ಬೆಂಗಳೂರು, ಅ.22-ಉದ್ದಿಮೆಗಳು ಹಾಗೂ ಕಾರ್ಖಾನೆಗಳ ಪರವಾನಗಿ ನವೀಕರಣಕ್ಕೆ ಕಾರ್ಮಿಕ ಇಲಾಖೆಯಲ್ಲಿ ಸಂಪೂರ್ಣ ಆನ್ಲೈನ್ ವ್ಯವಸ್ಥೆಯನ್ನು ಡಿಸೆಂಬರ್ ಅಂತ್ಯಕ್ಕೆ ಜಾರಿಗೆ ತರುವುದಾಗಿ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಪಿ.ಮಣಿವಣ್ಣನ್ ಭರವಸೆ ನೀಡಿದರು.
ಎಫ್ಕೆಸಿಸಿಐ ವತಿಯಿಂದ ಆಯೋಜಿಸಲಾಗಿದ್ದ ಉದ್ಯಮಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ಕಾರ್ಖಾನೆ ಮತ್ತು ಉದ್ದಿಮೆಗಳ ಪರವಾನಗಿ ನವೀಕರಣ ಸಂದರ್ಭದಲ್ಲಿ ಉದ್ಯಮಿಗಳಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಎಲ್ಲವನ್ನೂ ಆನ್ಲೈನ್ ವ್ಯವಸ್ಥೆಗೆ ಒಳಪಡಿಸಲಾಗುವುದು. ಪರವಾನಗಿ ನವೀಕರಣ ಶುಲ್ಕದ ಬಗ್ಗೆ ಇರುವ ಗೊಂದಲವನ್ನು ನಿವಾರಣೆ ಮಾಡಿ ಸ್ಪಷ್ಟತೆ ಮೂಡಿಸಲಾಗುವುದು ಎಂದು ಹೇಳಿದರು.
ಕನಿಷ್ಠ ವೇತನ ಕಾಯ್ದೆ ಸಂಬಂಧಪಟ್ಟಂತೆ ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದೆ.ಆ ಬಗ್ಗೆ ನಾವು ಹೆಚ್ಚು ಮಾತನಾಡಲು ಸಾಧ್ಯವಿಲ್ಲ. ಶಾಸನಸಭೆಗಳಲ್ಲಿ ಕಾನೂನು ರೂಪಿತಗೊಂಡಿದೆ. ಅದನ್ನು ಜಾರಿ ಮಾಡುವುದು ನಮ್ಮ ಕರ್ತವ್ಯ.ಬದಲಾವಣೆ ಮಾಡುವ ಹಕ್ಕು ನಮಗಿಲ್ಲ. ಹೆಚ್ಚು ವೇತನ ನೀಡಲು ಕೆಲವರಿಗೆ ಕಷ್ಟವಾಗಬಹುದು ಎಂಬ ಮಾಹಿತಿ ನಮಗೂ ಇದೆ. ಆದರೆ ನಾವು ಅಸಹಾಯಕರು.ಕೂಡಲೇ ವೇತನ ಹೆಚ್ಚಳ ಮಾಡಲು ಸಾಧ್ಯವಾಗದಿದ್ದರೆ ಹಂತ ಹಂತವಾಗಿಯಾದರೂ ವೇತನ ಹೆಚ್ಚಿಸಿ, ನಿಯಮ ಪಾಲಿಸಿ ಎಂದು ಸಲಹೆ ನೀಡಿದರು.
ಬೇಡಿಕೆ ಹೆಚ್ಚಾದಾಗ ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಉದ್ಯಮಿಗಳು ಒತ್ತಾಯಿಸಿದಾಗ ಅದನ್ನು ಪರಿಶೀಲಿಸುವುದಾಗಿ ತಿಳಿಸಿದರು.
ಶಾಪ್ಸ್ ಆ್ಯಕ್ಟ್ ಪ್ರಸ್ತುತದ ಅಗತ್ಯತೆ ಬಗ್ಗೆ ಪುನರ್ ಪರಿಶೀಲನೆ ಮಾಡಲು ಮೂವರು ಉದ್ಯಮಿಗಳು ಮತ್ತು ಮೂವರು ಅಧಿಕಾರಿಗಳನ್ನೊಳಗೊಂಡ ಒಟ್ಟು ಏಳು ಜನರ ಸಮಿತಿ ರಚಿಸಲಾಗುತ್ತದೆ.30 ದಿನಗಳೊಳಗಾಗಿ ವರದಿ ಪಡೆದು ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಕಾರ್ಮಿಕರ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾಮಟ್ಟದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಜಾಗೃತಿ ಅಭಿಯಾನ ಮತ್ತು ಕಾರ್ಯಾಗಾರಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಇಎಸ್ಐ ಆಸ್ಪತ್ರೆ ಬಗ್ಗೆ ಪ್ರಮುಖವಾಗಿ ಪ್ರಸ್ತಾಪಿಸಿದ ಮಣಿವಣ್ಣನ್ ಅವರು, ಪ್ರತಿವರ್ಷ ರಾಜ್ಯದಿಂದ 2 ಸಾವಿರ ಕೋಟಿ ರೂ.ಗಳ ವಂತಿಗೆ ಕೇಂದ್ರ ಸರ್ಕಾರಕ್ಕೆ ಸಂದಾಯವಾಗುತ್ತಿದೆ. ಆದರೆ ಕೇಂದ್ರದಿಂದ ಕಾರ್ಮಿಕರ ವೈದ್ಯಕೀಯ ಸೇವೆಗಾಗಿ ಬರುತ್ತಿರುವ ಆರ್ಥಿಕ ನೆರವು ಗರಿಷ್ಠ 450 ಕೋಟಿ ರೂ.ಮಾತ್ರ.ಆಸ್ಪತ್ರೆಗೆ ಸ್ಕ್ಯಾನಿಂಗ್ ಮಿಷನ್ ಬೇಕು ಎಂದು ಪ್ರಸ್ತಾವನೆ ಸಲ್ಲಿಸಿ ಒಂದು ವರ್ಷವಾದರೂ ಇನ್ನೂ ಅಂಗೀಕಾರ ಸಿಕ್ಕಿಲ್ಲ. ಇಎಸ್ಐ ಆಸ್ಪತ್ರೆಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ನಿವಾರಿಸಬೇಕಾದರೆ ಹೆಚ್ಚಿನ ಅನುದಾನ ಬೇಕು.ರಾಜ್ಯದಿಂದ ಸಂಗ್ರಹವಾಗುವ ಹಣದಲ್ಲಿ ಗರಿಷ್ಠ ಪಾಲನ್ನು ವಾಪಸ್ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಇಂದಿರಾನಗರ ಆಸ್ಪತ್ರೆ ನಿರ್ವಹಣೆಗೆ 180 ಕೋಟಿ ರೂ.ಬೇಕು ಎಂದು ಪ್ರಸ್ತಾವನೆ ಸಲ್ಲಿಸಿದರೆ, ಕೇವಲ 20 ಕೋಟಿ ರೂ.ಮಾತ್ರ ಮಂಜೂರಾಗಿದೆ.ಈ ರೀತಿಯ ಹಣದ ಕೊರತೆಯಿಂದಾಗಿ ಆಸ್ಪತ್ರೆ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಹೇಳಿದರು.
ಎಫ್ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ಧನ್, ಉಪಾಧ್ಯಕ್ಷರಾದ ಪೆರಿಕಲ್ ಎನ್.ಸುಂದರ್, ಎಫ್ಕೆಸಿಸಿಐ ಕಾರ್ಮಿಕ ಸಮಿತಿಯ ಸುಜ್ಞಾನ್ ಹಿರೇಮಠ್, ಉಪಾಧ್ಯಕ್ಷರಾದ ಐ.ಎಸ್.ಪ್ರಸಾದ್ ಮತ್ತಿತರರು ಸಂವಾದದಲ್ಲಿ ಭಾಗವಹಿಸಿದ್ದರು.
ಕನಿಷ್ಠ ವೇತನ ನಿಗದಿ ಬಗ್ಗೆ ಸಭೆಯಲ್ಲಿ ತೀವ್ರ ಅಸಮಾಧಾನಗಳು ಕೇಳಿ ಬಂದವು.ಕಾರ್ಮಿಕ ಇಲಾಖೆಯ ಸೇವೆಗಳನ್ನು ಆನ್ಲೈನ್ಗೊಳಿಸುವಂತೆ ಜಿಎಸ್ಟಿ ಮಾದರಿಯಲ್ಲಿ ಇಎಸ್ಐ-ಪಿಎಫ್ ವಂತಿಗೆ ಪಾವತಿಗೆ ಅವಕಾಶ ಕಲ್ಪಿಸುವಂತೆ ಸಲಹೆಗಳು ಕೇಳಿ ಬಂದವು.
ಉದ್ಯಮಿಗಳ ಬಹಳಷ್ಟು ಸಮಸ್ಯೆಗಳಿಗೆ ಮಣಿವಣ್ಣನ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿಸುವಂತಹ ಅಭಿಪ್ರಾಯ ವ್ಯಕ್ತಪಡಿಸಿದರು.