ಬೆಂಗಳೂರು, ಅ.28- ನಗರದಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಂಚಿಸುವ ಆರೋಪದ ಮತ್ತೊಂದು ಕಂಪನಿ ಪತ್ತೆಯಾಗಿದ್ದು, ಅದರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ಜಾಜ್ ಇಂಟರ್ನ್ಯಾಷನಲ್ ಅಸೋಸಿಯೇಷನ್ ಗ್ರೂಪ್ ಆಫ್ ಕಂಪನಿ ಬೆಂಗಳೂರಿನಲ್ಲಿ 2014ರ ಅಕ್ಟೋಬರ್ನಿಂದ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಂದ 285 ಕೋಟಿ ರೂ.ಸಂಗ್ರಹಿಸಿದೆ.ಅದರ ಆಸ್ತಿ ಮುಟ್ಟುಗೋಲಿಗೆ ಆದೇಶಿಸಲಾಗಿದೆ.ಆನೇಕಲ್ನಲ್ಲಿ 10 ಕೋಟಿ ರೂ.ಮೌಲ್ಯದ ಆ ಕಂಪನಿಗೆ ಸಂಬಂಧಿಸಿದ ಆಸ್ತಿ ಮುಟ್ಟುಗೋಲು ಹಾಕಿಕೋಳ್ಳಲಾಗುತ್ತಿದೆ.
ಸಾರ್ವಜನಿಕರಿಗೆ ವಂಚಿಸುವಂತಹ ಕಂಪನಿಗಳನ್ನು ಆರಂಭದಲ್ಲೇ ಪತ್ತೆ ಹಚ್ಚಿ ತಡೆಗಟ್ಟಲು ಜಿಲ್ಲಾದಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಹಸ್ತಾಂತರ: ಬೆಂಗಳೂರು ನಗರದ ರಸ್ತೆ ಅಗಲೀಕರಣ, ಮೇಲ್ಸೇತುವೆಗೆ ರಕ್ಷಣಾ ಇಲಾಖೆಯ ಜಾಗವನ್ನು ಬಳಸಿಕೊಳ್ಳಲಾಗುತ್ತಿದೆ. ಅದಕ್ಕೆ ಪ್ರತಿಯಾಗಿ ಕಂದಾಯ ಇಲಾಖೆಯಿಂದ ಹಾಸನದಲ್ಲಿ 7.14 ಎಕರೆ, ಪಾಂಡವಪುರದಲ್ಲಿ 17.5 ಎಕರೆ, ಮಾಗಡಿಯಲ್ಲಿ 12 ಎಕರೆ ಸೇರಿದಂತೆ ಒಟ್ಟು 36 ಎಕರೆ ಜಾಗವನ್ನು ರಕ್ಷಣಾ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದರು.