ಬೆಂಗಳೂರು, ಅ.31- ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ. ದ್ವೇಷದ ರಾಜಕಾರಣ ಮಾಡಬೇಡಿ.ಕನಕಪುರಕ್ಕೆ ಮಂಜೂರಾಗಿರುವ ಮೆಡಿಕಲ್ ಕಾಲೇಜನ್ನು ಹಿಂಪಡೆಯುವ ನಿರ್ಧಾರ ಕೈ ಬಿಡಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಹಾಗೂ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಜನ್ಮ ದಿನಾಚರಣೆಯಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ವಿಶೇಷ ಪ್ರಕರಣ ಎಂದು ಪರಿಗಣಿಸಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಿ ಬಜೆಟ್ನಲ್ಲಿ ಘೋಷಿಸಲಾಗಿತ್ತು. ಅದಕ್ಕೆ ಹಣಕಾಸು ಇಲಾಖೆಯ ಅನುಮತಿ ಸಿಕ್ಕಿದೆ.ಟೆಂಡರ್ ಕೂಡ ಆರಂಭವಾಗಿತ್ತು. ಈಗ ಅದನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಸ್ಥಳಾಂತರಿಸಲು ಒಪ್ಪಲು ಸಾಧ್ಯವಿಲ್ಲ ಎಂದರು.
ತಾಲ್ಲೂಕಿಗೊಂದು ಮೆಡಿಕಲ್ ಕಾಲೇಜು ಸಾಧ್ಯವಿಲ್ಲ ಎಂದು ಬಿಜೆಪಿ ಸಚಿವರು ವಾದಿಸುತ್ತಿದ್ದಾರೆ. ಎಲ್ಲಾ ಪ್ರತಿನಿಧಿಗಳಿಗೂ ಅವರದ್ದೇ ಆದ ಆದ್ಯತೆಗಳಿರುತ್ತವೆ. ಕೆಲವರು ಸೈಕಲ್, ಸೀರೆ, ಅಕ್ಕಿ ಕೊಟ್ಟೋ ಎಂದು ಹೇಳುತ್ತಾರೆ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರಾಜೀವ್ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವನ್ನು ರಾಮನಗರಕ್ಕೆ ಸ್ಥಳಾಂತರಿಸಿದರು.
ಎಸ್.ಎಂ.ಕೃಷ್ಣ ಅವರ ಸರ್ಕಾರದ ಅವಧಿಯಲ್ಲಿ 50 ಎಕರೆ ಜಮೀನನ್ನು ದೊಡ್ಡ ಆಲದ ಮರದ ಬಳಿ ಕೊಡಲಾಗಿತ್ತು. ಅಲ್ಲಿ ವಿವಿ ಸ್ಥಾಪಿಸುವ ಬದಲಾಗಿ ರಾಮನಗರಕ್ಕೆ ಸ್ಥಳಾಂತರಿಸಿರಲಿಲ್ಲವೆ ? ಎಲ್ಲರಿಗೂ ಅವರದ್ದೇ ಆದ ಉದ್ದೇಶಗಳಿರುತ್ತವೆ. ಬೆಂಗಳೂರಿನಲ್ಲಿ ಇರಬೇಕಾದ ಹಲವು ವಿಶ್ವವಿದ್ಯಾಲಯಗಳನ್ನು ಬೆಳಗಾವಿ, ಗದಗ, ಬಿಜಾಪುರ ಇತರ ಕಡೆಗಳಿಗೆ ಸ್ಥಳಾಂತರಿಸಲಾಗಿದೆ ಎಂದರು.
ನನಗೂ ನನ್ನದೇ ಆದ ಆಕಾಂಕ್ಷೆ ಇದೆ.ಕನಕಪುರದಲ್ಲಿ ಮೆಡಿಕಲ್ ಕಾಲೇಜು ಮಾಡಬೇಕು ಎಂಬ ಗುರಿ ಇದೆ.ಅದಕ್ಕಾಗಿ ವಿಶೇಷ ಪ್ರಕರಣ ಎಂದು ಪರಿಗಣಿಸಿ 90 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.ಚಿಕ್ಕಬಳ್ಳಾಪುರ ಜಿಲ್ಲೆಗೆ ಕಾಲೇಜು ಕೊಡಲು ನನ್ನ ವಿರೋಧ ವಿಲ್ಲ. ಒಬ್ಬ ವ್ಯಕ್ತಿ ನಿಮ್ಮ ಪಕ್ಷಕ್ಕೆ ಸೇರಿಕೊಂಡ ಎಂಬ ಕಾರಣಕ್ಕಾಗಿ ರಾಜಕಾರಣ ಮಾಡಬೇಡಿ, ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಕಾಲ ಬದಲಾಗುತ್ತಿರುತ್ತದೆ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಕೆ ಕೊಟ್ಟರು.
ಮೆಡಿಕಲ್ ಕಾಲೇಜು ಸ್ಥಳಾಂತರ ಕೈ ಬಿಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಹಾಗೂ ವೈಯಕ್ತಿಕವಾಗಿಯೂ ಅವರಿಗೆ ಮನವಿ ಮಾಡುತ್ತೇನೆ ಎಂದರು.
ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಇಂದಿರಾಗಾಂಧಿ ಮತ್ತು ಸರ್ದಾರ್ವಲ್ಲಭಭಾಯ್ ಪಟೇಲ್ ಅವರ ಕೊಡುಗೆಗಳನ್ನು ಸ್ಮರಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಹಿರಿಯರು ಹಾಕಿಕೊಟ್ಟ ಸಂಪ್ರದಾಯ ಇದೆ.ನಾವು ಹೊಸದಾಗಿ ಯಾವುದನ್ನೂ ಸೃಷ್ಟಿಸಬೇಕಿಲ್ಲ. ಹಿಂದಿನ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಹೋದರೆ ಸಾಕು. ಹೊಸ ಪೀಳಿಗೆಗೆ ಪೂರಕವಾದ ಆಲೋಚನೆಗಳನ್ನು ಮೈಗೂಡಿಸಿಕೊಳ್ಳಬೇಕು. ಪಕ್ಷ ನಿಷ್ಠೆ ಇರಬೇಕು. ಕಾಂಗ್ರೆಸ್ ಪಕ್ಷದಲ್ಲಿ ಒಂದಲ್ಲಾ ಒಂದು ರೀತಿ ಅಧಿಕಾರ ಸಿಕ್ಕೇ ಸಿಗುತ್ತದೆ. ತಾಳ್ಮೆಯಿಂದ ಕಾಯಬೇಕು ಎಂದು ಸಲಹೆ ನೀಡಿದರು.