ಬೆಂಗಳೂರು, ಅ.25-ಉತ್ತರ ಕರ್ನಾಟಕದ 12 ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳು ನೆರೆಯಿಂದ ನೀರಿನಲ್ಲಿ ಮುಳುಗಿವೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ನೆರವಿಗೆ ಬಾರದೆ ಮಲಗಿವೆ ಎಂದು ಆರೋಪಿಸಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಬಳಿ ಕರಾಳ ದಿನಾಚರಣೆ ಹಮ್ಮಿಕೊಂಡಿದ್ದಾರೆ.
ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಎರಡನೇ ಬಾರಿ ಪ್ರವಾಹ ಸಂಭವಿಸಿದ ಜನರು ಅತಂತ್ರರಾಗಿದ್ದಾರೆ.ಲಕ್ಷಾಂತರ ಎಕರೆ ಭೂಮಿಯಲ್ಲಿದ್ದ ಬೆಳೆ ನಾಶವಾಗಿದೆ. ಹತ್ತಾರು ಜನ ಸಾವನ್ನಪ್ಪಿ, ನೂರಾರು ಜಾನುವಾರುಗಳು ಮೃತಪಟ್ಟಿವೆ.
ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಮೊದಲ ಬಾರಿ ಪ್ರವಾಹ ಸಂಭವಿಸಿದಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಿಹಾರ ನೀಡುವಲ್ಲಿ ಸಂಪೂರ್ಣ ವಿಫಲವಾಗಿತ್ತು.ಜನ ಬೀದಿ ಪಾಲಾಗಿದ್ದರು. ಮತ್ತೆ ಎರಡನೇ ಬಾರಿ ಪ್ರವಾಹ ಸಂಭವಿಸಿದೆ.ಇನ್ನೂ ಪರಿಹಾರ ನೀಡಲು ಮೀನಾಮೇಷ ಎಣಿಸುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕಣ್ಣು, ಕಿವಿ ಇಲ್ಲದಂತಾಗಿದೆ.ಅದಕ್ಕಾಗಿ ಎಲ್ಲಾ ಕನ್ನಡಪರ ಸಂಘಟನೆಗಳೊಂದಿಗೆ ನಾಳೆ ಹುಬ್ಬಳ್ಳಿಯಲ್ಲಿ ಕರಾಳ ದಿನಾಚರಣೆ ಆಚರಿಸುತ್ತಿರುವುದಾಗಿ ಹೇಳಿದರು.
ಸಂತ್ರಸ್ತರು ಪರಿಹಾರ ಪಡೆಯಲು ಸರ್ಕಾರ 108 ನಿಯಮಾವಳಿಗಳನ್ನು ರೂಪಿಸುತ್ತಿದೆ.ಇದರಿಂದಲೂ ಕೂಡ ಜನ ಬೇಸತ್ತು ಹೋಗಿದ್ದಾರೆ.ಉತ್ತರ ಕರ್ನಾಟಕ ಬಗ್ಗೆ ಮೊದಲಿನಿಂದಲೂ ಎಲ್ಲಾ ಸರ್ಕಾರಗಳು ತಾತ್ಸಾರ ಧೋರಣೆ ಅನುಸರಿಸುತ್ತಿವೆ. ಪ್ರವಾಹ ಬಂದಾಗಲೂ ಕೂಡ ಇದೇ ಧೋರಣೇ ಅನುಸರಿಸುತ್ತಿರುವುದು ಅತ್ಯಂತ ದುರದೃಷ್ಟಕರ.ಇದನ್ನು ವಿರೋಧಿಸಿ ನಾವು ನಿರಂತರ ಹೋರಾಟ ಮಾಡುತ್ತೇವೆ ಎಂದು ಹೇಳಿದರು.