ಕೊಪ್ಪಳ: ಒಳ ಹರಿವು ಹೆಚ್ಚಾದ ಹಿನ್ನೆಲೆ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಸುಮಾರು 1 ಲಕ್ಷ ಕ್ಯೂಸೆಕ್‍ಗೂ ಅಧಿಕ ನೀರನ್ನು ಹೊರಬಿಡಲಾಗಿದ್ದು, ನದಿ ಪಾತ್ರದ ಜನರಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ತುಂಗಭದ್ರಾ ಜಲಾಶಯಕ್ಕೆ 96,831 ಕ್ಯೂಸೆಕ್‍ಗೂ ಹೆಚ್ಚು ನೀರು ಹರಿದು ಬರುತ್ತಿದ್ದು, ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಹೀಗಾಗಿ 1 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದ್ದು ನದಿ ಪಾತ್ರದ ಜನರಿಗೆ ಬೇರೆ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
19 ವರ್ಷಗಳ ನಂತರ ಅಕ್ಟೋಬರ್ ತಿಂಗಳಲ್ಲಿ ಟಿಬಿ ಡ್ಯಾಂನಿಂದ ನದಿಗೆ ನೀರು ಹರಿಬಿಡಲಾಗುತ್ತಿದೆ. 49.50 ಮೀ ಎತ್ತರ 2,449 ಮೀಟರ್ ಉದ್ದದ ಜಲಾಶಯದ 33 ಕ್ರಸ್ಟ್ ಗೇಟ್ ಗಳನ್ನು ತೆರೆದು ನೀರನ್ನು ನದಿಗೆ ಬಿಡುಗಡೆ ಮಾಡಲಾಗುತ್ತಿದೆ.
ಮಲೆನಾಡಿನಲ್ಲಿ ಭಾರಿ ಮಳೆ ಸುರಿತ್ತಿರುವ ಹಿನ್ನೆಲೆ ತುಂಗಭದ್ರಾ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಭಾರೀ ಪ್ರಮಾಣದಲ್ಲಿ ನೀರನ್ನು ಬಿಡುಗಡೆ ಮಾಡಿದ ಪರಿಣಾಮ ಆನೆಗುಂದಿ ನವವೃಂದಾವನ ಜಲಾವೃತಗೊಂಡಿದೆ. ಇದರಿಂದಾಗಿ ನದಿ ಪಾತ್ರದ ಜನರಿಗೆ ಪ್ರವಾಹ ಬೀತಿ ಎದುರಾಗಿದೆ. ಹನುಮನಹಳ್ಳಿ, ಸಾಣಾಪೂರ, ಚಿಕ್ಕಜಂತಕಲ್ ಗ್ರಾಮ ಸೇರಿದಂತೆ ಹಲವು ಗ್ರಾಮದಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ.
ಗಂಗಾವತಿ- ಕಂಪ್ಲಿ ಸಂಪರ್ಕ ಕಲ್ಪಿಸುವ ಕೊಪ್ಪಳದ ಗಂಗಾವತಿ ತಾಲೂಕಿನ ಚಿಕ್ಕಜಂತಗಲ್ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮೇಲೆ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ನದಿ ಬಳಿ ತೆರಳದಂತೆ ಪೊಲೀಸ್ ಭದ್ರತೆ ಒದಗಿಸಿದ್ದಾರೆ.