ಬೆಂಗಳೂರು, ನ.1-ಹೈಕಮಾಂಡ್ನ ಸೂಚನೆಯನ್ನೂ ಮೀರಿ ರಾಜ್ಯ ಕಾಂಗ್ರೆಸ್ ನಾಯಕರು ಬಿಜೆಪಿ ಹೆಣೆದಿರುವ ಬಲೆಗೆ ಸಿಲುಕಿ ಒದ್ದಾಡುತ್ತಿರುವುದು ಕಾರ್ಯಕರ್ತರಲ್ಲಿ ಅಸಮಾಧಾನ ಹೆಚ್ಚಿಸಿದೆ.
ಟಿಪ್ಪು ಜಯಂತಿ ಮತ್ತು ಟಿಪ್ಪು ಕುರಿತ ಪಾಠಗಳನ್ನು ಪಠ್ಯದಿಂದ ತೆಗೆಯುವ ಬಿಜೆಪಿ ಸರ್ಕಾರದ ಹೇಳಿಕೆ ಹಿಂದೆ ಬಿದ್ದು ಕಾಂಗ್ರೆಸ್ ನಾಯಕರು ತಮ್ಮ ಬುದ್ಧಿಶಕ್ತಿಯನ್ನೆಲ್ಲ ಖರ್ಚು ಮಾಡಿ ವಾಗ್ದಾಳಿ ನಡೆಸುತ್ತಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ವೀರ ಸಾವರ್ಕರ್ ಅವರಿಗೆ ಭಾರತರತ್ನ ನೀಡುವ ವಿಷಯ ಪ್ರಸ್ತಾಪಿಸಿ ಬಿಜೆಪಿ ಪ್ರತಿಪಕ್ಷಗಳ ಹಾದಿ ತಪ್ಪಿಸಿತ್ತು.ಗಂಭೀರವಾಗಿ ಚರ್ಚೆಯಾಗಬೇಕಿದ್ದ ನೆರೆ, ಬರ ಪರಿಸ್ಥಿತಿಗಳು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ವಸ್ತುಗಳೇ ಆಗಲಿಲ್ಲ.
ಕರ್ನಾಟಕದಲ್ಲಿ ಉಪಚುನಾವಣೆ ನಡೆಯುತ್ತಿರುವುದರಿಂದ ಬಿಜೆಪಿ ಟಿಪ್ಪು ಸುಲ್ತಾನ್ ವಿಷಯವನ್ನು ತೇಲಿ ಬಿಟ್ಟಿದೆ. ಕಾಂಗ್ರೆಸ್ ನಾಯಕರು ಮತ್ತೆ ಭಾವನಾತ್ಮಕ ವಿಷಯಗಳ ಬೆನ್ನ ಹಿಂದೆ ಬಿದ್ದಿದ್ದಾರೆ. ಕರ್ನಾಟಕದ 22 ಜಿಲ್ಲೆಗÀಳಲ್ಲಿ ಸಂಭವಿಸಿರುವ ರಣಘೋರ ನೆರೆ ಅನಾಹುತಗಳು, ಎಂಟು ಜಿಲ್ಲೆಗಳಲ್ಲಿನ ಆತಂಕಕಾರಿ ಬರ ಪರಿಸ್ಥಿತಿ, ಇವುಗಳನ್ನು ನಿಭಾಯಿಸುವಲ್ಲಿ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮರೆತು ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಟಿಪ್ಪು ವಿಷಯ ಕುರಿತಂತೆ ಚರ್ಚೆಗೆ ಮುಂದಾಗಿದ್ದಾರೆ.
ನೆರೆ-ಬರದಷ್ಟೇ ಗಂಭೀರವಾದ ಸಮಸ್ಯೆ ಎಂದರೆ ಪ್ರಾದೇಶಿಕ ಆರ್ಥಿಕ ಸಮಗ್ರ ಪಾಲುದಾರಿಕೆ ಒಪ್ಪಂದ.ಇದರಿಂದ ದೇಶದ 10 ಕೋಟಿ ರೈತ ಸಮುದಾಯಗಳಿಗೆ ಅಡ್ಡ ಪರಿಣಾಮಗಳಾಗಿವೆ. ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿರುವುದೇ 12 ಕೋಟಿ ಜನ. ಸರಿಸುಮಾರು ಅಷ್ಟೇ ಸಂಖ್ಯೆಯ ರೈತ ಸಮುದಾಯಕ್ಕೆ ಹೊಡೆತ ಕೊಡುವಂತಹ ಅಂತಾರಾಷ್ಟ್ರೀಯ ಆರ್ಥಿಕ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಲು ಮುಂದಾಗಿದೆ. ಪ್ರಮುಖವಾಗಿ ಈ ವಿಷಯಗಳನ್ನು ಮುಂದಿಟ್ಟುಕೊಂಡು ಜನರ ಮನವೊಲಿಸುವ ಪ್ರಯತ್ನ ಮಾಡಿ. ಭಾವನಾತ್ಮಕ ವಿಷಯಗಳತ್ತ ಹೆಚ್ಚು ಗಮನ ಹರಿಸಬೇಡಿ ಎಂದು ಹೈಕಮಾಂಡ್ ನೇರವಾಗಿ ಸೂಚನೆ ನೀಡಿದೆ.
ಆದರೆ ಕಾಂಗ್ರೆಸ್ ನಾಯಕರು ಹೈಕಮಾಂಡ್ನ ಸೂಚನೆಯನ್ನೂ ಲೆಕ್ಕಕ್ಕಿಟ್ಟುಕೊಳ್ಳದೆ ನಿನ್ನೆಯಿಂದಲೂ ಕೇವಲ ಟಿಪ್ಪು ಕುರಿತಾದ ವಿವಾದಗಳಿಗೆ ಹೆಚ್ಚಿನ ಪ್ರತಿಕ್ರಿಯೆ ನೀಡುತ್ತಿದ್ದು, ಜನರನ್ನು ಕಾಡುವ ಗಂಭೀರ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಈ ಮೂಲಕ ಕರ್ನಾಟಕದಲ್ಲೂ ಬಿಜೆಪಿಯ ವಿಷಯಾಂತರ ತಂತ್ರಗಾರಿಕೆ ಯಶಸ್ವಿಯಾಗಲಿದೆಯೇ? ಕಾಂಗ್ರೆಸ್ ಉಪಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸಲಿದೆಯೇ ಎಂಬ ಅನುಮಾನಗಳು ಹೆಚ್ಚಾಗಿವೆ.