ಬೆಂಗಳೂರು; ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿ ಕಳೆದ ಎರಡು ತಿಂಗಳಿನಿಂದ ಇಡಿ ವಶದಲ್ಲಿದ್ದು ಬುಧವಾರ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಒಂದು ಕಾಲದ ಗೆಳೆಯ ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಮತ್ತೆ ಮಗ್ಗಲ ಮುಳ್ಳಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.
ಡಿ.ಕೆ. ಶಿವಕುಮಾರ್ ಇಡಿ ಬಂಧನದಿಂದ ಬಿಡುಗಡೆಯಾಗುತ್ತಿದ್ದಂತೆ ಮತ್ತೆ ಅವರನ್ನು ಬಂಧಿಸಲು ಸಿಬಿಐ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿರುವ ಇದೇ ದಿನಗಳಲ್ಲಿ ಡಿಕೆಶಿ ವಿರುದ್ಧ ಸಿ.ಪಿ. ಯೋಗೇಶ್ವರ್ ರಾಶಿ ರಾಶಿ ದಾಖಲೆಗಳನ್ನು ಸಿಬಿಐ ಅಧಿಕಾರಿಗಳಿಗೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಬಿಜೆಪಿ ಸರ್ಕಾರದಲ್ಲಿ ಯೋಗೇಶ್ವರ್ ಅರಣ್ಯ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಈ ವೇಳೆ ಕನಕಪುರ ಕ್ಷೇತ್ರದಲ್ಲಿ ಡಿಕೆಶಿ ಒಡೆತನದ ಕಲ್ಲುಗಣಿಗಾರಿಕೆಗಳ ಮೇಲೆ ಸಾಕಷ್ಟು ದಾಳಿ ನಡೆಸಿದ್ದರು. ಅಲ್ಲದೆ, ಕಾನೂನು ಬಾಹೀರವಾಗಿ ಕಾರ್ಯನಿರ್ವಹಿಸುತ್ತಿದ್ದ ಹಲವು ಕಲ್ಲುಗಣಿಗಾರಿಕೆಗಳನ್ನ ಸ್ಥಗಿತಗೊಳಿಸಿದ್ದರು. ಈ ಪ್ರಕರಣದ ಕುರಿತು ಎಲ್ಲಾ ದಾಖಲೆಗಳು ಯೋಗೇಶ್ವರ್ ಅವರ ಬಳಿ ಇದ್ದು, ಕೇಂದ್ರ ಬಿಜೆಪಿ ನಾಯಕರ ಮೂಲಕ ಈ ದಾಖಲೆಗಳನ್ನು ಅವರು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅಧಿಕಾರಿಗಳಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.
2006ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕನಕಪುರದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಅರಣ್ಯಭೂಮಿ ಒತ್ತೂವರಿಯನ್ನು ಪತ್ತೆಮಾಡಲು ಸಲುವಾಗಿ ಯು.ವಿ. ಸಿಂಗ್ ಆಯೋಗವನ್ನು ರಚಿಸಿದ್ದರು. ಆದರೆ, ಯು.ವಿ.ಸಿಂಗ್ ವರದಿಯನ್ನ ನಂತರ ಅಧಿಕಾರ ನಡೆಸಿದ ಸರ್ಕಾರಗಳು ಪರಿಗಣಿಸಿರಲಿಲ್ಲ.
ಪರಿಣಾಮ ಇದೀಗ ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿರುವ ಹೈಕೋರ್ಟ್ ನವೆಂಬರ್ 30 ರೊಳಗೆ ಯು.ವಿ.ಸಿಂಗ್ ವರದಿ ಒಪ್ಪಿಸುವಂತೆ ಸೂಚನೆ ನೀಡಿದೆ. ಹೀಗಾಗಿ ಈ ವಿಚಾರವಾಗಿ ಕ್ರಿಯಾಶೀಲರಾಗಿರುವ ಸಿ.ಪಿ.ಯೋಗೇಶ್ವರ್ ಕನಕಪುರದಲ್ಲಿ ಅಕ್ರಮ ಅರಣ್ಯ ಭೂಮಿ ಒತ್ತುವರಿ, ಅಕ್ರಮ ಕಲ್ಲುಗಣಿಗಾರಿಕೆ ಕುರಿತ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಅಲ್ಲದೆ, ಕಳೆದ ಎರಡು ತಿಂಗಳಲ್ಲಿ ಹಲವು ಬಾರಿ ದೆಹಲಿಗೆ ತೆರಳಿ ಕೇಂದ್ರ ಬಿಜೆಪಿ ನಾಯಕರನ್ನು ಭೇಟಿ ಮಾಡಿರುವ ಯೋಗೇಶ್ವರ್ ಅವರ ಮೂಲಕ ಎಲ್ಲಾ ದಾಖಲೆಗಳನ್ನು ಸಿಬಿಐ ಅಧಿಕಾರಿಗಳಿಗೆ ತಲುಪಿಸಿದ್ದಾರೆ, ಡಿಕೆಶಿ ಸಹೋದರರನ್ನು ಮುಗಿಸಲು ತೆರೆ ಮರೆಯಲ್ಲೇ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.