ವಾಸ್ತವಾಂಶಗಳ ಆಧಾರಿತವಾಗಿ ಚರ್ಚೆ ಮಾಡಲು ತಾವು ಸಿದ್ಧ-ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಬೆಂಗಳೂರು, ಅ.22-ಮಹಾರಾಷ್ಟ್ರ ಚುನಾವಣೆ ಮುಗಿದಿದೆ, ಮುಂದಿನ ಚುನಾವಣೆ  ವೇಳೆಗೆ  ಸಾವರ್ಕರ್ ಬಗ್ಗೆ ಮಾತನಾಡೋಣ. ಸದ್ಯಕ್ಕೆ ನಿರುದ್ಯೋಗ, ಬೆಲೆ ಏರಿಕೆ, ರೈತರ ಕಷ್ಟಗಳ ಕುರಿತು ಚರ್ಚೆ ಮಾಡಲು ಬನ್ನಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿಗೆ  ಪಂಥಾಹ್ವಾನ ನೀಡಿದ್ದಾರೆ.

ಟ್ವಿಟರ್‍ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸನ್ಮಾನ್ಯ ಬಿಜೆಪಿ ನಾಯಕರೇ ಮಹಾರಾಷ್ಟ್ರ ಚುನಾವಣೆ ಮುಗಿಯಿತಲ್ಲ, ಮುಂದಿನ ಚುನಾವಣೆ ಕಾಲಕ್ಕೆ ಸಾವರ್ಕರ್ ಬಗ್ಗೆ ಮಾತನಾಡೋಣ. ಈಗ ತುರ್ತಾಗಿ ನಿರುದ್ಯೋಗಿ,  ಬೆಲೆ ಏರಿಕೆ, ದಿವಾಳಿಯಾಗುತ್ತಿರುವ ಬ್ಯಾಂಕ್‍ಗಳು, ರೈತರ ಕಷ್ಟಗಳು, ನೆರೆ-ಬರದ ಬಗ್ಗೆ ಚರ್ಚೆ ಮಾಡೋಣ ಎಂದು ಕೆಣಕಿದ್ದಾರೆ.

ವಾಸ್ತವಾಂಶಗಳ ಆಧಾರಿತವಾಗಿ ಚರ್ಚೆ ಮಾಡಲು ತಾವು ಸಿದ್ಧ ಎಂದು ಸಿದ್ದರಾಮಯ್ಯ ಅವರು ಸವಾಲಿನ ಮಾದರಿಯಲ್ಲಿ ಬಿಜೆಪಿಯವರತ್ತ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಮಹಾರಾಷ್ಟ್ರ ಚುನಾವಣೆ ವೇಳೆ ವೀರ ಸಾವರ್ಕರ್ ಅವರಿಗೆ ಭಾರತರತ್ನ ನೀಡುವ ವಿಷಯವಾಗಿ ಗಂಭೀರ ಚರ್ಚೆಗಳು ನಡೆದಿದ್ದವು.ಕರ್ನಾಟಕ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಅವರು ಏಕಾಂಗಿಯಾಗಿ ಸಾವರ್ಕರ್ ಅವರಿಗೆ ಭಾರತರತ್ನ ನೀಡುವುದನ್ನು ವಿರೋಧಿಸಿ ಬಿಜೆಪಿಗೆ ಕೆಂಗಣ್ಣಿಗೆ ಗುರಿಯಾಗಿದ್ದರು.

ಬಿಜೆಪಿಯ ಸಾಲು ಸಾಲು ನಾಯಕರು ಸಿದ್ದರಾಮಯ್ಯ ವಿರುದ್ಧ ವೈಯಕ್ತಿಕ ಮಟ್ಟದಲ್ಲೂ ಟೀಕೆ ಮಾಡಿದ್ದರು.ಅದಕ್ಕೆಲ್ಲ ಅಷ್ಟೇ ದಿಟ್ಟವಾಗಿ ಉತ್ತರ ನೀಡಿದ್ದ ಸಿದ್ದರಾಮಯ್ಯ ಅವರು, ಸಾವರ್ಕರ್ ವಿರುದ್ಧ ನೀಡಿದ ಹೇಳಿಕೆಯಿಂದ ಹಿಂದೆ ಸರಿಯದೆ ಸವಾಲು ಹಾಕಿ ನಿಂತಿದ್ದರು.

ಮಹಾರಾಷ್ಟ್ರ ಚುನಾವಣೆ ಮುಗಿಯುವವರೆಗೂ ಸಾವರ್ಕರ್ ವಿಷಯ ಹೊರತುಪಡಿಸಿ  ಬೇರೆ ಯಾವುದೇ ವಿಷಯ ಚರ್ಚೆಯಾಗದಂತೆ ಬಿಜೆಪಿ ವ್ಯವಸ್ಥಿತವಾಗಿ ತಂತ್ರಗಾರಿಕೆ ರೂಪಿಸಿತ್ತು. ಚುನಾವಣೆ ಮುಗಿಯುತ್ತಿದ್ದಂತೆ ಸಾವರ್ಕರ್ ವಿಷಯ ತನ್ನಷ್ಟಕ್ಕೆ ತಾನೇ ತಣ್ಣಗಾಗಿದೆ. ಈ ರಾಜ್ಯದಲ್ಲಿ  ನಿರಂತರವಾಗಿ ಎದುರಾಗಿರುವ ಅತಿವೃಷ್ಟಿ , ಮತ್ತೊಂದೆಡೆಯ ಅನಾವೃಷ್ಟಿ ಬಗ್ಗೆ ಗಮನಹರಿಸುವ ಪರಿಸ್ಥಿತಿ ಎದುರಾಗಿದೆ.

ನೆರೆ ಸಂತ್ರಸ್ತರ ಆಕ್ರೋಶಕ್ಕೆ ಸರ್ಕಾರಗಳು ಗುರಿಯಾಗಿದ್ದು, ಈ ವಿಷಯ ಚರ್ಚೆಯಾಗುತ್ತಿದ್ದಂತೆ  ಹೋರಾಟಗಳು ಭುಗಿಲೇಳುವ ಸಾಧ್ಯತೆಗಳಿವೆ. ಹಾಗಾಗಿ ಅದನ್ನು ಅರಿತುಕೊಂಡೇ ಸಿದ್ದರಾಮಯ್ಯ ಬಿಜೆಪಿಯವರನ್ನು ಕೆಣಕಿ ಪಂಥಾಹ್ವಾನ ನೀಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ