ಹರಿಯಾಣದಲ್ಲಿ ಫಲಿಸಿದ ಅಮಿತ್ ಶಾ ರಣತಂತ್ರ; ಜೆಜೆಪಿ ಮೈತ್ರಿಯೊಂದಿಗೆ ಮತ್ತೊಮ್ಮೆ ಅಧಿಕಾರ ಹಿಡಿದ ಕಮಲ

ನವದೆಹಲಿ; ಶುಕ್ರವಾರ ರಾತ್ರಿ ಇಡೀ ನಡೆದ ರಾಜಕೀಯ ಹೈಡ್ರಾಮಾಗೆ ಸಾಕ್ಷಿಯಾಗಿದ್ದ ಹರಿಯಾಣದಲ್ಲಿ ಸ್ಥಳೀಯ ಜೆಜೆಪಿ ಪಕ್ಷದ ಜೊತೆಗೆ ಮೈತ್ರಿ ಸಾಧಿಸುವಲ್ಲಿ ಸಫಲವಾಗಿರುವ ಬಿಜೆಪಿ ಮತ್ತೆ ಸರ್ಕಾರ ರಚನೆ ಮಾಡುವುದು ಬಹುತೇಕ ಖಚಿತವಾಗಿದೆ.

ಅಕ್ಟೋಬರ್ 21 ರಂದು ನಡೆದ ಚುನಾವಣೆಯನ್ನು ಹರಿಯಾಣ ಬಿಜೆಪಿ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ನೇತೃತ್ವದ ಎದುರಿಸಿತ್ತು. ಆದರೆ, ಬಹು ನಿರೀಕ್ಷೆಯ ನಡುವೆಯೂ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸುವಲ್ಲಿ ಮುಗ್ಗರಿಸಿತ್ತು. 90 ವಿಧಾನಸಭಾ ಕ್ಷೇತ್ರಗಳಿರುವ ರಾಜ್ಯದಲ್ಲಿ ಕೇವಲ 40 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಈ ನಡುವೆ ಕಾಂಗ್ರೆಸ್ ಸ್ಥಳೀಯ ಜೆಜೆಪಿ(ಜನನಾಯಕ ಜನತಾ ಪಾರ್ಟಿ) ಪಕ್ಷದ ಜೊತೆಗೆ ಮೈತ್ರಿ ಸಾಧಿಸಿಕೊಂಡು ಸರ್ಕಾರ ನಡೆಸುವ ಸೂಚನೆ ನೀಡಿದ್ದರು. ಜೆಜೆಪಿ ಪಕ್ಷದ ಮುಖ್ಯಸ್ಥ ದುಷ್ಯಂತ್ ಚೌಟಾಲ ಅವರಿಗೆ ಸಿಎಂ ಸ್ಥಾನ ನೀಡುವ ಭರವಸೆ ನೀಡಿದ್ದರು. ಈ ವೇಳೆ ಬಹಿರಂಗ ಹೇಳಿಕೆ ನೀಡಿದ್ದ ದುಷ್ಯಂತ್ ಚೌಟಾಲ “ಯಾವುದೇ ಕಾರಣಕ್ಕೂ ತಮ್ಮ ಪಕ್ಷ ಬಿಜೆಪಿ ಜೊತೆಗೆ ಮೈತ್ರಿ ಸಾಧಿಸದು” ಎಂದು ಸ್ಪಷ್ಟೀಕರಣ ನೀಡಿದ್ದರು. ಆದರೆ, ಶುಕ್ರವಾರದ ಮಾತುಕತೆ ಈ ಎಲ್ಲಾ ಹೇಳಿಕೆಗಳನ್ನು ಉಲ್ಟಾ ಹೊಡೆಸಿದೆ.
ಹರಿಯಾಣದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡುವಂತೆ ಸಿಎಂ ಮನೋಹರ್ ಲಾಲ್ ಕಟ್ಟರ್ ರಾಜ್ಯಪಾಲರಿಗೆ ಮನವಿ ನೀಡಿದ್ದ ಬೆನ್ನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಅಖಾಡಕ್ಕೆ ಪ್ರವೇಶಿಸಿದ್ದರು. ಇದೀಗ ನಿನ್ನೆ ರಾತ್ರಿ ತುರ್ತು ಪತ್ರಿಕಾಗೋಷ್ಠಿ ನಡೆಸಿರುವ ಬಿಜೆಪಿ ಮತ್ತು ಜೆಜೆಪಿ ನಾಯಕರು ತಾವು ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುವುದಾಗಿ ತಿಳಿದ್ದಾರೆ. ಅಲ್ಲಿಗೆ ಅಮಿತ್ ಶಾ ಯೋಜನೆ ಯಶಸ್ವಿಯಾದಂತಾಗಿದೆ.
ಅಲ್ಲದೆ, ಈ ಕುರಿತು ಮಾತನಾಡಿರುವ “ದುಷ್ಯಂತ್ ಚೌಟಾಲ ಹರಿಯಾಣದ ಅಭಿವೃದ್ಧಿಗೆ ಈ ಮೈತ್ರಿ ಅನಿವಾರ್ಯ” ಎಂದು ಘೋಷಿಸಿದ್ದಾರೆ. ಈ ಘೋಷಣೆಯೊಂದಿಗೆ ಕಾಂಗ್ರೆಸ್-ಜೆಜೆಪಿ ಮೈತ್ರಿ ಸರ್ಕಾರ ಆಡಳಿತಕ್ಕೆ ಬರಲಿದೆ, ಬಿಜೆಪಿ ಸ್ವತಂತ್ರ್ಯ ಅಭ್ಯರ್ಥಿಗಳ ಬೆಂಬಲದೊಂದಿಗೆ ಸರ್ಕಾರ ರಚಿಸಲಿದ್ದಾರೆ ಎಂಬ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಂತಾಗಿದೆ.
ಇದೀಗ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ 10 ಸ್ಥಾನ ಗಳಿಸಿರುವ ಜನನಾಯಕ ಜನಾತಾ ಪಕ್ಷ ಮತ್ತು ಬಿಜೆಪಿ ಮೈತ್ರಿಯೊಂದಿಗೆ ಹರಿಯಾಣದಲ್ಲಿ ಸರ್ಕಾರ ರಚನೆಮಾಡುವುದು ಖಚಿತವಾಗಿದೆ. ಹೀಗಾಗಿ ಮತ್ತೊಮ್ಮೆ ಮನೋಹರ್ ಲಾಲ್ ಕಟ್ಟರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೆ, ಮೊದಲ ಬಾರಿಗೆ ಜೆಜೆಪಿ ಪಕ್ಷ ಕಟ್ಟಿ ಸಫಲವಾಗಿರುವ ದುಷ್ಯಂತ್ ಚೌಟಾಲ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ