ಬೀದರ ಅಕ್ಟೋಬರ್ 25 : ಪಶು ಸಂಗೋಪನೆ, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್, ಹಜ್ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 25ರಂದು ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ 2019-20ನೇ ಸಾಲಿನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಸ್ಪತ್ರೆ ಮತ್ತು ಬ್ರಿಮ್ಸ್ ಸ್ಥಿತಿಗತಿಯ ಬಗ್ಗೆ ಗಂಟೆಗೂ ಹೆಚ್ಚು ಸಮಯ ಚರ್ಚೆ ನಡೆಯಿತು.
ಜಿಲ್ಲೆಯಲ್ಲಿ ಡೆಂಗೆ ಬಗ್ಗೆ ಜನರಲ್ಲಿ ಆತಂಕ ಹೆಚ್ಚುತ್ತಿದೆ. ಕೆಲ ದಿನಗಳ ಹಿಂದೆ ತಾವು ಖುದ್ದು ಆಸ್ಪತ್ರೆಗೆ ಭೇಟಿ ನೀಡಿದಾಗ ಒಬ್ಬರೂ ವೈದ್ಯರು ಇಲ್ಲದಿರುವುದು ಕಂಡು ಬಂದಿತು. ಆಸ್ಪತ್ರೆಯಲ್ಲಿ ಸಕಾಲಕ್ಕೆ ರಕ್ತ ಕೂಡ ಸಿಗುತ್ತಿಲ್ಲ. ಹೀಗಾದರೆ ಹೇಗೆ ಎಂದು ಶಾಸಕರಾದ ರಹೀಂ ಖಾನ್ ಅವರು ಸಭೆಯಲ್ಲಿ ಎತ್ತಿದ ಪ್ರಶ್ನೆಯ ಮೇಲೆ ಹಲವಾರು ವಿಷಯಗಳು ಚರ್ಚೆಯಾದವು.
ಡೆಂಗೆ ಪ್ರಕರಣ, ಆಸ್ಪತ್ರೆಗಳಲ್ಲಿ ಅಶುಚಿತ್ವ, ವೈದ್ಯರ ಗೈರು ಹಾಜರಿ, ಆಸ್ಪತ್ರೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಇಲ್ಲದಿರುವುದು, ಎಂಆರ್ ಐ ಸ್ಕ್ಯಾನ್ ಮಶೀನ್ ಅಳವಡಿಕೆ,
ಆ್ಯಂಬುಲನ್ಸ್ ಕೊರತೆ, ಹಾವು ಕಡಿತ ಔಷಧಿ ಲಭ್ಯತೆ ಸೇರಿದಂತೆ ನಾನಾ ವಿಷಯಗಳ ಮೇಲೆ ಚರ್ಚೆ ನಡೆಯಿತು.
ಈ ವೇಳೆ ಸಚಿವರಾದ ಪ್ರಭು ಚವ್ಹಾಣ್ ಅವರು, ನೀವು ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಭೇಟಿ ಕೊಡ್ತೀರಾ? ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯ ಇದೆಯಾ? ಎಂದು ಡಿಎಚ್ ಓ ಅವರನ್ನು ಕೇಳಿದರು. ತಾವು, ಈಗಾಗಲೇ ಜಿಲ್ಲೆಯ ಭಾಲ್ಕಿ, ಬಸವಕಲ್ಯಾಣ ಮತ್ತು ಇನ್ನೀತರ ಆಸ್ಪತ್ರೆಗಳಿಗೆ ಭೇಟಿ ನೀಡಿ ತಿಳಿಸಿದ್ದರೂ ಅಲ್ಲಿ ಶುಚಿತ್ವಕ್ಕೆ ಒತ್ತು ಕೊಟ್ಟಿಲ್ಲ. ಇದು ಸರಿಯಲ್ಲ. ತಾವು ಎಲ್ಲಾ ಆಸ್ಪತ್ರೆಗೆ ನಿಯಮಿತವಾಗಿ ಭೇಟಿ ಕೊಡಬೇಕು. ಗೈರು ಹಾಜರಾಗುವ ವೈದ್ಯಾಧಿಕಾರಿಗಳಿಗೆ ನೊಟೀಸ್ ನೀಡಬೇಕು ಎಂದು ಡಿಎಚ್ಓ ಅವರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಮಾನೀಟರ್ ಮಾಡಿ:
ವೈದ್ಯರಲ್ಲಿ ಸೇವಾ ಮನೋಭಾವ ಬಂದಾಗಲೇ ಆಸ್ಪತ್ರೆಗಳು ಸುಧಾರಿಸುತ್ತವೆ. ಪೊಲೀಸ್ ಅಧಿಕಾರಿಗಳು ಸೇರಿದಂತೆ ಇತರೆ ಕೆಲ ಅಧಿಕಾರಿಗಳು ಒಳಗೊಂಡು ಪ್ರತಿದಿನ ಅಲ್ಲಿ ಪರಿಶೀಲನೆ ನಡೆಸಿ, ವರದಿ ಮಾಡಬೇಕು. ಹೀಗೆ ಪ್ರತಿದಿನ ಮಾನಿಟರ್ ಮಾಡಿದಲ್ಲಿ ಇದು ಸರಿ ಹೋಗಬಹುದು ಎಂದು ಸಂಸದರಾದ ಭಗವಂತ ಖೂಬಾ ಹೇಳಿದರು.
ಹೊಸ ಆಸ್ಪತ್ರೆಯ ಸುತ್ತಲೂ ಸೇಪ್ಟಿ ಟ್ಯಾಂಕ್ ನಿಂದ ಕಲುಷಿತ ನೀರು ಹೊರ ಬರುತ್ತಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ ತಿಳಿಸಿದರು.
ಶುಚಿತ್ವಕ್ಕೆ ಒತ್ತು ಕೊಡಿ: ಆಸ್ಪತ್ರೆಯಲ್ಲಿನ ವ್ಯವಸ್ಥೆ ಬಗ್ಗೆ ವೈದ್ಯಾಧಿಕಾರಿಗಳಿಂದ ವಿವರಣೆ ಕೇಳಿದ ಸಚಿವರು, ಜಿಲ್ಲಾ ಆಸ್ಪತ್ರೆ ಮತ್ತು ಬ್ರೀಮ್ಸ ಮತ್ತು ಜಿಲ್ಲೆಯ ಎಲ್ಲಾ ಕಡೆಗಳಲ್ಲಿನ ಆಸ್ಪತ್ರೆಗಳಲ್ಲಿ ಶುಚಿತ್ವಕ್ಕೆ ಒತ್ತು ಕೊಡಿ. ಡೆಂಗೆ ಕಂಟ್ರೋಲ್ ಮಾಡಿರಿ. ಔಷಧಿ ರೆಡಿ ಇಟ್ಟುಕೊಳ್ಳಿ. ಜನತೆ ಗುಟುಕಾ ಜಗಿದು ಉಗುಳುದಂತೆ ನೋಡಿಕೊಳ್ಳಿ. ಜನತೆ ಚಿಕಿತ್ಸೆಗಾಗಿ ಸೊಲ್ಲಾಪುರ, ಹೈದ್ರಾಬಾದ್ ಹೋಗಬಾರದು ಎಂದು ತಿಳಿಸಿದರು. ತಾವು ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿ, ಆಸ್ಪತ್ರೆಗೆ ಏನು ಬೇಕು ಎಲ್ಲಾ ಸೌಕರ್ಯ ಕೊಡಿಸುವುದಾಗಿ ಸಚಿವರು ತಿಳಿಸಿದರು.
ರೋಗಿಗಳಿಗೆ ಸ್ಪಂದಿಸಿ:ಸಿರಿಯಸ್ ಇರುವ ರೋಗಿಗಳನ್ನು ಕರೆದೊಯ್ದರೆ ವೈದ್ಯರು ಸ್ಪಂದಿಸುತ್ತಿಲ್ಲ ಎಂದು ಜನರು ನಮಗೆ ದೂರವಾಣಿ ಮೂಲಕ ತಿಳಿಸುತ್ತಾರೆ. ಇದು ತಪ್ಪಬೇಕು. ರೋಗಿಗಳಿಗೆ ಸ್ಪಂದಿಸಬೇಕು. ಅವರ ಸುಖ ದುಃಖ ಕೇಳಬೇಕು. ವೈದ್ಯರ ಬಗ್ಗೆ ಕಂಪ್ಲೆಂಟ್ ಇದೆ. ಇದು ಸರಿಯಲ್ಲ ಎಂದು ಸಚಿವರು ಎಚ್ಚರಿಸಿದರು.
ಬೇರೆಡೆ ವೈದ್ಯರು ಬರಲಿ:
ಜಿಲ್ಲಾಸ್ಪತ್ರೆ, ಬ್ರಿಮ್ಸ್ ನಲ್ಲಿ ವ್ಯವಸ್ಥೆ ಬಗ್ಗೆ ಮಾನ್ಯ ಪ್ರಾದೇಶಿಕ ಆಯುಕ್ತರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಗಳಲ್ಲಿ ಸ್ಥಳೀಯ ವೈದ್ಯರೇ ಹೆಚ್ಚಿರುವ ಕಾರಣ ಅವರನ್ನು ಬೇರೆಡೆ ವರ್ಗಾವಣೆ ಮಾಡಿ, ಬೇರೆಕಡೆಯ ಪ್ರದೇಶದ ವೈದ್ಯರನ್ನು ತಂದಾಗ ಆಸ್ಪತ್ರೆ ಸುಧಾರಣೆ ಸಾಧ್ಯವಾಗಬಹುದು ಎಂದು ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ ತಿಳಿಸಿದರು.
ಜನತೆ ಭಯಪಡಬೇಕಿಲ್ಲ:
ಜಿಲ್ಲೆಯಲ್ಲಿ ಡೆಂಗೆಯಿಂದ ಯಾರು ಕೂಡ ಸಾವಿಗೀಡಾಗಿಲ್ಲ. ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆ ನಡೆಯುತ್ತಿದೆ. ಗ್ರಾಮೀಣ
ಪ್ರದೇಶದಲ್ಲಿ ಜನತೆಗೆ ಉರಿ ಜ್ವರ ಬರ್ತಿದೆ. ಟೆಸ್ಟ್ ಮಾಡಿದ್ರೆ ಹಾಗೆ ಕಾಣುವುದಿಲ್ಲ. ಜನತೆ ಭಯ ಪಡಬೇಕಿಲ್ಲ. ಡೆಂಗೆ ನಿಯಂತ್ರಣ, ಮುನ್ನೆಚ್ಚರಿಕೆಯ ಬಗ್ಗೆ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. ಹಾಸ್ಪಿಟಲನಲ್ಲಿ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ ಎಂದು ಡಿಎಚ್ಓ ಎಂ.ಎ.ಜಬ್ಬಾರ ತಿಳಿಸಿದರು.
ಮುನ್ನೆಚ್ಚರಿಕೆ ವಹಿಸಿದ್ದೇವೆ: ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ವಿಜಯಕುಮಾರ
ಅಂತಪ್ಪನವರು ಮಾತನಾಡಿ, ಪ್ಲೇಟ್ ಲೇಟ್ಸ್ 500 ಕ್ಕಿಂತ ಕಡಿಮೆ ಬಂದರೆ ಡೆಂಗೆ ಬಂದಿದೆ ಎಂದು ಜನತೆ ಅಂಜಬೇಕಿಲ್ಲ. ಡೆಂಗೆ ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ
ಆಸ್ಪತ್ರೆಗಳಲ್ಲಿ ಎಲ್ಲಾ ಸಿದ್ದತೆ ಮಾಡಿದ್ದೇವೆ
ಎಂದು ತಿಳಿಸಿದರು.