ಬನಾನ್: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ಐಸಿಸ್) ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿಯನ್ನು ಅಮೆರಿಕಾ ಸೇನೆ ಹತ್ಯೆ ಮಾಡಿದ್ದು, ಬಾಗ್ದಾದಿ ಹತ್ಯೆಯನ್ನು ಇಸಿಸ್ ಉಗ್ರ ಸಂಘಟನೆ ದೃಢಪಡಿಸಿದೆ.
ಪ್ರಾಮಾಣಿಕ, ನಿಷ್ಠಾವಂತ ಕಮಾಂಡರ್ ಬಾಗ್ದಾದಿ… ನಿಮಗಾಗಿ ಶೋಕಿಸುತ್ತೇವೆಂದು ಇಸಿಸ್ ಉಗ್ರ ಸಂಘಟನೆ ನೂತನ ವಕ್ತಾರ ಅಬು ಹಂಝಾ ಅಲ್-ಖುರೇಷಿ ಆಡಿಯೋವೊಂದರಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದಾನೆ.
ಬಾಗ್ದಾದಿ ಅಂತ್ಯದ ಬಳಿಕ ವಿಶ್ವದ ಅತ್ಯಂತ ಕ್ರೂರ ಮತ್ತು ನಿರ್ದಯಿ ಉಗ್ರಗಾಮಿ ಸಂಘಟನೆಯಾಗಿರುವ ಇಸಿಸ್’ಗೆ ವಿಧ್ವಂಸಕ ಎಂದೇ ಕುಖ್ಯಾತಿ ಗಳಿಸಿರುವ ಅಬ್ದುಲ್ಲಾ ಖರ್ದಾಸ್ ನೂತನ ನಾಯಕನಾಗಿ ನೇಮಕಗೊಂಡಿದ್ದಾನೆಂದು ತಿಳಿದುಬಂದಿದೆ.
ಅಮೆರಿಕಾ ಸೇನಾಪಡೆಗಳ ದಾಳಿಯಲ್ಲಿ ಹತನಾದ ಬಾಗ್ದಾದಿ ಪರಮಾಪ್ತನಾದ ಈತ ಈ ಹಿಂದೆ ಇರಾಕ್ ಸರ್ವಾಧಿಕಾರಿ ಸದ್ಧಾಮ್ ಹುಸೇನ್ ಆಪ್ತ ವಲಯದ ಸೇನೆಯಲ್ಲಿ ಉನ್ನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ತನ್ನ ಶತ್ರುಗಳನ್ನು ನಿಗ್ರಹಿಸಲು ಸದ್ದಾಮ್ ಬಳಸುತ್ತಿದ್ದ ವಿಶೇಷ ಸೇನೆಯ ತಂಡದಲ್ಲಿದ್ದ ಈತನನ್ನು ಡಿಸ್ಟ್ರಾಯರ್ (ವಿಧ್ವಂಸಕ) ಎಂದೇ ಗುರ್ತಿಸಲಾಗುತ್ತಿತ್ತು.
ಬಾಗ್ದಾದಿ ಹತ್ಯೆಯಾದ ಬಳಿಕ ಖರ್ದಾಶ್ ಅಧಿಕೃತವಾಗಿ ಇಸಿಸ್ ದಿನನಿತ್ಯದ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ಈ ಹಿಂದೆಯೂ ಕೂಡ ಬಾಗ್ದಾದಿ ಅನುಪಸ್ಥಿತಿಯಲ್ಲಿ ಅಬ್ದುಲ್ಲಾ ಮಹತ್ವದ ಕಾರ್ಯಾಚರಣೆಗಳ ಹೊಣೆ ಹೊತ್ತು ಯಶಸ್ವಿಯಾಗಿ ನಿಭಾಯಿಸಿದ್ದ ಅಮೆರಿಕಾ ಪಡೆಗಳು ಮತ್ತು ಇಸಿಸ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಇತರ ರಾಷ್ಟ್ರಗಳ ವಿರುದ್ಧ ಸದಾ ಕತ್ತಿ ಮಸೆಯುವ ಅಬ್ದುಲ್ಲಾ, ಬಾಗ್ದಾದಿಯಷ್ಟೇ ಕುತಂತದ್ರಿ ಮತ್ತು ಕ್ರೂರಿಯಾಗಿದ್ದಾನೆಂದು ಬಣ್ಣಿಸಲಾಗುತ್ತಿದೆ.
ಈತ ಅಲ್ ಖೈದಾ ಮತ್ತು ಐಸಿಸ್ ಎರಡಲ್ಲೂ ಅನುಭವ ಹೊಂದಿರುವುದರಿಂದ ಈತನೇ ತನ್ನ ಮುಂದಿನ ನಾಯಕ ಎಂದು ಬಾಗ್ದಾದಿ ತನ್ನ ಆಪ್ತ ವಲಯದಲ್ಲಿ ಕೆಲವೊಮ್ಮೆ ಬಹಿರಂಗವಾಗಿ ಘೋಷಿಸಿದ್ದ. 2003ರಲ್ಲಿ ಅಲ್ ಖೈದಾ ಜೊತೆ ನಿಕಟ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಬಾಗ್ದಾದಿ ಮತ್ತು ಅಬ್ದುಲ್ಲಾ ಅವರನ್ನು ಅಮೆರಿಕಾ ಸೇನೆ ಬಂಧಿಸಿ ಇರಾಕ್’ನ ಬಸ್ತಾ ಬಂಧೀಕಾನೆಯಲ್ಲಿ ಇರಿಸಲಾಗಿತ್ತು.
ಆಗ ಬಾಗ್ದಾದಿಯ ವಿಶ್ವಾಸ ಗಳಿಸಿದ್ದ ಅಬ್ದುಲ್ಲಾ ನಂತರ ಐಸಿಸ್ ಸಕ್ರಿಯ ಸದಸ್ಯನಾಗಿ ತನ್ನ ಕ್ರೂರ ಮತ್ತು ನಿರ್ದಯ ಹಿಂಸಾಕೃತ್ಯಗಳಿಂದ ಹಂತ ಹಂತವಾಗಿ ಬಡ್ತಿ ಪಡೆದು ಬಾಗ್ದಾದಿ ಬಲಗೈ ಬಂಟನಾಗಿದ್ದ. ಈಗ ಮತ್ತೊಬ್ಬ ನರರೂಪದ ರಾಕ್ಷಸ ಐಸಿಸ್ ಮುಖ್ಯಸ್ಥನಾಗಿರುವುದು ಅಮೆರಿಕಾಗೆ ತಲೆನೋವಾಗಿ ಪರಿಣಮಿಸಿದೆ.
ಐಸಿಸ್ ಉಗ್ರ ಸಂಘಟನೆ ನಾಯಕನಾಗಿದ್ದ ಬಾಗ್ದಾದಿ ವಿಶ್ವದಲ್ಲಿಯೇ ಅತಿ ಬೇಡಿಕೆಯಿರುವ ವ್ಯಕ್ತಿ ಎಂದು ಕರೆಯಲಾಗುತ್ತಿತ್ತು. ಇವನ ತಲೆಗೆ ಅಮೆರಿಕಾ ಸರ್ಕಾರ 1 ಕೋಟಿ ಡಾಲರ್ ಬಹುಮಾನ ಘೋಷಣೆ ಮಾಡಿತ್ತು.
ಇರಾಕ್ ನಲ್ಲಿ 1971ರಲ್ಲಿ ಜನಿಸಿದ್ದಾನೆಂದು ಹೇಳಲಾಗುತ್ತಿದ್ದ ಬಾಗ್ದಾದಿಯ ವೈಯಕ್ತಿಕ ಬದುಕಿನ ವಿವರಗಳು ಅಷ್ಟಾಗಿ ದೊರಕುವುದಿಲ್ಲ. ಉತ್ತರ ಇರಾಕ್’ನ ಮೊಸುಲ್ ನಲ್ಲಿರುವ ಅಲ್ನೂರಿ ಮಸೀದಿಯಲ್ಲಿ ಜೂನ್ 2014ರ ರಂಜಾನ್ ಆಚರಣೆ ವೇಳೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಬಾಗ್ದಾದಿ ವಿಶ್ವದಲ್ಲಿ ಖಲೀಫತ್ ಸ್ಥಾಪನೆಯಾಗಿದೆ. ನಾನು ಅದರ ಖಲೀಫ ಎಂದು ಬಾಗ್ದಾದಿ ಘೋಷಿಸಿಕೊಂಡಿದ್ದ. ಈಗಲೂ ಮಾಧ್ಯಮಗಳು ಬಳಸುತ್ತಿರುವ ಬಾಗ್ದಾದಿಯ ಚಿತ್ರಗಳು ಅನ್’ನೂರಿ ಮಸೀದಿಯಲ್ಲಿ ಬಾಗ್ದಾದಿ ಭಾಷಣ ಮಾಡಿದ ಸಂದರ್ಭದ ವಿಡಿಯೋದಿಂದ ತೆಗೆದ ಸ್ಕ್ರೀನ್’ಶಾಟ್’ಗಳೇ ಆಗಿವೆ.
2014ರ ಆರಂಭದ ತಿಂಗಳುಗಳಲ್ಲಿ ಬಾಗ್ದಾದಿಯ ಹೋರಾಟಗಾರರು ಪಶ್ಚಿಮ ಇರಾಕ್’ನ ಭೂ ಪ್ರದೇಶವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು. ತನ್ನ ಆಳ್ವಿಕೆಯಲ್ಲಿರುವ ಇರಾಕ್ ಮತ್ತು ಸಿರಿಯಾ ಪ್ರದೇಶಗಳಲ್ಲಿ ಐಸಿಸ್ ಕ್ರೌರ್ಟದ ಆಡಳಿತ ನಡೆಸಿತು. ವಿದೇಶಿಕರು, ಧರ್ಮ ಉಲ್ಲಂಘಿಸಿದವರು ತಲೆ ತೆಗೆಯುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿತ್ತು. ಇದನ್ನು ಕಂಡ ವಿಶ್ವ ಬೆಚ್ಚಿ ಬಿತ್ತು. ಪ್ರತಿದಾಳಿಯ ತಂತ್ರ ಮತ್ತು ಪ್ರಯತ್ನಗಳು ತೀವ್ರಗೊಂಡವು.
2015ರ ಅಂತ್ಯದ ವೇಳೆಗೆ ಐಸಿಸ್ ಆಳ್ವಿಕೆಯಡಿ ಸುಮಾರು 1.2 ಕೋಟಿ ಜನರಿದ್ದರು. ಅವರೆಲ್ಲರ ಮೇಲೆ ಕಟ್ಟುನಿಟ್ಟಿನ ಷರಿಯತ್ ಕಾನೂನು ಹೇರಲಾಗಿತ್ತು. ಇದು ಭಾರತವೂ ಸೇರಿದಂತೆ ವಿಶ್ವದ ಹಲವು ದೇಶಗಳಿಂದ ಜಿಹಾದಿಗಳನ್ನು ಆಕರ್ಷಿಸಿತು. ಗ್ರೇಟ್ ಬ್ರಿಟನ್’ನಷ್ಟು ದೊಡ್ಡದಾಗಿದ್ದ ಭೂ ಪ್ರದೇಶವನ್ನು ಕೈವಶ ಮಾಡಿಕೊಂಡಿದ್ದ ಬಾಗ್ದಾದಿ ಬಳಿ 30 ಸಾವಿರ ಜಿಹಾದಿ ಹೋರಾಟಗಾರರ ಸೇನೆ ಮತ್ತು 100 ಕೋಟಿ ಡಾಲರ್ ಮೊತ್ತದ ವಾರ್ಷಿಕ ಬಜೆಟ್’ನಷ್ಟು ಸಂಪತ್ತು ಇತ್ತು.
ಸಿರಿಯಾದ ಕುರ್ದಿಷ್ ಪೋಷ್ಮರ್ಗಾ ಪಡೆಗಳೊಂದಿಗೆ ಸ್ಥಳೀಯ ಹೋರಾಟಗಾರ ಜೊತೆಗೂಡಿ ವಿಶ್ವದ ಹಲವು ದೇಶಗಳು ಒಗ್ಗೂಡಿ ಸಂಘಟಿಸಿದ ಪ್ರತಿರೋಧ ದಾಳಿಯಿಂದ 2016ರ ನಂತರ ಐಸಿಸ್ ಸಂಘಟನೆ ಬಲ ಕಳೆದುಕೊಂಡಿದು. ಐಸಿಸ್ ಸಂಘಟನೆ ಕುಸಿದು ಬಿದ್ದ ಬಳಿಕ ಸಾವಿರಾರು ಹೋರಾಟಗಾರರು ಭೂಗತರಾದರು. ಐಸಿಸ್ ಮತ್ತು ಬಾಗ್ದಾದಿ ಹೆಸರಿನಲ್ಲಿ ವಿಶ್ವದ ವಿವಿಧೆಡೆ ಜಿಹಾದಿಗಳು ಭಯೋತ್ಪಾದಕ ಕೃತ್ಯಗಳನ್ನು ಮಾಡುತ್ತಲೇ ಇದ್ದಾರೆ. ಅದರಲ್ಲಿ ದೊಡ್ಡದು ಎಂದರೆ ಪ್ಯಾರೀಸ್ ನಲ್ಲಿ ನವೆಂಬರ್ 2015ರಲ್ಲಿ ನಡೆದ ದಾಳಿ ಮತ್ತು ಶ್ರೀಲಂಕಾದಲ್ಲಿ ಇದೇ ವರ್ಷ ನಡೆದ ದಾಳಿ.
ಬಾಗ್ದಾದಿ ಸಾವಿನಿಂದ ಇಡೀ ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿತುವ ಐಸಿಸ್ ಉಪಟಳ ಅಂತ್ಯಗೊಂಡಿಲ್ಲ. ಐಸಿಸ್ ಇಂದಿಗೂ ಜೀವಂತವಾಗಿದೆ. 2011ರಲ್ಲಿ ಇದ್ದ ಸ್ಥಿತಿಗಿಂತಲೂ ಇನ್ನು ಪ್ರಬಲತೆಯನ್ನು ಹೆಚ್ಚಿಸಿಕೊಂಡಿದೆ.