ಬೆಂಗಳೂರು, ಅ.22- ಯಾವುದೇ ಕಾರಣಕ್ಕೂ ಇದುವರೆಗೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಮಾಡುವುದೂ ಇಲ್ಲ ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಸಚಿವ ಬಸವರಾಜ ಹೊರಟ್ಟಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದೊಳಗೆ ಏನಾದರೂ ಅಸಮಾಧಾನವಿದ್ದರೆ ಬಹಿರಂಗವಾಗಿಯೇ ಹೇಳುತ್ತೇವೆ. ನಾಯಕತ್ವವನ್ನು ಪ್ರಶ್ನೆ ಮಾಡಿಲ್ಲ. ಮೈತ್ರಿ ಸರ್ಕಾರವಿದ್ದಾಗ ನಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಅಸಮಾಧಾನವಿದೆ ಎಂದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಪ್ರಮಾಣಪತ್ರ ಕೊಡುವ ಯೋಗ್ಯತೆ ನನಗಿಲ್ಲ. ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು.ಅವರು ದೊಡ್ಡವರು.ಅವರ ಬಗ್ಗೆ ಮಾತನಾಡೋಕೆ ಆಗುವುದಿಲ್ಲ ಎಂದು ತಿಳಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಮಾಲೋಚನೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದಿದ್ದಾರೆ.ಹೀಗಾಗಿ ಜೆಡಿಎಸ್ ಪಕ್ಷ ಬಿಡುವ ಯೋಚನೆ ಮಾಡಿಲ್ಲ. ಎಲ್ಲರೂ ಒಂದೆಡೆ ಸೇರಿ ಮಾತುಕತೆ ನಡೆಸುವುದು ತಪ್ಪೇ ಎಂದು ಪ್ರಶ್ನಿಸಿದರು.
ತಾವು ವಿಧಾನಪರಿಷತ್ನ ಹಿರಿಯ ಸದಸ್ಯರಾಗಿದ್ದು, ಮನೆಯ ಯಜಮಾನರ ರೀತಿ ಕೆಲವು ಮುಖಂಡರ ಜತೆ ಚರ್ಚೆ ಮಾಡಿದ್ದೇವೆ. ಆದರೆ, ಈ ಕ್ಷಣದವರೆಗೂ ಪಕ್ಷ ಬಿಡುವಂತಹ ಯೋಚನೆ ಮಾಡಿಲ್ಲ. ಒಂದು ವೇಳೆ ಪಕ್ಷ ತೊರೆದು ಹೋಗುವುದಾಗಿದ್ದರೆ ದೇವೇಗೌಡರು ಹಾಗೂ ಮಾಧ್ಯಮದವರಿಗೆ ತಿಳಿಸಿಯೇ ಹೋಗುತ್ತಿದ್ದೆ ಎಂದರು.
ಕಳೆದ 1983ರಿಂದಲೇ ಜನತಾ ಪರಿವಾರದಲ್ಲೇ ಇದ್ದೇನೆ. ತರಾತುರಿಯಲ್ಲಿ ಪಕ್ಷ ಬಿಡುವ ಅನಿವಾರ್ಯತೆ ಇಲ್ಲ. ಶಾಸಕರ್ಯಾರು ನನ್ನ ಜತೆ ಮಾತನಾಡಿಲ್ಲ. ಶಾಸಕರು ನನ್ನ ಜತೆ ಮಾತನಾಡುವಷ್ಟು ನಾನು ದೊಡ್ಡವನಲ್ಲ. ಆದರೆ, ಸಭಾಪತಿ ಸ್ಥಾನ ಕೈ ತಪ್ಪಿದಾಗ ನನಗೆ ನೋವುಂಟಾಗಿತ್ತು.ಆ ಸಂದರ್ಭದಲ್ಲಿ ಸಮಾಧಾನ ಹೇಳಿದ್ದರೆ ಸರಿಯಾಗುತ್ತಿತ್ತು.ಏಕೆಂದರೆ ಕಣ್ಣೀರು ಹಾಕುವಂತಹ ಪರಿಸ್ಥಿತಿ ಉಂಟಾಗಿತ್ತು.ಆ ಸಂದರ್ಭದಲ್ಲಿ ಯಾರೂ ಮಾತನಾಡಿಲ್ಲ. ಆ ಬಗ್ಗೆ ನೋವಿತ್ತು.ಆದರೆ, ದೇವೇಗೌಡರ ಬಗ್ಗೆ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಧಾನಪರಿಷತ್ನ ಕೆಲವು ಸದಸ್ಯರು ಬೇರೆ ಬೇರೆ ಕೆಲಸಗಳಿಗೆ ಹೋಗಿರುವ ಹಿನ್ನೆಲೆಯಲ್ಲಿ ಇಂದು ಸಭೆ ನಡೆಸುವುದಿಲ್ಲ. ಮುಂದೊಂದು ದಿನ ಸಭೆ ಸೇರಿ ಚರ್ಚೆ ಮಾಡುತ್ತೇವೆ. ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ನಡೆಯುತ್ತಿದ್ದಾಗ 11 ಸದಸ್ಯರು ಒಂದೆಡೆ ಸೇರಿದ್ದೆವು. ಆಗ ನಾಯಕತ್ವವನ್ನು ನಾವು ಪ್ರಶ್ನೆ ಮಾಡಿಲ್ಲ ಎಂದು ತಿಳಿಸಿದರು.