ಬೆಂಗಳೂರು, ಅ.25-ಕಾಂಗ್ರೆಸ್-ಜೆಡಿಎಸ್ ಪಕ್ಷದ 17 ಅನರ್ಹ ಶಾಸಕರ ಪ್ರಕರಣ ಕಾವೇರಿದ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಡೆದಿದ್ದು, ಕಾಂಗ್ರೆಸ್ ಪರ ವಕೀಲರಾದ ಕಪಿಲ್ ಸಿಬಾಲ್ ಅವರು ಪ್ರಕರಣವನ್ನು ಸಂವಿಧಾನಿಕ ಪೀಠಕ್ಕೆ ಅಥವಾ ಹೈಕೋರ್ಟ್ಗೆ ವರ್ಗಾಯಿಸಬೇಕೆಂದು ಮನವಿ ಮಾಡಿದರು.
ನ್ಯಾಯಮೂರ್ತಿ ಎನ್.ವಿ.ರಮಣ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಈ ಹಿಂದಿನ ಸ್ಪೀಕರ್ ರಮೇಶ್ಕುಮಾರ್ ಅವರು 17 ಶಾಸಕರನ್ನು ಅನರ್ಹಗೊಳಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ತಮ್ಮ ವಾದ ಮಂಡಿಸಿದ ಕಪಿಲ್ ಸಿಬಾಲ್ ಅವರು ರಾಜೀನಾಮೆ ನೈಜತೆಯ ಬಗ್ಗೆ ಸ್ಪೀಕರ್ ಅವರಿಗೆ ಖಾತ್ರಿಯಾಗಬೇಕು. ಶಾಸಕರು ಯಾವ ಕಾರಣದಿಂದ ರಾಜೀನಾಮೆ ನೀಡಿದ್ದರು ಎಂಬುದನ್ನು ಸ್ಪೀಕರ್ ಪರಿಶೀಲಿಸಬೇಕಾಗುತ್ತದೆ.ವಿಶ್ವಾಸಮತ ಯಾಚನೆಗೆ ಮೊದಲು ಶಾಸಕರು ರಾಜೀನಾಮೆ ನೀಡಿ ಅಂಗೀಕರಿಸುವಂತೆ ಒತ್ತಡ ಹೇರಲಾಗಿತ್ತು ಎಂದು ಹೇಳಿದರು.
ರಾಜೀನಾಮೆ ನೀಡಿದ ಶಾಸಕರು ತಮ್ಮ ಕ್ಷೇತ್ರಕ್ಕೆ ಹೋಗಬೇಕಾಗಿತ್ತು. ಆದರೆ ಅವರು ರಾಜ್ಯಪಾಲರ ಬಳಿ ಹೋಗಿದ್ದೇಕೆ?ಬೇರೆ ಪಕ್ಷ ಸೇರಲೆಂದೇ ಪಕ್ಷ ಸೇರಲು ರಾಜೀನಾಮೆ ನೀಡಿರುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂದರು.
ಅಲ್ಲದೆ ಅವರು ಮುಂಬೈ ಐಷಾರಾಮಿ ಹೊಟೇಲ್ನಲ್ಲಿ ತಂಗಿದ್ದರು.ಮುಂಬೈಗೆ ಹೋಗುವಾಗ ವಿಶೇಷ ವಿಮಾನ ಯಾರಿಗೆ ಸೇರಿದ್ದು ಎಂಬುದನ್ನು ಕೂಡ ಗಮನಿಸಬೇಕಿದೆ.ರಾಜೀನಾಮೆ ಅಂಗೀಕರಿಸಿದ್ದರೆ ಅನರ್ಹತೆ ಪ್ರಶ್ನೆ ಬರುತ್ತಿರಲಿಲ್ಲ. ಅವರ ರಾಜೀನಾಮೆ ಹಿಂದೆ ಪಕ್ಷಾಂತರ ಮಾಡುವ ಇತ್ತು ಎಂದು ಮನಗಂಡು ಅವರ ರಾಜೀನಾಮೆಯನ್ನು ಅಂಗೀಕರಿಸದೆ ಅನರ್ಹರನ್ನಾಗಿ ಮಾಡಲಾಗಿದೆ ಎಂದರು.
ರಾಜೀನಾಮೆ ನೀಡಲು ಶಾಸಕರೆಲ್ಲರೂ ಒಟ್ಟಾಗಿ ಗುಂಪಾಗಿ ಬಂದಿದ್ದರು, ರಾಜ್ಯಪಾಲರ ಬಳಿಯೂ ಗುಂಪಾಗಿ ಹೋಗಿದ್ದರು. ಅವರು ಮುಂಬೈಗೂ ವಿಮಾನದಲ್ಲಿ ಪ್ರಯಾಣಿಸಿದ್ದರು. ಈ ಎಲ್ಲಾ ಬೆಳವಣಿಗೆಗಳು ಸ್ಪೀಕರ್ ಅವರಲ್ಲಿ ಅನುಮಾನ ಹುಟ್ಟಿಸಿತ್ತು ಎಂದಾಗ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ರಮಣ ಅವರು, ಸ್ಪೀಕರ್ ಸರ್ಕಾರ ಉಳಿಸಿಕೊಳ್ಳುವ ಯತ್ನಕ್ಕೆ ಕೈ ಹಾಕಬಹುದೇ? ತಟಸ್ಥವಾಗಿದ್ದು, ನ್ಯಾಯದ ಪರ ಇರಬೇಕು ತಾನೆ ಎಂದು ಹೇಳಿದರು.
ಸ್ಪೀಕರ್ ಏಳು ದಿನದ ನೋಟೀಸ್ ನೀಡಲಿಲ್ಲವೆಂದು ರಾಜೀನಾಮೆ ಸ್ವೀಕರಿಸುವ ಕಾರ್ಯವಿಧಾನವನ್ನು ಅಸಿಂಧುಗೊಳಿಸಲು ಸಾಧ್ಯವಿಲ್ಲ ಎಂದು ಕಪಿಲ್ ಸಿಬಾಲ್ ಹೇಳಿದರು.
ಸದನದ ಕಲಾಪ ನಡೆಯುವ ವೇಳೆ ಬಿಜೆಪಿಯ ಅಶ್ವತ್ಥನಾರಾಯಣ, ಸಂತೋಷ್ ಸೇರಿ ಹಲವರು ಅನರ್ಹ ಶಾಸಕರ ಜೊತೆ ಕಾಣಿಸಿಕೊಂಡಿದ್ದರು. ಮುಂಬೈನ ಐಷಾರಾಮಿ ಹೊಟೇಲ್ನಲ್ಲಿ ಅವರ ಜೊತೆ ಇದ್ದರು.ಇಷ್ಟೆಲ್ಲ ನಡೆಯುತ್ತಿರುವಾಗ ಸ್ಪೀಕರ್ ಸುಮ್ಮನಿರಬೇಕಿತ್ತೇ?ರಾಜೀನಾಮೆ ನೀಡಿದ ತಕ್ಷಣ ಮುಂಬೈಗೆ ಹೋಗುವ ಅವಶ್ಯಕತೆ ಏನಿತ್ತು. ಆ ವಿಶೇಷ ವಿಮಾನ ಯಾರಿಗೆ ಸೇರಿದ್ದು.ಇದನ್ನು ಪರಾಮರ್ಶಿಸಬೇಕು ಎಂದು ಮನವಿ ಮಾಡಿದರು.
ಮತ್ತೆ ಚುನಾವಣೆ ಎದುರಾದರೆ ಅನರ್ಹರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು.ಚುನಾವಣೆಗೆ ಸ್ಪರ್ಧಿಸುವುದಾದರೆ ಅನರ್ಹಗೊಳಿಸುವ ಅವಶ್ಯಕತೆ ಏನಿದೆ?ಪಕ್ಷಾಂತರ ಮಾಡಲು ಅವಕಾಶ ನೀಡಿದಂತಾಗುತ್ತದೆ.ಹಾಗಾಗಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಹೇಳಿದರು.
ಅನರ್ಹ ಶಾಸಕರ ವಿಚಾರಣೆ ನಡೆಯುತ್ತಿದೆ.ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಚುನಾವಣಾ ಆಯೋಗ ಚುನಾವಣೆ ಮುಂದೂಡುವುದು ಸರಿಯಲ್ಲ.
ವಕೀಲರಾದ ದೇವದತ್ತ ಕಾಮತ್ ವಾದ ಮಂಡಿಸಿ ಸ್ಪೀಕರ್ ಆದೇಶ ಪ್ರಶ್ನಾತೀತ ಅವರ ಆದೇಶವನ್ನು ಯಾರೂ ಪ್ರಶ್ನಿಸುವಂತಿಲ್ಲ.ವಿಪ್ ನೀಡಿದ್ದರೂ ಸದನಕ್ಕೆ ಹಾಜರಾಗದ ಸದಸ್ಯರನ್ನು ಸ್ಪೀಕರ್ ಅವರು ಅನರ್ಹಗೊಳಿಸಿದ್ದಾರೆ. ಶಾಸಕರಾಗಿದ್ದ ಶ್ರೀಮಂತಪಾಟೀಲ್ ಅವರು ವಿಶ್ವಾಸ ಮತ ಯಾಚನೆ ಹಿಂದಿನ ದಿನ ಅನಾರೋಗ್ಯದ ನೆಪವೊಡ್ಡಿ ಚೆನ್ನೈಗೆ ತೆರಳಿ ಅಲ್ಲಿಂದ ಮುಂಬೈಗೆ ಹೋಗಿ ಸಂಜೀವಿನಿ ಆಸ್ಪತ್ರೆಗೆ ದಾಖಲಾಗಿದ್ದು, ಹಲವು ಅನುಮಾನ ಮೂಡಿಸಿತ್ತು. ಬಿಜೆಪಿ ನಾಯಕರೂ ಕೂಡ ಇವರೊಂದಿಗೆ ಈ ಸಂದರ್ಭದಲ್ಲಿದ್ದರು.
ಈ ಕಾರಣಕ್ಕೆ ಅನರ್ಹಗೊಳಿಸಲಾಗಿದೆ ಎಂದು ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಶ್ರೀಮಂತ್ ಪಾಟೀಲ್ ಪರ ವಕೀಲರಾದ ವಿ.ಗಿರಿ ವಾದ ಮಂಡಿಸಿ ಜು.18ರಂದೇ ಸ್ಪೀಕರ್ ಅವರಿಗೆ ಪತ್ರ ಬರೆದಿದ್ದರು ಎಂದಾಗ ನ್ಯಾಯಾಲಯ ಪತ್ರದ ಬಗ್ಗೆ ಮಾಹಿತಿಯನ್ನು ಪಡೆಯಿತು. ಪತ್ರ ಬರೆದಿದ್ದು ನಿಜ. ಆದರೆ ಪತ್ರದಲ್ಲಿ ಅವರ ಸಹಿ ಇರಲಿಲ್ಲ ಎಂಬುದನ್ನು ವಕೀಲರಾದ ಕಾಮತ್ ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಪಕ್ಷಾಂತರ ಉದ್ದೇಶದಿಂದಲೇ ರಾಜೀನಾಮೆ ನೀಡಿದ್ದು, ಇದರಿಂದ ಗೊತ್ತಾಗುತ್ತದೆ ಎಂದು ಹೇಳಿದರು.ವಾದ ವಿವಾದ ಮುಂದುವರೆದಿತ್ತು.