ಅನರ್ಹ ಶಾಸಕರಿಗೆ ಇಂದು ಮಹತ್ವದ ದಿನ; ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ವಿಚಾರಣೆ

 

ಬೆಂಗಳೂರು: ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್​-ಜೆಡಿಎಸ್ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ಪತನವಾಗಲು ಕಾರಣರಾಗಿದ್ದ 17 ಅನರ್ಹ ಶಾಸಕರ ಪ್ರಕರಣದ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಇಂದು ನಡೆಯಲಿದೆ.

ನಿನ್ನೆ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ಆರಂಭವಾದಾಗ ಕಾಂಗ್ರೆಸ್​​ ಪರ ವಕೀಲ ಕಪಿಲ್ ಚುನಾವಣೆ ನೀತಿ ಸಂಹಿತೆಯ ಕುರಿತು ಹೈಕೋರ್ಟ್​ನಲ್ಲಿ ವಿಚಾರಣೆ ಬಾಕಿಯಿದೆ. ಹೀಗಾಗಿ, ವಿಚಾರಣೆ ಮುಂದೂಡಬೇಕೆಂದು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಸಿಬಲ್ ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ್ದರು.

ಈ ಹಿಂದೆ​ ಸೆ. 27ರಂದು ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆದಿದ್ದ ಸುಪ್ರೀಂಕೋರ್ಟ್ ಉಪಚುನಾವಣೆಗೆ ತಾತ್ಕಾಲಿಕ ತಡೆ ನೀಡಿತ್ತು. ಪ್ರಕರಣದ ವಿಚಾರಣೆಯನ್ನು ತರಾತುರಿಯಲ್ಲಿ ಮಾಡಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿನ ಅಂಶಗಳನ್ನು ಜಾಗರೂಕವಾಗಿ ವಿಚಾರಣೆಗೆ ಒಳಪಡಿಸಬೇಕು ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಅನರ್ಹ ಶಾಸಕರ ಅರ್ಜಿ ಸಂಬಂಧ ತೀರ್ಪು ನೀಡುವ ತನಕ ಕರ್ನಾಟಕ ಉಪಚುನಾವಣೆಯನ್ನು ಮುಂದೂಡಿತ್ತು. ಅಕ್ಟೋಬರ್​ 21ರಂದು ನಡೆಯಬೇಕಿದ್ದ ಚುನಾವಣೆಯನ್ನೇ ಮುಂದೂಡಿದ ಸುಪ್ರೀಂಕೋರ್ಟ್​, ವಿಚಾರಣೆಯನ್ನು ಅ.22ಕ್ಕೆ ನಿಗದಿ ಮಾಡಿತ್ತು.

ಕಳೆದ ಮೇ ತಿಂಗಳಲ್ಲಿ ಮೈತ್ರಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದ 17 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನ ಐಷಾರಾಮಿ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದರು. ಇದಾದ ಬೆನ್ನಲ್ಲೇ ಅಂದಿನ ಸ್ಪೀಕರ್​ ರಮೇಶ್​ ಕುಮಾರ್​ ಸಿಪಿಎಲ್​ ನಾಯಕ ಸಿದ್ದರಾಮಯ್ಯ ಹಾಗೂ ಮೈತ್ರಿ ಸರ್ಕಾರದ ನಾಯಕ ಅಂದಿನ ಸಿಎಂ ಕುಮಾರಸ್ವಾಮಿ ದೂರಿನ ಮೇರೆಗೆ ವಿಚಾರಣೆ ನಡೆಸಿ ಎಲ್ಲಾ 17 ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.

ಹಿಂದಿನ ಸ್ಪೀಕರ್​​ ನಿರ್ಧಾರದ ವಿರುದ್ಧ 17 ಮಂದಿ ಅನರ್ಹ ಶಾಸಕರು ಸುಪ್ರೀಂಕೋರ್ಟ್​​ ಮೆಟ್ಟಿಲೇರಿದರು. ಬಳಿಕ ಸುಪ್ರೀಂಕೋರ್ಟ್​​ನಲ್ಲಿ ಜಯ ಸಿಗಬಹುದು ಎನ್ನುವ ಆಸೆ ಹೊತ್ತಿದ್ದ ಅನರ್ಹ ಶಾಸಕರಿಗೆ ಪ್ರತಿ ಬಾರಿಯೂ ಹಿನ್ನಡೆ ಆಗುತ್ತಲೇ ಇದೆ. ಸ್ಪೀಕರ್​ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಿ ಒಂದು ತಿಂಗಳು ಕಳೆದರೂ ಪ್ರಕರಣ ವಿಚಾರಣೆಗೆ ಬಂದಿರಲ್ಲ. ಇದು ಅನರ್ಹರನ್ನು ಆತಂಕಕ್ಕೆ ಈಡು ಮಾಡಿತ್ತು. ಇದೀಗ ನಾಡಿದ್ದಾದರೂ ಸುಪ್ರಿಂನಲ್ಲಿ ತೀರ್ಪು ಬರುವ ನಿರೀಕ್ಷೆಯಲ್ಲಿ ಅನರ್ಹರಿದ್ದಾರೆ.

ಅನರ್ಹ ಶಾಸಕರ ಪ್ರಕರಣದ ವಿಚಾರಣೆಯನ್ನು ಜಸ್ಟೀಸ್​. ಮೋಹನ್ ಶಾಂತನಗೌಡರ ನಡೆಸಬೇಕಿತ್ತು. ಆದರೆ, ಅವರು ಕರ್ನಾಟಕ ಮೂಲದವರು ಮತ್ತು ಅನರ್ಹ ಶಾಸಕ ಬಿಸಿ ಪಾಟೀಲ್​ ಅವರ ದೂರದ ಸಂಬಂಧಿ. ಹೀಗಾಗಿ ಸ್ವಇಚ್ಛೆಯಿಂದ ಅವರು ವಿಚಾರಣೆಯಿಂದಲೇ ಹಿಂದೆ ಸರಿದಿದ್ದರು. ಹೀಗಾಗಿ ಈ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಕೃಷ್ಣ ಮುರಳಿ, ಸಂಜಯ್ ಖನ್ನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ವಿಚಾರಣೆ ನಡೆಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ