
ನವದೆಹಲಿ: ರಾಷ್ಟ್ರೀಕೃತ ಬ್ಯಾಂಕ್ ಗಳ ವಿಲೀನ, ನಿಗದಿತ ಠೇವಣಿ ಬಡ್ಡಿ ದರ ಇಳಿಕೆ ವಿರೋಧ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ರಾಷ್ಟ್ರಾದ್ಯಂತ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಬಹುತೇಕ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ.
ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ, ಭಾರತೀಯ ಬ್ಯಾಂಕ್ ಉದ್ಯೋಗಿಗಳ ಸಂಘಟನೆ ಮುಷ್ಕರಕ್ಕೆ ಕರೆ ನೀಡಿದ್ದು, ಇದರ ಜತೆಗೆ ಬ್ಯಾಂಕಿಂಗ್ ಕ್ಷೇತ್ರದ ಕೆಲವು ಉದ್ಯೋಗಗಳನ್ನು ಹೊರ ಗುತ್ತಿಗೆ ನೀಡುವುದಕ್ಕೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಆದರೆ, ಆರ್ ಬಿಐ ಹಾಗೂ ಎಸ್ಬಿಐ ಈ ಮುಷ್ಕರದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿವೆ.
ಖಾಸಗೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕುಗಳನ್ನು ವಿಲೀನಗೊಳಿಸುವುದರಿಂದ ಹಲವು ಸಮಸ್ಯೆಗಳು ಎದುರಾಗಲಿವೆ ಎಂದಿರುವ ನೌಕರರು, ಬ್ಯಾಂಕಿಂಗ್ ಸುಧಾರಣಾ ಕ್ರಮದ ನೆಪದಲ್ಲಿ ಬ್ಯಾಂಕ್ ಗಳ ವಿಲೀನ ತಡೆ, ಕೆಟ್ಟ ಸಾಲಗಳ ವಾಪಸಾತಿ ಖಾತರಿ, ಸುಸ್ತಿದಾರರ ವಿರುದ್ಧ ಕಠಿಣ ಕ್ರಮ – ಗ್ರಾಹಕರಿಗೆ ದಂಡದಂತಹ ಕಿರುಕುಳ ತಡೆ, ಸೇವಾ ಶುಲ್ಕ ಹೆಚ್ಚಳ ನಿಯಂತ್ರಣ, ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಳ, ಉದ್ಯೋಗ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮುಷ್ಕರ ನಡೆಸಿದ್ದಾರೆ.
ಮುಷ್ಕರದಲ್ಲಿ 3.5 ಲಕ್ಷಕ್ಕೂ ಅಧಿಕ ಬ್ಯ್ನಾಕ್ ಸಿಬ್ಬಂದಿ ಭಾಗವಹಿಸಲಿದ್ದು, ಬ್ಯಾಂಕ್ ವ್ಯವಹಾರದಲ್ಲಿ ಭಾರೀ ವ್ಯತ್ಯಯವಾಗುವ ಸಾಧ್ಯತೆಯಿದೆ.