ಬೆಂಗಳೂರು, ಅ.31- ಮುಜರಾಯಿ ಇಲಾಖೆಯ ಕೆಲವು ಎ ದರ್ಜೆ ದೇವಾಲಯಗಳಲ್ಲಿ ವಾರ್ಷಿಕ ಎರಡು ಬಾರಿ ಸಾಮೂಹಿಕ ವಿವಾಹ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸಪೂಜಾರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಉತ್ತಮ ಆದಾಯ ಇರುವ ಎ ದರ್ಜೆಯ 90ರಿಂದ 100 ದೇವಾಲಯಗಳಲ್ಲಿ ಮೊದಲ ಹಂತದಲ್ಲಿ ಸಾಮೂಹಿಕ ವಿವಾಹವನ್ನು ಮಾಡಲು ಉದ್ದೇಶಿಸಲಾಗಿದೆ. ಏಪ್ರಿಲ್ 26 ಮತ್ತು ಮೇ 24ರಂದು ಸಾಮೂಹಿಕ ವಿವಾಹ ನಡೆಸಲಾಗುವುದು ಎಂದರು.
ಬಡವರ ಅನುಕೂಲಕ್ಕಾಗಿ ಸಾಮೂಹಿಕ ವಿವಾಹವನ್ನು ಮಾಡಲು ಉದ್ದೇಶಿಸಿದ್ದು, ಮೊದಲ ಹಂತದಲ್ಲಿ ಒಂದು ಸಾವಿರ ಮದುವೆಗಳನ್ನು ಮಾಡುವ ಉದ್ದೇಶವಿದೆ ಎಂದರು.
ಸುಮಾರು 8 ಗ್ರಾಂ ತೂಕದ ತಾಳಿ ಅಂದರೆ 40 ಸಾವಿರ ರೂ.ವೆಚ್ಚ, ವರನಿಗೆ ಬಟ್ಟೆಗಾಗಿ 5ಸಾವಿರ, ವಧುವಿಗೆ ಧಾರಾ ಸೀರೆಗಾಗಿ 10 ಸಾವಿರ ರೂ.ನೀಡಲಾಗುವುದು. ಅಲ್ಲದೆ ಶಿಶುಕಲ್ಯಾಣ ಇಲಾಖೆಯಿಂದ 10 ಸಾವಿರ ಬಾಂಡ್ ಒದಗಿಸಲಾಗುತ್ತದೆ. ಮದುವೆಯ ದಿನವೇ ಸ್ಥಳದಲ್ಲೇ ಮದುವೆಯ ನೋಂದಣಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ವಧುವಿಗೆ ಕನಿಷ್ಠ 18 ವರ್ಷ, ವರನಿಗೆ ಕನಿಷ್ಠ 21 ವರ್ಷವಾಗಿರಬೇಕು.ವಯಸ್ಸಿನ ದೃಢೀಕರಣಕ್ಕೆ ಜನನ ಪ್ರಮಾಣ ಪತ್ರ, ಶಾಲಾ ದಾಖಲಾತಿ ಮತ್ತಿತರ ದಾಖಲಾತಿ ಒದಗಿಸಬೇಕು.ಯಾವುದೇ ಕಾರಣಕ್ಕೂ ಎರಡನೇ ಮದುವೆಗೆ ಅವಕಾಶವಿಲ್ಲ. ವಧು-ವರರ ತಂದೆ-ತಾಯಿ, ಸಾಕ್ಷಿದಾರರ ಸಮ್ಮುಖದಲ್ಲಿ ಮದುವೆ ಮಾಡಿಸಲಾಗುತ್ತದೆ.ಒಂದು ತಿಂಗಳ ಮೊದಲು ಮದುವೆಯಾಗುವವರು ಸಂಬಂಧಪಟ್ಟ ದೇವಾಲಯಗಳಲ್ಲಿ ಅರ್ಜಿ ಸಲ್ಲಿಸಬೇಕು.ಅವರ ವಿವರಗಳನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಲಾಗುತ್ತದೆ.ಇದಕ್ಕಾಗಿ ಸುಮಾರು 24 ನಿಯಮಗಳನ್ನು ರೂಪಿಸಲಾಗಿದೆ ಎಂದರು.
ಸಾಮೂಹಿಕ ಮದುವೆ ಜವಾಬ್ದಾರಿಯನ್ನು ಆಯಾ ಜಿಲ್ಲಾಧಿಕಾರಿಗೆ ವಹಿಸಲಾಗಿದೆ.ದೇವಾಲಯದ ಆದಾಯದಲ್ಲೇ ಮದುವೆ ಮಾಡಿಸುವುದರಿಂದ ಇಲಾಖೆಗೆ ಯಾವುದೇ ಖರ್ಚು ಬರುವುದಿಲ್ಲ. ಕೊಲ್ಲೂರು ಮೂಕಾಂಬಿಕೆ, ಬನಶಂಕರಿ, ಕುಕ್ಕೆ ಸುಬ್ರಹ್ಮಣ್ಯ, ಚಾಮುಂಡಿಬೆಟ್ಟ ಸೇರಿದಂತೆ ಮೊದಲಾದ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಜಾರಿಗೆ ಬರಲಿದೆ ಎಂದು ಹೇಳಿದರು.
ಸಮಿತಿ:
ದೇವಾಲಯಗಳಲ್ಲಿ ನಡೆಯುವ ಯಕ್ಷಗಾನದ ಮೇಳಗಳ ಕಲಾವಿದರ ವೇತನ ಪರಿಷ್ಕರಣೆ, ಆರೋಗ್ಯ ವಿಮೆ, ಭವಿಷ್ಯ ನಿಧಿಗೆ ಸಂಬಂಧಪಟ್ಟಂತೆ ಯಕ್ಷಗಾನ ಆಕಾಡೆಮಿ ಅಧ್ಯಕ್ಷ ಎಂ.ಎನ್.ಹೆಗಡೆ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗುವುದು. ಮೂರು ತಿಂಗಳಲ್ಲಿ ಆ ಸಮಿತಿ ವರದಿ ನೀಡಲಿದ್ದು, ಆನಂತರ ಪರಿಷ್ಕರಣೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಮಿತಿಯಲ್ಲಿ ತೆಂಕು ಮತ್ತು ಬಡಗು ಯಕ್ಷಗಾನ ಪ್ರಕಾರದ ನುರಿತ ಕಲಾವಿದರು ಹಾಗೂ ಮುಜರಾಯಿ ಇಲಾಖೆ ಅಧಿಕಾರಿಗಳು ಇರುತ್ತಾರೆ ಎಂದು ಹೇಳಿದರು.
ಹಿರಿಯ ಕಲಾವಿದ ಹರಾಡಿ ರಾಮಗಾಣಿಗ ಪ್ರಶಸ್ತಿಗೆ ಮರುಚಾಲನೆ ನೀಡಲಾಗಿದ್ದು, ಒಂದು ಲಕ್ಷ ರೂ.ನಗದು ನೀಡಲಾಗುತ್ತದೆ.ಈ ಹಣವನ್ನು ಮುಜರಾಯಿ ಇಲಾಖೆಯೇ ನೀಡಲಿದ್ದು, ಯಕ್ಷಗಾನ ಕಲಾವಿದರನ್ನು ಆಯ್ಕೆ ಮಾಡಲು ಉಡುಪಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದರು.
ಟಿಪ್ಪು ಜಯಂತಿಗೆ ಸಾರ್ವಜನಿಕವಾಗಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ಸರ್ಕಾರ ರದ್ದುಪಡಿಸಿದ್ದು, ಯಾವುದೇ ಗೊಂದಲವಿಲ್ಲ. ಶಾಲಾ ಪಠ್ಯದಲ್ಲಿ ಟಿಪ್ಪು ಪಠ್ಯ ತೆಗೆಯುವುದು ಅದರ ಒಂದು ಭಾಗವಾಗಿದೆ ಎಂದು ಅವರು ಸಮರ್ಥಿಸಿಕೊಂಡರು.