ದೆಹಲಿಗೆ ಕೂಡಲೇ ಬನ್ನಿ; ಹರ್ಯಾಣ ಸಿಎಂಗೆ ಶಾ ತುರ್ತು ಬುಲಾವ್

ನವದೆಹಲಿ: ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆ ಆಗುತ್ತಿದ್ದಂತೆ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರಿಗೆ ಬಿಜೆಪಿ ಹೈಕಮಾಂಡ್ ದೆಹಲಿಗೆ ಬರುವಂತೆ ತುರ್ತು ಬುಲಾವ್ ನೀಡಿದೆ.

ಮತ ಎಣಿಕೆಯ ಆರಂಭದಲ್ಲಿ ಬಿಜೆಪಿಗೆ ಮುನ್ನಡೆ ಸಿಕ್ಕಿದರೆ ನಂತರ ಕಾಂಗ್ರೆಸ್ ಮಧ್ಯೆ ಸಮಬಲದ ಹೋರಾಟ ನಡೆಯುತ್ತಿದೆ. ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ದುಷ್ಯಂತ್ ಸಿಂಗ್ ಚೌತಾಲಾ ಅವರ ಜನನಾಯಕ್ ಜನತಾ ಪಕ್ಷ (ಜೆಜೆಪಿ) 14 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವುದರ ಜೊತೆ ಒಟ್ಟು 20 ಕ್ಷೇತ್ರಗಳಲ್ಲಿ ಇತರರು ಮುನ್ನಡೆ ಸಾಧಿಸಿದ್ದರಿಂದ ಫಲಿತಾಂಶ ದಿಢೀರ್ ತಿರುವು ಪಡೆದುಕೊಳ್ಳುತ್ತಿದೆ.

ಬೆಳಗ್ಗೆ 11 ಗಂಟೆಯ ವೇಳೆಗೆ ಬಿಜೆಪಿ 42, ಕಾಂಗ್ರೆಸ್ 28, ಇತರರು 20 ಕ್ಷೇತ್ರಗಳಲ್ಲಿ ಮುನ್ನಡೆಯಲಿದ್ದಾರೆ. ಹೀಗಾಗಿ ಕೂಡಲೇ ದೆಹಲಿಗೆ ಬರುವಂತೆ ಅಮಿತ್ ಶಾ ಖಟ್ಟರ್ ಅವರಿಗೆ ಸೂಚಿಸಿದ್ದಾರೆ.

ದುಷ್ಯಂತ್ ಸಿಂಗ್ ಚೌತಾಲಾ ಅವರು ಕಾಂಗ್ರೆಸ್, ಬಿಜೆಪಿಗೆ ಬಹುಮತ ಬಂದರೂ ನಿರ್ಣಯಕ ಪಾತ್ರ ನಮ್ಮದೆ ಎಂದು ಈಗಾಗಲೇ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಜೋರಾಗಿದೆ.

90 ಕ್ಷೇತ್ರಗಳು ಇರುವ ಹರ್ಯಾಣದಲ್ಲಿ ಬಹುಮತ ಪಡೆಯಲು 46 ಸ್ಥಾನಗಳ ಅಗತ್ಯವಿದೆ. ಮತ ಎಣಿಕೆಯ ಮುನ್ನಡೆಯನ್ನು ಗಮನಿಸುತ್ತಿರುವಾಗ ಯಾರಿಗೂ ಸ್ಪಷ್ಟ ಬಹುಮತ ಸಿಗುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ದುಷ್ಯಂತ್ ಸಿಂಗ್ ಚೌತಾಲಾ ಅವರು ಮುಖ್ಯಮಂತ್ರಿ ಆಗುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ