತ್ತಿತರರು ಟಿಕೆಟ್ ಆಕಾಂಕ್ಷಿಗಳಾಗಿದ್ದು, ಇಲ್ಲಿ ಯಾರನ್ನು ಕಣಕ್ಕಿಳಿಸಲಾಗುತ್ತದೆ ಎಂಬ ಕುತೂಹಲ ತೀವ್ರಗೊಂಡಿದೆ.
ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕ ಕೆ.ಆರ್.ಚಂದ್ರಶೇಖರ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಗೋಕಾಕ್‍ನಲ್ಲಿ ಜಾರಕಿ ಹೊಳಿ ಕುಟುಂಬದ ಲಖನ್ ಅವರನ್ನು , ಹೊಸಪೇಟೆಗೆ ಸೂರ್ಯನಾರಾಯಣರೆಡ್ಡಿ ಅವರನ್ನು, ಅಥಣಿಗೆ ಎ.ಬಿ.ಪಾಟೀಲ್ ಅವರನ್ನು ಹಾಗೂ ಪ್ರಕಾಶ್ ಹುಕ್ಕೇರಿ ಅವರನ್ನು ಕಾಗವಾಡದಲ್ಲಿ ಕಣಕ್ಕಿಳಿಸುವ ಸಾಧ್ಯತೆಗಳಿವೆ.
ಈಗಾಗಲೇ ಪ್ರಕಟಿಸಿರುವ ಪಟ್ಟಿಯಲ್ಲಿ ಯಲ್ಲಾಪುರಕ್ಕೆ ಭೀಮಣ್ಣನಾಯಕ್ ಅವರನ್ನು, ಹಿರೇಕೆರೂರಿಗೆ ಬಿ.ಎಚ್.ಬನ್ನಿಕೋಡ್ ಅವರನ್ನು, ರಾಣೆಬೆನ್ನೂರಿಗೆ ಕೆ.ಬಿ.ಕೋಳಿವಾಡ ಅವರನ್ನು,ಚಿಕ್ಕಬಳ್ಳಾಪುರಕ್ಕೆ ಎಂ.ಆಂಜನಪ್ಪ ಅವರನ್ನು, ಕೆ.ಆರ್.ಪುರಕ್ಕೆ ಎಂ.ನಾರಾಯಣಸ್ವಾಮಿ ಅವರನ್ನು, ಮಹಾಲಕ್ಷ್ಮಿಲೇಔಟ್‍ಗೆ ಎಂ.ಶಿವರಾಜ್ ಅವರನ್ನು , ಹೊಸಕೋಟೆಗೆ ಪದ್ಮಾವತಿ ಸುರೇಶ್ ಅವರನ್ನು, ಹುಣಸೂರಿಗೆ ಎಚ್.ಪಿ.ಮಂಜುನಾಥ್ ಅವರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಲಾಗಿದೆ. ಜೊತೆಗೆ ವಿಧಾನಪರಿಷತ್‍ನ ಎರಡು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದೆ.
ಉಪಚುನಾವಣೆಗೆ ಒಂದು ತಿಂಗಳ ಮೊದಲೇ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಕಾಂಗ್ರೆಸ್ ರಣಕಹಳೆ ಊದಿದೆ.ಉಪಚುನಾವಣೆ ರಾಜ್ಯಸರ್ಕಾರದ ಅಳಿವು-ಉಳಿವನ್ನು ನಿರ್ಧರಿಸುವ ಮಹತ್ವದ ಚುನಾವಣೆಯಾಗಿದೆ.
ಬಿಜೆಪಿ ಪ್ರತಿ ಚುನಾವಣೆಯಲ್ಲೂ ಒಂದು ಹೆಜ್ಜೆ ಮುಂದಿರುತ್ತಿತ್ತು.ಆದರೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಎಲ್ಲದಕ್ಕಿಂತ ಒಂದು ಹೆಜ್ಜೆ ಮುಂದಿಟ್ಟಿದೆ.