ನವದೆಹಲಿ,ಅ.21 : ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಿದ್ದಾಜಿದ್ದಿನ ಕಣವಾಗಿರುವ ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಕೆಲವು ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತ ಮತದಾನ ನಡೆದಿದೆ.
ಬೆಳಗ್ಗೆ 7 ಗಂಟೆಯಿಂದ ಎರಡು ರಾಜ್ಯಗಳಲ್ಲಿ ಏಕಕಾಲಕ್ಕೆ ಮತದಾನ ಆರಂಭವಾಯಿತು. ಮಹಾರಾಷ್ಟ್ರದ 288 ಹಾಗೂ ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಮತದಾರರು ಸರತಿಯಲ್ಲಿ ಬಂದು ತಮ್ಮ ಹಕ್ಕು ಚಲಾಯಿಸುವ ಮೂಲಕ ಘಟಾನುಘಟಿ ನಾಯಕರ ಹಣೆಬರಹ ಮತಪೆಟ್ಟಿಗೆಯಲ್ಲಿ ಭದ್ರಪಡಿಸಿದ್ದಾರೆ.
ಗುರುವಾರ ಬೆಳಗ್ಗೆ 8 ಗಂಟೆಯಿಂದ ಮತಗಳ ಎಣಿಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನದೊಳಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ. ಮಹಾರಾಷ್ಟ್ರದಲ್ಲಿ ಇಂದು ಕೆಲವು ಕಡೆ ತುಂತುರು ಮಳೆ ಬಂದಿದ್ದರಿಂದ ಪ್ರಾರಂಭದಲ್ಲಿ ಮತದಾನಕ್ಕೆ ತುಸು ಅಡಚಣೆ ಉಂಟಾಯಿತು. ಆದರೂ ಮತದಾರರು ಬೆಳಗಿನಿಂದಲೇ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ ದೃಶ್ಯ ಎಲ್ಲೆಡೆ ಕಂಡುಬಂದಿತು. ಸೊಲ್ಲಾಪುರ, ಕೊಲ್ಲಾಪುರ, ನಾಂದೇಡ್, ಔರಂಗಬಾದ್, ಸಾಂಗ್ಲಿ ಮತ್ತಿತರ ಭಾಗಗಳಲ್ಲಿ ಬೆಳಗ್ಗಿನಿಂದಲೇ ತುಂತುರು ಮಳೆ ಕಂಡುಬಂದಿತು.
ಕೆಲವು ಕಡೆ ಮತ ಯಂತ್ರಗಳು ಕೈ ಕೊಟ್ಟ ಪರಿಣಾಮ ತುಸು ವಿಳಂಬವಾಗಿ ಮತದಾನ ಆರಂಭವಾಯಿತು.ಇನ್ನು ಕೆಲವು ಕಡೆ ಮತ ಪಟ್ಟಿಯಲ್ಲಿ ಮತದಾರರ ಹೆಸರುಗಳೇ ನಾಪತ್ತೆಯಾಗಿದ್ದರು.
ಇದರಿಂದ ಅಲ್ಲಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿರುವ ಬಗ್ಗೆ ವರದಿಯಾಗಿದೆ.
ನಕ್ಸಲ್ ಪೀಡಿತ ಗಡ್ಚಿರೋಲಿಯಲ್ಲೂ ಶಾಂತಿಯುತ ಮತದಾನ ನಡೆದಿರುವುದು ವಿಶೇಷವಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಭಾರೀ ಬಿಗಿಭದ್ರತೆ ಕೈಗೊಳ್ಳಲಾಯಿತು.
ಹಕ್ಕು ಚಲಾಯಿಸಿದ ಪ್ರಮುಖ:
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ, ಕಾರ್ಯಾಧ್ಯಕ್ಷ ಆದಿತ್ಯ ಠಾಕ್ರೆ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಚವ್ಹಾಣ್, ಪೃಥ್ವಿರಾಜ್ ಚವ್ಹಾಣ್, ಎನ್‍ಸಿಪಿ ಮುಖಂಡ ಶರತ್ ಪವಾರ್ ಸೇರಿದಂತೆ ಮತ್ತಿತರರು ತಮ್ಮ ಹಕ್ಕು ಚಲಾಯಿಸಿದರು.
ಮಹಾರಾಷ್ಟ್ರದಲ್ಲಿ ಶಿವಸೇನೆ ಬಿಜೆಪಿ ಮೈತ್ರಿಕೂಡ ಅಧಿಕಾರದಲ್ಲಿದ್ದು, ಪುನಃ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದೆ. ಮಹಾರಾಷ್ಟ್ರದ ಒಟ್ಟು 288 ವಿಧಾನಸಭಾ ಕ್ಷೇತ್ರಗಳಿಗೆ 3237 ಅಭ್ಯರ್ಥಿಗಳು ಸ್ಪರ್ಧಿಸಿದ್ದು , 8.98 ಕೋಟಿ ಮತದಾರರು ಹಣೆಬರಹವನ್ನು ತೀರ್ಮಾನಿಸಲಿದ್ದಾರೆ.
ಹರಿಯಾಣದಲ್ಲೂ ಬಿರುಸಿನ ಮತದಾನ
90 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಹರಿಯಾಣದಲ್ಲೂ ಬೆಳಗಿನಿಂದ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಾರಂಭದಲ್ಲೇ ಮತದಾರರು ಬಿರುಸಿನಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.
ಮುಖ್ಯಮಂತ್ರಿ ಮನಹೋರ್ ಲಾಲ್ ಕಟ್ಟರ್, ಮಾಜಿ ಸಿಎಂ ಭೂಪಿಂದರ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಕುಮಾರಿ ಸೆಲ್ವಾ, ಟಿಕ್‍ಟಾಕ್ ಸ್ಟಾರ್ ಖ್ಯಾತಿ ಸೋನಾಲಿ ಪೆÇಗಟ್, ಕುಸ್ತಿಪಟು ಯೋಗೀಶ್ವರ ದತ್ತ ಸೇರಿದಂತೆ ಮತ್ತಿತರರು ತಮ್ಮ ತಮ್ಮ ಕ್ಷೇತ್ರದಲ್ಲಿ ಮತದಾನ ಮಾಡಿದರು.
2ನೇ ಬಾರಿಗೆ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿರುವ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಪ್ರಮುಖ ನಾಯಕರಿಂದ ಚುನಾವಣಾ ಪ್ರಚಾರ ನಡೆಸಲಾಗಿದೆ.
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಯುವ ನಾಯಕ ರಾಹುಲ್ ಗಾಂಧಿ ಸೇರಿದಂತೆ ಮತ್ತಿತರರು ಪ್ರಚಾರ ನಡೆಸಿದ್ದರು. ಹರಿಯಾಣದಲ್ಲಿ 1.83 ಕೋಟಿ ಮತದಾರರು ಇದ್ದು ಕಣದಲ್ಲಿ 1169 ಅಭ್ಯರ್ಥಿಗಳಿದ್ದಾರೆ.
ಇನ್ನು ಮಹಾರಾಷ್ಟ್ರದ ಸತಾರ ಹಾಗೂ ಬಿಹಾರ ಸಮಸ್ತಿಪುರ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಬಿರುಸಿನಿಂದ ಸಾಗಿತ್ತು.
ಅದೇ ರೀತಿ 18 ರಾಜ್ಯಗಳ 51 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗೆ ಮತದಾನ ನಡೆದಿದೆ. ಗುರುವಾರ ಫಲಿತಾಂಶ ಪ್ರಕಟವಾಗಲಿದೆ.