ಬೆಳಗಾವಿ: ಗೋಕಾಕ್ ಮಲ್ಲಿಕಾರ್ಜುನ ಬೆಟ್ಟದ ಮೇಲಿನ ಎರಡು ಬೃಹದಾಕಾರದ ದೊಡ್ಡ ಬಂಡೆಗಳು ಮತ್ತೆ ತಮ್ಮ ಸ್ಥಾನವನ್ನು ಬದಲಿಸಿ ಆತಂಕ ಹುಟ್ಟಿಸಿವೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ನೂರು ಮಾಲೀಕರಿಗೆ ಮನೆ ಖಾಲಿ ಮಾಡುವಂತೆ ಗೋಕಾಕ್ ತಹಶೀಲ್ದಾರ್ ಸೂಚಿಸಿದ್ದಾರೆ.
ಮಂಗಳವಾರ ಕಾರ್ಯಚರಣೆಗೆ ಅಧಿಕಾರಿಗಳು ನಿಂತಾಗ ಬಂಡೆಗಳ ಬಳಿ ಮಾರ್ಕ್ ಮಾಡಿ ಗುರುತಿಸಿದ್ದರು. ಆದರೆ ಬೆಳಗ್ಗೆ ಬಂದು ನೋಡುವಷ್ಟರಲ್ಲಿ ಮತ್ತೆ ಎರಡು ಅಡಿ ಮುಂದೆ ಸರಿದ ಬಂಡೆಗಳು ಭಾರೀ ಭಯವನ್ನುಂಟು ಮಾಡಿತ್ತು. ಹಾಗಾಗಿ ಸ್ಥಳದಲ್ಲಿ ಎನ್‍ಡಿಆರ್‍ಎಫ್ ತಂಡದ ಸಿಬ್ಬಂದಿ ಬೆಳಗ್ಗೆಯಿಂದಲೂ ಬಂಡೆಯನ್ನು ಬ್ಲಾಸ್ಟ್ ಮಾಡುವ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.
ಬಂಡೆ ಬ್ಲಾಸ್ಟ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಗೋಕಾಕ್ ತಹಶೀಲ್ದಾರ್, ನೂರು ಮನೆ ಮಾಲೀಕರಿಗೆ ಈ ಕೂಡಲೇ ಮನೆ ಖಾಲಿ ಮಾಡಿ ಬೇರೆ ಕಡೆ ಹೋಗಿ. ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಜೋಡಿ ಬಂಡೆ ಬಂದು ಉರುಳಬಹುದು ಎಂದು ಹೇಳಿದ್ದಾರೆ. ಹೀಗಾಗಿ ಅಂಬೇಡ್ಕರ್ ನಗರ, ಸಂಗಮನಗರ, ಗೊಲ್ಲರ ಗಲ್ಲಿ, ಸಿದ್ದೇಶ್ವರ ನಗರ ಸೇರಿ ಮರಾಠಾ ಗಲ್ಲಿಯ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಕಳೆದ ರಾತ್ರಿ ಸುರಿದ ಮಳೆಗೆ ಬಂಡೆ ಸುತ್ತಮುತ್ತ ಮಣ್ಣು ಕುಸಿದು ಮತ್ತೆ ಐದು ಅಡಿಯಷ್ಟು ಕೆಳಜಾರಿದೆ. ಮಂಗಳವಾರ ಎಂಟು ಅಡಿಯಷ್ಟು ಜೋಡಿಗಲ್ಲು ಗುಡ್ಡದ ಕೆಳಗೆ ಸರಿದಿತ್ತು. ಮಣ್ಣು ಕುಸಿತಕ್ಕೆ ಇಂದು ಮತ್ತೆ ಐದು ಅಡಿಯಷ್ಟು ಬಂಡೆಗಲ್ಲು ಜಾರಿದೆ. ಬಂಡೆಗಲ್ಲು ಕೆಳ ಜಾರುತ್ತಿರುವ ಹಿನ್ನೆಲೆಯಲ್ಲಿ ಗೋಕಾಕ್ ನಗರದ ಜನರು ಆತಂಕದಲ್ಲಿ ಇದ್ದಾರೆ.