ಬೆಂಗಳೂರು,ಅ.31- ಅನರ್ಹ ಶಾಸಕ ರಮೇಶ್ ಜಾರಕಿಹೊಳಿಗೆ ಐಟಿ ಶಾಕ್ ಕೊಟ್ಟಿದೆ. ಮೈತ್ರಿ ಸರ್ಕಾರ ಉರುಳಿಸಲು ಕಾರಣವಾಗಿದ್ದ ಗೋಕಾಕ್ ಕ್ಷೇತ್ರದ ಶಾಸಕ ಈಗ ಐಟಿ ಬಲೆಯಲ್ಲಿ ಸಿಲುಕಿದ್ದಾರೆ.
ಬೆಳಗಾವಿಯ ಸಾಹುಕಾರ ಕೋಟ್ಯಂತರ ರೂ.ಮೌಲ್ಯದ ಬೇನಾಮಿ ಆಸ್ತಿಯನ್ನು ಐಟಿ ಪತ್ತೆ ಹಚ್ಚಿ ದಾಖಲೆಗಳ ಪರಿಶೀಲನೆ ನಡೆಸಿದೆ ಎಂದು ತಿಳಿದು ಬಂದಿದೆ.
ಸುಮಾರು 34 ಹೆಸರುಗಳಲ್ಲಿದ್ದ 105.61 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯ ಶುಗರ್ಸ್ ಕಂಪನಿಯಲ್ಲಿ ಬರೋಬ್ಬರಿ 105 ಕೋಟಿ ರೂ.ಗಳ ಹೂಡಿಕೆ ಮಾಡಿರುವ ಮಾಹಿತಿ ವಿಚಾರಣೆ ವೇಳೆ ಗೊತ್ತಾಗಿದೆ. ಅಷ್ಟೇ ಅಲ್ಲದೇ ಜಾರಕಿಹೊಳಿಯವರು ಇಬ್ಬರು ಮಕ್ಕಳು, ಪತ್ನಿ ಮತ್ತು ಸಂಬಂಧಿಕರ ಹೆಸರಿನಲ್ಲಿ ಬೇನಾಮಿ ಆಸ್ತಿ ಕೂಡ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ವಿಚಾರಣೆ ವೇಳೆ ಅವರ ಪತ್ನಿ ಹಾಗೂ ಮಕ್ಕಳ ವ್ಯವಹಾರದ ಬಗ್ಗೆ ತಮಗೇನು ಗೊತ್ತಿಲ್ಲ ಎಂಬ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಇದಲ್ಲದೇ ರಮೇಶ್ ಜಾರಕಿಹೊಳಿ ತಮ್ಮ ಇಬ್ಬರು ಪುತ್ರರ ಹೆಸರಿನಲ್ಲಿ ಏಳೂವರೆ ಕೋಟಿ ರೂ.ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.ಐಟಿ ತನಿಖೆ ವೇಳೆ ಈ 10 ಸಹಕಾರ ಸಂಘಗಳ ಪೈಕಿ ಎಂಟು ಅಸ್ತಿತ್ವದಲ್ಲೇ ಇಲ್ಲ.ಅಷ್ಟೇ ಅಲ್ಲದೆ, ಎಲ್ಲರ ಹೂಡಿಕೆಯ ಕೇಂದ್ರಬಿಂದುವಾದ ಸೌಭಾಗ್ಯ ಶುಗರ್ಸ್ ಸಂಸ್ಥೆ ವಾಸ್ತವದಲ್ಲಿ ಬೇನಾಮಿ ಎಂಬುದು ಐಟಿ ತನಿಖೆಯಿಂದ ತಿಳಿದುಬಂದಿದೆ.ಈ ಬಗ್ಗೆ ತನಿಖೆ ಮುಂದುವರೆದಿದೆ.