![bjp](http://kannada.vartamitra.com/wp-content/uploads/2019/08/190261-bjp-635x381.jpg)
ಬೆಂಗಳೂರು, ನ.1- ಕೇಂದ್ರ ಸರ್ಕಾರದ ಅಸಹಕಾರ, ಸ್ವಪಕ್ಷೀಯರಿಂದಲೇ ಕಾಲೆಳೆಯುವಿಕೆ, ಒಂದೆಡೆ ಪ್ರವಾಹ ಮತ್ತೊಂದೆಡೆ ಬರಗಾಲ, ಉಪ ಚುನಾವಣೆ, ಅಧಿಕಾರ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಹೀಗೆ ಹತ್ತು ಹಲವು ಏಳುಬೀಳುಗಳ ನಡುವೆ ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಶತದಿನೋತ್ಸವ.
ಕಳೆದ ಜುಲೈ 23ರಂದು ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ, ಜುಲೈ 28ರಂದು ಬಿ.ಎಸ್.ಯಡಿಯೂರಪ್ಪ ಅವರು ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ಶತಮಾನ ಪೂರೈಸಿದ ಬಿಜೆಪಿ ಸರ್ಕಾರದಲ್ಲಿ ಸಂಭ್ರಮಕ್ಕಿಂತ ಕಹಿ ಅನುಭವಗಳೇ ಹೆಚ್ಚಾಗಿವೆ. ಯಾವುದೇ ಸರ್ಕಾರ ಪ್ರಾರಂಭಿಕ ಹಂತದಲ್ಲಿ ಒಂದಿಷ್ಟು ಜನಪರವಾದ ಕಾರ್ಯಕ್ರಮಗಳನ್ನು ಘೋಷಣೆ ಮಾಡುವ ಮೂಲಕ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದನ್ನು ಸಾಬೀತುಪಡಿಸುತ್ತದೆ.
ಆದರೆ, ಅನಿವಾರ್ಯ ಪರಿಸ್ಥಿತಿಯಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರಕ್ಕೆ ಪ್ರಕೃತಿ ವಿಕೋಪ ಒಂದು ಕಡೆಯಾದರೆ, ಮತ್ತೊಂದು ಕಡೆ ಸ್ವಪಕ್ಷದವರ ಕಿರುಕುಳ ಹಾಗೂ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಯಡಿಯೂರಪ್ಪನವರ ಕುರ್ಚಿಯನ್ನು ಮುಳ್ಳುಗದ್ದುಗೆ ಎನ್ನುವಂತಾಗಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಉತ್ತರ ಕರ್ನಾಟಕ, ಕರಾವಳಿ, ಮಧ್ಯ ಕರ್ನಾಟಕ, ಮಲೆನಾಡು ಸೇರಿದಂತೆ ವಿವಿಧ ಕಡೆ ಉಂಟಾದ ಪ್ರಕೃತಿ ವಿಕೋಪ ಕರ್ನಾಟಕ ಜನತೆಯ ಬದುಕನ್ನೇ ಮೂರಾಬಟ್ಟೆ ಮಾಡಿತು.
ಎಲ್ಲವನ್ನು ಕಳೆದುಕೊಂಡಿದ್ದ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ನೆರೆ ಪರಿಹಾರ ಬಿಡುಗಡೆ ಮಾಡಲು ಅನುಸರಿಸಿದ ವಿಳಂಬ ಧೋರಣೆ ಬಿಜೆಪಿ ಸರ್ಕಾರಕ್ಕೆ ಜನತೆ ಹಿಡಿ ಶಾಪ ಹಾಕುವಂತೆ ಮಾಡಿತು.
ನೆರೆ ಹಾವಳಿಯಿಂದಾಗಿ 60 ದಿನಗಳ ಬಳಿಕ ಕೇಂದ್ರ ಸರ್ಕಾರ ರಾಜ್ಯಕ್ಕೆ 1200 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದು, ಬಕಾಸುರನ ಹೊಟ್ಟೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿತ್ತು. ಅಷ್ಟರಲ್ಲೇ ಮನೆ ಮಠ, ಜಾನುವಾರುಗಳನ್ನು ಕಳೆದುಕೊಂಡು ಜೀವನವೇ ಸಾಕಪ್ಪ ಎನ್ನುವಂತಾಗಿದ್ದ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ನೆರೆ ಪರಿಹಾರ ಊಟಕ್ಕಿಲ್ಲದ ಉಪ್ಪಿನಕಾಯಿ ಎನ್ನುವಂತಾಗಿದೆ.
ಯಡಿಯೂರಪ್ಪ ಸಂತ್ರಸ್ತರ ಕಣ್ಣೀರು ಒರೆಸಲು ಹಗಲು-ರಾತ್ರಿ ಶ್ರಮಿಸಿದರು ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಾರಂಭದಲ್ಲಿ ತಾವೊಬ್ಬರೇ ರಾಜ್ಯಾದ್ಯಂತ ಪ್ರವಾಸ ಮಾಡಿ ಸಂತ್ರಸ್ತರ ಕಣ್ಣೀರು ಒರೆಸುವ ಪ್ರಾಮಾಣಿಕ ಪ್ರಯತ್ನ ಮಾಡಿದರು.
ಆದರೂ ಸಚಿವ ಸಂಪುಟ ವಿಸ್ತರಣೆಗೆ ಕೇಂದ್ರ ಸರ್ಕಾರ ಅನುಮತಿ ಕೊಡದೆ ಯಡಿಯೂರಪ್ಪನವರಿಗೆ ಮುಜುಗರ ಉಂಟು ಮಾಡುವ ಕೆಲಸ ಮಾಡಿತು. ಕೊನೆಗೆ ಹೇಗೋ ಸರ್ಕಸ್ ನಡೆಸಿ ಸಂಪುಟಕ್ಕೆ 17 ಸಚಿವರನ್ನು ತೆಗೆದುಕೊಳ್ಳಲಾಯಿತು.
ಆದರೆ, ಕೇಂದ್ರ ಮತ್ತು ಮಾತೃ ಪಕ್ಷದವರಿಂದ ಬಿಎಸ್‍ವೈ ಅವರನ್ನು ಕಡೆಗಣಿಸುವ ಕೆಲಸ ನಿರಂತರವಾಗಿ ಮುಂದುವರೆಯಿತು.ಒಂದು ಕಡೆ ಯಡಿಯೂರಪ್ಪನವರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕಾಗಿಯೇ ಸಂಘ ಪರಿವಾರದವರು ಪಕ್ಷ ಮತ್ತು ಸರ್ಕಾರದ ಆಯಕಟ್ಟಿನಲ್ಲಿ ಆರ್‍ಎಸ್‍ಎಸ್ ನಿಷ್ಠರನ್ನು ತಂದು ಕೂರಿಸುತ್ತಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆಯಿಂದ ಹಿಡಿದು ಪದಾಧಿಕಾರಿಗಳ ನೇಮಕಾತಿ, ಸಂಪುಟಕ್ಕೆ ಸೇರ್ಪಡೆ ಸೇರಿದಂತೆ ಎಲ್ಲದರಲ್ಲೂ ಪರಿವಾರದವರೇ ಮೇಲುಗೈ ಸಾಧಿಸುತ್ತಿದ್ದಾರೆ.
ಉಪ ಚುನಾವಣೆ ಅನಿವಾರ್ಯತೆ:
ಡಿಸೆಂಬರ್ 5ರಂದು ನಡೆಯುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಎಸ್‍ವೈ ಹೆಚ್ಚಿನ ಸ್ಥಾನ ಗೆಲ್ಲುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಸುಪ್ರೀಂಕೋರ್ಟ್ ಯಾವುದೇ ಸಂದರ್ಭದಲ್ಲೂ ಸ್ಪೀಕರ್ ನೀಡಿರುವ ಆದೇಶ ಕುರಿತಂತೆ ತೀರ್ಪು ಪ್ರಕಟಿಸಲಿದೆ. ವಿಧಾನಸಭೆಯಲ್ಲಿ ಪ್ರಸ್ತುತ 105 ಸದಸ್ಯರನ್ನು ಹೊಂದಿರುವ ಬಿಜೆಪಿ 15 ಕ್ಷೇತ್ರಗಳ ಪೈಕಿ ಕನಿಷ್ಠ ಸರಳ ಬಹುಮತ ಪಡೆಯಲು 7 ಸ್ಥಾನಗಳನ್ನಾದರೂ ಗೆಲ್ಲಬೇಕು. ಒಂದೆರಡು ಸ್ಥಾನಗಳು ಆಚೆ ಈಚೆಯಾದರೂ ಯಡಿಯೂರಪ್ಪನವರ ಕುರ್ಚಿಗೆ ಕಂಟಕ ತಪ್ಪಿದ್ದಲ್ಲ.
ಇದರ ಸುಳಿವು ಅರಿತಿರುವ ಬಿಎಸ್‍ವೈ ಇದೇ 3ರಿಂದ ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಮೂಲಕ ಚುನಾವಣಾ ಪ್ರಚಾರಕ್ಕಿಳಿಯುವರು.
ಮುಂದಿನ ಮೂರು ವರ್ಷಗಳ ಕಾಲ ತಮ್ಮ ಕುರ್ಚಿಯನ್ನು ಭದ್ರ ಪಡಿಸಿಕೊಳ್ಳಲೇಬೇಕಾದ ಇಕ್ಕಟ್ಟಿಗೆ ಸಿಲುಕಿರುವ ಯಡಿಯೂರಪ್ಪ, ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಸಿದ್ದಾರೆ.ಹೀಗಾಗಿ ಈಗಾಗಲೇ ಪ್ರತಿಯೊಂದು ಕ್ಷೇತ್ರಗಳಿಗೂ ಜಾತಿವಾರು ಸಚಿವರನ್ನು ಉಸ್ತುವಾರಿಯಾಗಿ ನೇಮಿಸಿದ್ದಾರೆ.
ಬಲ ತಂದ ಫಲಿತಾಂಶ:
ಒಂದು ಹಂತದಲ್ಲಿ ಯಡಿಯೂರಪ್ಪನವರ ನಾಯಕತ್ವಕ್ಕೆ ಕಂಟಕ ಎದುರಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿರುವಾಗಲೇ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪರೋಕ್ಷವಾಗಿ ಬಿಎಸ್‍ವೈಗೆ ಹೆಚ್ಚಿನ ಬಲ ತಂದುಕೊಟ್ಟಂತಾಗಿದೆ.
ಸ್ಥಳೀಯ ನಾಯಕರನ್ನು ಕಡೆಗಣಿಸಿ ಎಲ್ಲ ಸಂದರ್ಭಗಳಲ್ಲೂ ನರೇಂದ್ರ ಮೋದಿ, ಅಮಿತ್ ಶಾ ಮುಖ ನೋಡಿಯೇ ಮತ ಹಾಕುವುದಿಲ್ಲ ಎಂಬುದು ಎರಡು ರಾಜ್ಯಗಳ ಫಲಿತಾಂಶ ಸಾಬೀತು ಮಾಡಿದೆ.ಇದು ಪರೋಕ್ಷವಾಗಿ ಯಡಿಯೂರಪ್ಪನವರ ಆತ್ಮಸ್ಥೈರ್ಯವನ್ನು ಹೆಚ್ಚುವಂತೆ ಮಾಡಿದೆ.
ಕರ್ನಾಟಕದಲ್ಲಿ ಬಿಜೆಪಿಗೆ ಸಂಬಂಧಿಸಿದಂತೆ ನನ್ನನ್ನು ಕಡೆಗಣಿಸಿದರೆ ಪಕ್ಷಕ್ಕೆ ಉಳಿಗಾಲವಿಲ್ಲ ಎಂಬ ಸಂದೇಶವನ್ನು ಈಗಾಗಲೇ ಬಿಸ್‍ವೈ ಸೂಚ್ಯವಾಗಿ ಹೈಕಮಾಂಡ್‍ಗೆ ತಲುಪಿಸಿದ್ದಾರೆ.ಆದ್ದರಿಂದಲೇ ಉಪ ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಹೈಕಮಾಂಡ್ ಯಡಿಯೂರಪ್ಪನವರ ಮಾತಿಗೆ ಹೆಚ್ಚಿನ ಮನ್ನಣೆ ನೀಡಲು ತೀರ್ಮಾನಿಸಿದೆ ಎನ್ನಲಾಗಿದೆ.ಜತೆಗೆ ಬಿಎಸ್‍ವೈ ನಾಯಕತ್ವಕ್ಕೆ ನಮ್ಮಿಂದ ಯಾವುದೇ ರೀತಿಯ ತೊಂದರೆ ಇಲ್ಲ ಎಂಬ ಸುಳಿವನ್ನೂ ಸಹ ನೀಡಿದೆ.
ವಿಪಕ್ಷಗಳಲ್ಲೇ ಗೊಂದಲ:
ಆಡಳಿತಾರೂಢ ಬಿಜೆಪಿಯಲ್ಲಿ ಸಾಕಷ್ಟು ಗೊಂದಲಗಳಿದ್ದರೂ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿ ಉಂಟಾಗಿರುವ ಗೊಂದಲ ಪರೋಕ್ಷವಾಗಿ ಬಿಜೆಪಿಗೆ ವರದಾನ ತಂದುಕೊಟ್ಟಿದೆ.
ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ , ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನಡುವೆ ನಡೆಯುತ್ತಿರುವ ವಾಕ್‍ಸಮರ ಬಿಜೆಪಿ ನಾಯಕರಲ್ಲಿ ಮಂದಹಾಸ ಮೂಡಿಸಿದೆ.
ಭವಿಷ್ಯದಲ್ಲಿ ಇನ್ನೆಂದೂ ಕಾಂಗ್ರೆಸ್-ಜೆಡಿಎಸ್ ಹೊಂದಾಗುವುದಿಲ್ಲ ಹಾಗೂ ಬಿಜೆಪಿ ಸರ್ಕಾರ ಪತನವಾಗಲು ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿರುವುದು ಮುಳುಗುವವರಿಗೆ ಹುಲ್ಲುಕಟ್ಟಿ ಆಸರೆಯೆಂಬಂತಾಗಿದೆ ಬಿಜೆಪಿ ಸ್ಥಿತಿ.
ಇನ್ನೊಂದೆಡೆ ಉಪ ಚುನಾವಣೆ ನಡೆಯುವ 15 ಕ್ಷೇತ್ರಗಳಿಗೆ ಜೆಡಿಎಸ್ 15 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿರುವುದು ಕಾಂಗ್ರೆಸ್‍ಗೆ ಕೊಂಚ ಹಿನ್ನಡೆಯುಂಟು ಮಾಡಿದೆ.ಕೆಲವು ಕ್ಷೇತ್ರಗಳಲ್ಲಿ ಒಂದಿಷ್ಟು ಕಾಂಗ್ರೆಸ್ ಮತಗಳನ್ನು ಕಿತ್ತುಕೊಂಡರೆ ಪರೋಕ್ಷವಾಗಿ ಬಿಜೆಪಿಗೆ ಅನುಕೂಲವಾಗಲಿದೆ ಎಂಬ ಮಾತುಗಳು ರಾಜಕೀಯ ಪಡಶಾಲೆಯಲ್ಲಿ ಕೇಳಿ ಬರುತ್ತಿದೆ.
ಈ ಎಲ್ಲಾ ಬೆಳವಣಿಗೆಗಳು ಪರೋಕ್ಷವಾಗಿ ಬಿಜೆಪಿ ಸರ್ಕಾರವನ್ನು ಸ್ಥಿರಗೊಳಿಸಬಹುದು ಎಂದು ಲೆಕ್ಕ ಹಾಕಲಾಗಿದೆ.