ಬೆಂಗಳೂರು, ಅ.28- ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‍ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಬಾರದೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅ.31 ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಕೇಂದ್ರ ಸರ್ಕಾರ 15 ದೇಶಗಳೊಂದಿಗೆ ಸೇರಿ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದಲ್ಲಿ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಚಿಂತಿಸಿದ್ದು, ಒಪ್ಪಂದಕ್ಕೆ ಸಹಿ ಹಾಕಿದರೆ ನಮ್ಮ ಆಹಾರ ಮತ್ತು ಕೃಷಿ ಕ್ಷೇತವು ನಷ್ಟಕ್ಕೆ ಗುರಿಯಾಗುತ್ತವೆ. ಬಹುತೇಕ ಕೃಷಿ ಉತ್ಪನ್ನ ಗಳ ಮೇಲೆ ಆಮದು ಸುಂಕವನ್ನು ಶಾಶ್ವತವಾಗಿ ಶೂನ್ಯಕ್ಕೆ ತರುತ್ತದೆ. ಇದೇ ಸಮಯದಲ್ಲಿ ಅನೇಕ ದೇಶಗಳು ತಮ್ಮ ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ನೋಡುತ್ತಿವೆ. ಇದರಿಂದ ನಮ್ಮ ದೇಶದ ಕೋಟ್ಯಂತರ ಸಣ್ಣ ರೈತರ ಹಾಗೂ ಮಹಿಳೆಯರ ಜೀವನೋಪಾಯವನ್ನು ಬೆಂಬಲಿಸುವ ಹೈನುಗಾರಿಕೆ ಕ್ಷೇತ್ರಕ್ಕೆ ತೀವ್ರ ಅಪಾಯ ಒದಗಲಿದೆ ಎಂದರು.
ಈ ಒಪ್ಪಂದದಿಂದ ಬೀಜ ಕಂಪನಿಗಳು ತಮ್ಮ ಬೌದ್ಧಿಕ ಆಸ್ತಿ ಹಕ್ಕುಗಳನ್ನು ರಕ್ಷಿಸಲು ಹೆಚ್ಚಿನ ಅಧಿಕಾರವನ್ನು ಪಡೆಯುತ್ತವೆ. ರೈತರು ಬೀಜಗಳನ್ನು ಉಳಿಸಿ ವಿನಿಮಯ ಮಾಡಿಕೊಂಡರೆ ಅಪರಾಧಿಗಳಾಗುತ್ತಾರೆ. ವಿದೇಶಿ ಕಂಪೆನಿಗಳು ರಾಷ್ಟ್ರೀಯ ನ್ಯಾಯಾಲಯಗಳನ್ನು ಬೈಪಾಸ್ ಮಾಡಬಹುದು. ವಿದೇಶಿ ಹೂಡಿಕೆದಾರರು ಕೃಷಿ ಭೂಮಿಯನ್ನು ಖರೀದಿಸಲು ಅನುಕೂಲವಾಗುತ್ತದೆ.ಸೂಪರ್ ಮಾರುಕಟ್ಟೆ ಮತ್ತು ದೊಡ್ಡ ಕಂಪನಿಗಳು ನೇರ ಚಿಲ್ಲರೆ ವ್ಯಾಪಾರದಲ್ಲಿ ಭಾಗವಹಿಸುವುದರಿಂದ ಸ್ಥಳೀಯ ಮಾರುಕಟ್ಟೆ ಮತ್ತು ಸಣ್ಣ ವ್ಯಾಪಾರಸ್ಥರನ್ನು ಅಳಿಸಿ ಹಾಕುತ್ತದೆ.ಇದು ರೈತರು ಮತ್ತು ವ್ಯಾಪಾರಸ್ಥರಿಗೆ ಮಾರಕವಾಗಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ : ನೆರೆ ಸಂತ್ರಸ್ತರ ಸಮಸ್ಯೆಗಳ ಪರಿಹರಿಸುವ ಕಡೆ ಗಮನ ಹರಿಸದೆ ತಿರಸ್ಕಾರ ಮನೋಭಾವನೆಯಿಂದ ನೋಡುತ್ತಿರುವುದನ್ನು ವಿರೋಧಿಸಿ ನ.7ರಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆಗೆ ಮುತ್ತಿಗೆ ಹಾಕಲು ರೈತ ಸಂಘ ನಿರ್ಧರಿಸಿದೆ.
ರಾಜ್ಯದಲ್ಲಿ ನೆರೆ ಪ್ರವಾಹದಿಂದ 4394 ಗ್ರಾಮಗಳು ಮುಳುಗಡೆಯಾಗಿ 2.5 ಲಕ್ಷಕ್ಕೂ ಅಧಿಕ ಮನೆಗಳು ಸಂಪೂರ್ಣವಾಗಿ ನೆಲಸಮವಾಗಿವೆ. ಪ್ರವಾಹದಿಂದ 15 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ನಷ್ಟವಾಗಿದೆ. ವಿಧಾನಮಂಡಲ ಅಧಿವೇಶನ ಸಮಯದಲ್ಲಿ ಮುಖ್ಯಮಂತ್ರಿಗಳು ಎಲ್ಲಾ ಸಮಸ್ಯೆಯನ್ನು 15 ದಿನಗಳಲ್ಲಿ ಸರಿಪಡಿಸಲು ಭರವಸೆ ನೀಡಿದ್ದರು. ಆದರೆ, ಈವರೆಗೂ ನೆರ ಸಂತ್ರಸ್ತರ ಸಮಸ್ಯೆಗೆ ಪರಿಹಾರ ನೀಡಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.