ನವದೆಹಲಿ: ಸ್ಥಳೀಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ನಸುಕಿನ ವೇಳೆ ಆರ್ಡಿಎಕ್ಸ್ ಸಂಬಂಧಿತ ವಸ್ತುಗಳನ್ನು ಹೊಂದಿದ ಬ್ಯಾಗೊಂದು ಪತ್ತೆಯಾಗಿದೆ. ಪರಿಣಾಮ ಕೆಲವು ಗಂಟೆಗಳ ಕಾಲ ವಿಮಾನ ನಿಲ್ಧಾಣದಲ್ಲಿ ಭದ್ರತೆ ಹೆಚ್ಚಳ ಮಾಡಲಾಗಿದ್ದು, ಪ್ರಯಾಣಿಕರ ಚಲನವಲನಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ಸಿಐಎಸ್ಎಫ್ ಸಿಬ್ಬಂದಿ ನಸುಕಿನ 1 ಗಂಟೆ ವೇಳೆಗೆ ಗಸ್ತು ತಿರುಗುವ ಸಂದರ್ಭದಲ್ಲಿ ಟರ್ಮಿನಲ್ 3ರ ಆಗಮನ ಪ್ರದೇಶದಲ್ಲಿ ಅನಾಥವಾಗಿದ್ದ ಬ್ಯಾಗ್ ಪತ್ತೆಯಾಗಿತ್ತು. ಕೂಡಲೇ ಅದನ್ನು ಪರಿಶೀಲಿಸಿ, ಆರ್ಡಿಎಕ್ಸ್ ವಸ್ತು ಹೊಂದಿರುವ ಶಂಕೆ ಕಾರಣ ಅದನ್ನು ನಿಷ್ಕ್ರಿಯಗೊಳಿಸುವ ಸ್ಥಳದಲ್ಲಿ ಇರಿಸಲಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ವಾರಸುದಾರರಿಲ್ಲದ ಕಪ್ಪುಬಣ್ಣದ ಬ್ಯಾಗ್ ಪತ್ತೆಯಾದ ಕೂಡಲೆ ಸ್ಪೋಟಕ ಪತ್ತೆ ಉಪಕರಣ ಮತ್ತು ನಾಯಿಯನ್ನು ಕರೆಯಿಸಿಕೊಳ್ಳಲಾಗಿತ್ತು.ಅದರಲ್ಲಿ ಆರ್ಡಿಎಕ್ಸ್ ಸಂಬಂಧಿತ ವಸ್ತುಗಳಿರುವುದು ಮೇಲ್ನೋಟಕ್ಕೆ ಖಚಿತವಾಗಿದೆ. ಹೀಗಾಗಿ ಆ ಬ್ಯಾಗನ್ನು ಮುಂದಿನ 24 ಗಂಟೆಗಳ ನಿಗಾ ವ್ಯವಸ್ಥೆಯಲ್ಲಿ ಇರಿಸಲಾಗಿದೆ. ನಂತರ ಬ್ಯಾಗ್ ತೆರೆದು ಯಾವ ರೀತಿಯ ಸ್ಫೋಟಕ ಎಂಬುದನ್ನು ಪರಿಶೀಲಿಸಬೇಕಷ್ಟೆ.
ಒಂದೋ ಅದು ಸ್ಫೋಟಕ ಆಗಿರಬಹುದು ಅಥವಾ ಸುಧಾರಿತ ಸ್ಪೋಟಕ ಉಪಕರಣವೂ ಆಗಿರಬಹುದು. ಸದ್ಯ ಸ್ಪೋಟಕದ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣವಿಲ್ಲ ಎಂದು ಸಿಐಎಸ್ಎಫ್ ಮೂಲಗಳು ತಿಳಿಸಿವೆ.
ದೆಹಲಿ ಪೊಲೀಸರಿಗೂ ಕರೆ: ನಸುಕಿನ 1 ಗಂಟೆ ಸಮಯದಲ್ಲಿ ವಿಮಾನ ನಿಲ್ದಾಣದಿಂದ ದೆಹಲಿ ಪೊಲೀಸರಿಗೂ ಕರೆ ಹೋಗಿದ್ದು, ಟರ್ಮಿನಲ್ನ ಆಗಮನ ಗೇಟ್ ನಂ 2ರಲ್ಲಿ ಅನಾಥ ಬ್ಯಾಗ್ ಇದೆ ಎಂಬ ಸಂದೇಶ ಇತ್ತು ಅದರಲ್ಲಿ. ವಿಮಾನ ನಿಲ್ದಾಣ ವಿಭಾಗದ ಡಿಸಿಪಿ ಸಂಜಯ್ ಭಾಟಿಯಾ ಹೇಳುವ ಪ್ರಕಾರ, ಸಿಐಎಸ್ಎಫ್ ಸಿಬ್ಬಂದಿ ಆ ಬ್ಯಾಗನ್ನು ವಶಕ್ಕೆ ಪಡೆದುಕೊಂಡು ಸುರಕ್ಷಿತ ಪ್ರದೇಶಕ್ಕೆ ಕೊಂಡೊಯ್ದಿದ್ದಾರೆ. ಅದನ್ನು ಇನ್ನೂ ತೆರೆದು ನೋಡಿಲ್ಲ. ಕೆಲವೊಂದು ವಿದ್ಯುತ್ ವೈಯರ್ಗಳು ಅದರಲ್ಲಿ ಕಂಡುಬಂದಿದೆ. ಹೀಗಾಗಿ ವಿಮಾನ ನಿಲ್ದಾಣದ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಸಂಪೂರ್ಣ ಶೋಧ: ಅನಾಥ ಬ್ಯಾಗ್ ಪತ್ತೆಯಾಗುತ್ತಿದ್ದಂತೆ ವಿಮಾನ ನಿಲ್ದಾಣ ಸುತ್ತುವರಿದ ಸಿಐಎಸ್ಎಫ್ ಸಿಬ್ಬಂದಿ ಮತ್ತು ಪೊಲೀಸರು ಪ್ರತಿ ಮೂಲೆಯನ್ನು ಬಿಡದೆ ಶೋಧಕಾರ್ಯ ನಡೆಸಿ, ಸ್ಪೋಟಕಗಳು ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡಿದ್ದಾರೆ. ಬೆಳಗಿನ ಜಾವ 4 ಗಂಟೆ ತನಕ ಪ್ರಯಾಣಿಕರ ಪ್ರವೇಶಕ್ಕೂ ನಿರ್ಬಂಧ ವಿಧಿಸಲಾಗಿತ್ತು. ನಂತರ ಬಿಗಿ ಬಂದೋಬಸ್ತ್ನಲ್ಲಿ ಪ್ರಯಾಣಿಕರನ್ನು ಒಳಗೆ ಬಿಡಲಾಗುತ್ತಿದೆ.