ಬೆಂಗಳೂರು, ಅ.22- ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ನಿರಂತರ ಸುಧಾರಿತ ಕಣ್ಗಾವಲು ಸೇರಿದಂತೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲು ನಿರ್ಭಯ ಯೋಜನೆಯಡಿ 667 ಕೋಟಿ ರೂ. ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಬೆಂಗಳೂರಿನಲ್ಲಿ 24/7 ಮಹಿಳೆಯರ ಸುರಕ್ಷತೆಗಾಗಿ ಸುರಕ್ಷತಾ ದೀಪ ಅಳವಡಿಕೆ, ನಿರಂತರ ಕಣ್ಗಾವಲು ವ್ಯವಸ್ಥೆ ಸೇರಿದಂತೆ ಮೊದಲಾದ ಸೌಲಭ್ಯ ಕಲ್ಪಿಸಲು ಉದ್ದೇಶಸಲಾಗಿದೆ ಎಂದರು.
ಮೂರು ವರ್ಷಗಳ ಅವಧಿಯ ಯೋಜನೆ ಇದಾಗಿದೆ.ಕೇಂದ್ರ ಸರ್ಕಾರ ಶೇ.60ರಷ್ಟು, ರಾಜ್ಯ ಸರ್ಕಾರ ಶೇ.40ರಷ್ಟು ಯೋಜನೆಯ ವೆಚ್ಚವನ್ನು ಭರಿಸಲಿವೆ.5ಸಾವಿರ ಫಿಕ್ಸಡ್ ಕ್ಯಾಮೆರಾ, 500 ಎಫ್ಆರ್ಎಸ್ ಕ್ಯಾಮೆರಾ ಸೇರಿದಂತೆ 7500 ಕ್ಯಾಮೆರಾಗಳನ್ನು ನಗರದ 8 ವಿಭಾಗಗಳಲ್ಲೂ ಅಳವಡಿಸಲಾಗುತ್ತದೆ.ಅಲ್ಲದೆ, ಜಿಐಎಸ್ ಆಧಾರಿತ ಕ್ಲೈಮ್ ಮ್ಯಾಪಿಂಗ್ ವ್ಯವಸ್ಥೆ, ಸಹಾಯವಾಣಿ, ಸಾರ್ವಜನಿಕರಿಗೆ ಅರಿವು ಮೂಡಿಸುವುದು ಸೇರಿದಂತೆ ಮುಂತಾದವುಗಳನ್ನು ನಿರ್ಭಯ ಯೋಜನೆ ಒಳಗೊಂಡಿದೆ.
ನಗರದಾದ್ಯಂತ ಮಹಿಳೆಯರಿಗೆ ಸುರಕ್ಷತೆಗೆ ಗಮನ ಹರಿಸುವುದು ಯೋಜನೆಯ ಉದ್ದೇಶವಾಗಿದೆ.ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಲಾಗಿದೆ ಎಂದರು.
ಶಿಕ್ಷಣ ಇಲಾಖೆಯಲ್ಲಿ ಎರಡು ಜತೆ ಶೂ, ಸಾಕ್ಸ್, ಸಮವಸ್ತ್ರ ನೀಡಲು ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ.ವಸತಿ ಯೋಜನೆಗಾಗಿ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 96 ಎಕರೆ ಜಮೀನನ್ನು ಕಂದಾಯ ಇಲಾಖೆಯಿಂದ ವಸತಿ ಇಲಾಖೆಗೆ ಹಸ್ತಾಂತರಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ತಿಳಿಸಿದರು.
ಪೆÇಲೀಸ್ ಇಲಾಖೆಯ ಗುಪ್ತಚರ ವಾರ್ತೆ, ಹಳೆ ಕಟ್ಟಡದ ಸ್ಥಳದ ಬದಲಾಗಿ ಕೆಎಸ್ಆರ್ಪಿ ಖಾಲಿಜಾಗದಲ್ಲಿ 80 ಕೋಟಿ ರೂ.ವೆಚ್ಚದಲ್ಲಿ ಸೆಂಟ್ರಲ್ ಕಮಾಂಡ್ ಸೆಂಟರ್ (ಪೆÇಲೀಸ್ ಭವನ) ನಿರ್ಮಿಸಲು ಸಂಪುಟ ಅನುಮತಿ ನೀಡಿದೆ ಎಂದರು.
ರಾಜ್ಯ ಸಹಕಾರ ಮಹಾಮಂಡಲವು ರಸಗೊಬ್ಬರ ಖರೀದಿ ದಾಸ್ತಾನಿಗಾಗಿ ಪ್ರಸಕ್ತ ಸಾಲಿನಲ್ಲಿ 400 ಕೋಟಿ ಸಾಲ ಪಡೆಯಲು ಸರ್ಕಾರ ಖಾತ್ರಿ ನೀಡಲು ತೀರ್ಮಾನಿಸಿದೆ.
ದೇವರಾಜ ಅರಸು ಹಿಂದುಳಿದವರ್ಗಗಳ ಅಭಿವೃದ್ಧಿ ನಿಗಮ ಪಡೆಯುವ 15 ಕೋಟಿ ರೂ.ಸಾಲಕ್ಕೆ ಸರ್ಕಾರ ಖಾತರಿ ನೀಡುವುದು ಹಾಗೂ ನಿಗಮದ ಷೇರು ಧನವನ್ನು 500ರಿಂದ 550 ಕೋಟಿಗೆ ಹೆಚ್ಚಳ ಮಾಡಲು ಸಮ್ಮತಿಸಲಾಗಿದೆ.
ನೀರಾವರಿ ಇಲಾಖೆಯ ಕೃಷ್ಣಭಾಗ್ಯ ಜಲನಿಗಮವು ಒಂದು ಸಾವಿರ ಕೋಟಿ ರೂ.ಟರ್ಮ್ಲೋನ್ (ಅವಧಿ ಸಾಲ) ಪಡೆಯಲು ಸರ್ಕಾರ ಸಮ್ಮತಿಸಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ಹಾಗೂ ಆಶ್ರಮ ಶಾಲೆಯ ವಿದ್ಯಾರ್ಥಿಗಳಿಗೆ ನಿರ್ಮಲ ಮತ್ತು ಸಿರಿಗಂಧ ಕಿಟ್ಸ್ ಒದಗಿಸಲು 18.62 ಕೋಟಿ ರೂ.ಅಂದಾಜು ವೆಚ್ಚಕ್ಕೆ ಒಪ್ಪಿಗೆ ನೀಡಲಾಯಿತು ಎಂದರು.
ನೀತಿ ಸಂಹಿತೆ:
ನವೆಂಬರ್ 11ರಿಂದ ವಿಧಾನಸಭೆಯ ಉಪ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದ್ದು, ಅಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ. ನಗರ ಪ್ರದೇಶದಲ್ಲಿ ಚುನಾವಣೆ ನಡೆದರೆ ನೀತಿ ಸಂಹಿತೆ ಆಯಾ ಕ್ಷೇತ್ರಕ್ಕೆ ಅನ್ವಯವಾಗಲಿದೆ. ಗ್ರಾಮೀಣ ಭಾಗದ ಕ್ಷೇತ್ರಕ್ಕೆ ಚುನಾವಣೆ ನಡೆದರೆ ಇಡೀ ಕ್ಷೇತ್ರಕ್ಕೆ ನೀತಿ ಸಂಹಿತೆ ಅನ್ವಯವಾಗುತ್ತದೆ ಎಂದು ತಿಳಿಸಿದರು.
ಕಬ್ಬಿಣಾಂಶ, ಕ್ಯಾಲ್ಸಿಯಂ ಮಾತ್ರೆ ಖರೀದಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹೆಚ್ಚುವರಿಯಾಗಿ 14.38 ಕೋಟಿ ರೂ.ನೀಡಲು ಸಂಪುಟ ಒಪ್ಪಿಗೆ ನೀಡಿದೆ.
ಪಟ್ಟಣ ಪ್ರದೇಶಗಳ ಅಂಗನವಾಡಿ ಕಟ್ಟಡಕ್ಕಾಗಿ 10 ಕೋಟಿ ಒದಗಿಸಲಾಗಿದೆ.ಗುಲ್ಬರ್ಗ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಚಿವರೇ ಅಧ್ಯಕ್ಷರಾಗಬೇಕು ಎಂಬುದನ್ನು ಬದಲಿಸಿ ಶಾಸಕರು ಅಧ್ಯಕ್ಷರಾಗಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯ ಭಾಷಾ ವಿಧೇಯಕಕ್ಕೆ ತಿದ್ದುಪಡಿ ತಂದು ಮುಂದಿನ ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಲಾಗಿದೆ. ನಿಯಮಗಳನ್ನು ಕನ್ನಡದಲ್ಲಿ ರೂಪಿಸಿದಾಗ ಇಲಾಖಾ ಮಟ್ಟದಲ್ಲೇ ತೀರ್ಮಾನ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.