ಉತ್ತರ ಕರ್ನಾಟಕಲ್ಲಿ ಮತ್ತೆ ವರುಣನ ರೌದ್ರಾವತಾರ

ಬೆಂಗಳೂರು,ಅ.21- ಭೀಕರ ಮಳೆ ಮತ್ತು ಪ್ರವಾಹದಿಂದ ತತ್ತರಿಸಿ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಉತ್ತರ ಕರ್ನಾಟಕದ ಜನತೆಯ ಮೇಲೆ ಮತ್ತೆ ವರುಣ ತನ್ನ ರೌದ್ರಾವತಾರ ಮೆರೆದಿದ್ದಾನೆ.

ಬಾಗಲಕೋಟೆ, ಗದಗ, ಧಾರವಾಡ, ಬೆಳಗಾವಿ, ವಿಜಯಪುರ, ಹಾವೇರಿ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಇಲ್ಲಿನ ಜನ ಅಕ್ಷರಶಃ ನಲುಗಿ ಹೋಗಿದ್ದಾರೆ.ಮತ್ತೆ ಪ್ರವಾಹ ಉಂಟಾಗಿ ಜನ ದಿಕ್ಕೆಟ್ಟುಹೋಗಿದ್ದಾರೆ.

ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ವರುಣನ ಅಬ್ಬರ ಜೋರಾಗಿದೆ. ತುಂಬಿ ಹರಿಯುತ್ತಿರುವ ಹಳ್ಳ-ಕೊಳ್ಳಗಳಿಂದ ರಸ್ತೆಗಳ ಸಂಪರ್ಕ ಕಡಿತಗೊಂಡು ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ.

ವಾಯುಭಾರ ಕುಸಿತದಿಂದಾಗಿ ಇನ್ನೂ ಐದು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಅನಾಹುತಗಳು ಹೆಚ್ಚಾಗುವ ಆತಂಕ ಎದುರಾಗಿದೆ.

ಖಾನಾಪೂರ ತಾಲೂಕಿನ ಕಸಮಳಗಿಯಲ್ಲಿ ಮಳೆಗೆ ಮನೆ ಗೋಡೆ ಕುಸಿದು ಲಿಯಾಕತ್ ಮಕನದಾರ (55) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಸ್ಥಳಕ್ಕೆ ತಹಶೀಲ್ದಾರ್ ಶಿವಾನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಾವೇರಿ ಜಿಲ್ಲೆ ಹಿರೇಕೆರೂರಿನ ದುರ್ಗಾದೇವಿ ಕೆರೆ ನಾಲೆಯಲ್ಲಿ ಸೋಯಬ್ (14) ಎಂಬ ಬಾಲಕ ಕೊಚ್ಚಿಹೋಗಿದ್ದಾನೆ. ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಕೊಚ್ಚಿಹೋಗಿರುವ ಇನ್ನೂ ಪತ್ತೆಯಾಗಿಲ್ಲ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಜಾವೂರು-ಬಳ್ಳೂರು ನಡುವಿನ ತುಪ್ಪರಿಹಳ್ಳದಲ್ಲಿ ನಿನ್ನೆ ರಾತ್ರಿ ಸಿಲುಕಿದ್ದ ಪ್ರಕಾಶ್ ಅಂಗಡಿ, ಸವಿತಾ ಅಂಗಡಿ ದಂಪತಿಯನ್ನ ರಕ್ಷಣೆ ಮಾಡಲಾಗಿದೆ. ನವಲಗುಂದ ತಹಶೀಲ್ದಾರ್ ನವೀನ್  ಹುಲ್ಲೂರು ಹಾಗೂ ಡಿವೈಎಸ್‍ಪಿ ರಾಮನಗೌಡ ಹಟ್ಟಿ ನೇತೃತ್ವದಲ್ಲಿ  ಬೋಟ್ ಸಹಾಯದೊಂದಿಗೆ ದಂಪತಿಯನ್ನು ರಕ್ಷಿಸಲಾಗಿದೆ.

ಹುಬ್ಬಳ್ಳಿ ತಾಲ್ಲೂಕಿನ ಇಂಗಳ್ಳಳ್ಳಿ ಹಾಗೂ ಶಿಶುವಿನಹಳ್ಳಿ ನಡುವಿನ ಸೇತುವೆ ಕಾಮಗಾರಿ ನಿರ್ವಹಿಸುತ್ತಿದ್ದ 9 ಕಾರ್ಮಿಕರು ಹಳ್ಳದ ಮಧ್ಯೆ ಸಿಲುಕಿಕೊಂಡಿದ್ದು,  ರಕ್ಷಣಾಕಾರ್ಯ ಸಿಬ್ಬಂದಿ ಅವರನ್ನು ಬೋಟ್ ಮೂಲಕ ರಕ್ಷಿಸಿದ್ದಾರೆ.

ಮುಧೋಳದ ಹೊರವಲಯದಲ್ಲಿರುವ ಹನುಮಾನ್ ದಾಂಬಿಗೇರ ಎಂಬುವವರ ಕೋಳಿ ಫಾರಂಗೆ ನೀರು ನುಗ್ಗಿದ ಪರಿಣಾಮ ಸುಮಾರು 3000ಕ್ಕೂ ಹೆಚ್ಚು ಕೋಳಿಗಳು ಆಹುತಿಯಾಗಿವೆ.

ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಶಂಶಿ ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಅಗತ್ಯ ವಸ್ತುಗಳಿಗಾಗಿ ಜನ ಪರದಾಡುತ್ತಿದ್ದಾರೆ.ನೆರವಿಗೆ ಬಾರದ ಅಧಿಕಾರಿಗಳ ವಿರುದ್ಧ ಇಲ್ಲಿನ ಜನ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾದರು.

ಕುಂದಗೋಳ ತಾಲ್ಲೂಕಿನ ರೊಟ್ಟಿಗವಾಡ ಗ್ರಾಮದ ಕೆರೆ 10 ವರ್ಷಗಳ ನಂತರ ಭರ್ತಿಯಾಗಿದೆ.ರಾಮದುರ್ಗ ತಾಲ್ಲೂಕಿನಲ್ಲಿ ಹೆಚ್ಚಿನ ಮಳೆಯಾಗಿದ್ದು, ಕಿಲಬನೂರು ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಎತ್ತಿನ ಬಂಡಿ ಹಾಗೂ ಟಂ ಟಂ ವಾಹನದ ಮೂಲಕ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಜನ ಊರು ಖಾಲಿ ಮಾಡುತ್ತಿದ್ದಾರೆ.

ಬೆಳಗಾವಿ ಜಿಲ್ಲೆ ಒಂಟುಮುರಿ ಬಳಿ ರಸ್ತೆ ಕುಸಿದು ಕೆಎಸ್‍ಆರ್‍ಟಿಸಿ ಬಸ್ ಸಿಲುಕಿಕೊಂಡಿದೆ.

ಧಾರವಾಡ ತಾಲೂಕಿನ ತಡಕೋಡ, ಗರಗ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಶಾಸಕ ಅಮೃತ್ ದೇಸಾಯಿ, ಜಿಲ್ಲಾಧಿಕಾರಿ ದೀಪಾ ಚೋಳನ್ ಮುಂತಾದವರು ಪರಿಶೀಲನೆ ನಡೆಸಿ ಪರಿಹಾರ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿದರು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಭಾಗದಲ್ಲೂ ಧಾರಾಕಾರ ಮಳೆ ಆಗಿದ್ದು, ಆಡಿ ಗ್ರಾಮ ಸಂಪೂರ್ಣ ಜಲಾವೃತವಾಗಿದೆ.ನೂರಾರು ವಾಹನಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ.

ಬೇಡಕಿಹಾಳದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀರು ನುಗ್ಗಿ ರೋಗಿಗಳು ಪರದಾಡುವಂತಾಯಿತು.ಚಿಕ್ಕೋಡಿ ಪಟ್ಟಣದಲ್ಲಿ ಮಳೆಯಬ್ಬರಕ್ಕೆ ರಸ್ತೆಯೇ ಕೊಚ್ಚಿಕೊಂಡು ಹೋಗಿ ವಾಹನ ಸಂಚಾರಕ್ಕೆ ಅಡಚಣೆಯಾಯಿತು.

ಇತ್ತ ಬೆಳಗಾವಿಯಲ್ಲೂ ಭಾರೀ ಮಳೆ ಸುರಿದು ರಸ್ತೆಯಲ್ಲೆಲ್ಲಾ ನೀರು ಹರಿದಿದೆ.ಇಲ್ಲಿನ ನಗರದ ರೈಲ್ವೆ ಪೆÇಲೀಸ್ ಸ್ಟೇಷನ್‍ಗೆ ಚರಂಡಿ ನೀರು ನುಗ್ಗಿದ ಪರಿಣಾಮ ಸಿಬ್ಬಂದಿಗಳೂ ಕಂಪ್ಯೂಟರ್ ಸೇರಿದಂತೆ ಮಹತ್ವದ ವಸ್ತುಗಳನ್ನ ಬೇರೆಡೆಗೆ ಸ್ಥಳಾಂತರಿಸಿದರು.ಅಲ್ಲದೇ ವೀರಭದ್ರೇಶ್ವರ ಮತ್ತು ಅಹ್ಮದ್ ನಗರದಲ್ಲಿರುವ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನ ರಾತ್ರಿಯಿಡೀ ಜಾಗರಣೆ ಮಾಡುವಂತಾಯಿತು.

ಬೂತರಾಮನಟ್ಟಿಯಲ್ಲೂ ಮನೆಗಳು ಜಲಾವೃತಗೊಂಡಿದ್ದವು. ಕಿತ್ತೂರು ಮತ್ತು ಬೈಲಹೊಂಗಲ, ರಾಮದುರ್ಗಾ ತಾಲೂಕಲ್ಲಿ ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದು, ಸವದತ್ತಿಯಲ್ಲಿರುವ ನವಿಲುತೀರ್ಥ ಡ್ಯಾಂನಿಂದ 20 ಸಾವಿರ ಕ್ಯೂಸೆಕ್ ನೀರನ್ನ ಹೊರಬಿಡಲಾಗುತ್ತಿದೆ. ಹೀಗಾಗಿ ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.

ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆಗೆ ಗೋಪನಕೊಪ್ಪದಲ್ಲಿ 10ಕ್ಕೂ ಹೆಚ್ಚು ಮನೆಗಳು ಕುಸಿದು, ಅಪಾರ್ಟ್‍ಮೆಂಟ್‍ಗಳಿಗೆ ನೀರು ನುಗ್ಗಿದೆ. ಗದಗ ಜಿಲ್ಲೆಯ ನರಗುಂದ, ರೋಣ ತಾಲೂಕಲ್ಲಿ ಪ್ರವಾಹ ಭೀತಿ ಉಂಟಾಗಿದೆ.ಈ ಹಿನ್ನೆಲೆಯಲ್ಲಿ ನರಗುಂದ ತಾಲೂಕಿನ ಲಖಮಾಪೂರ, ವಾಸನ, ಕೊಣ್ಣೂರ ಬೂದಿಹಾಳ, ರೋಣ ತಾಲೂಕಿನ ಮೆಣಸಗಿ, ಹೊಳೆಆಲೂರ, ಹೊಳೆಮಣ್ಣೂರದ ಜನರನ್ನ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ದಾವಣಗೆರೆ ನಗರ ಮತ್ತು ಹೊನ್ನಾಳಿಯಲ್ಲೂ ಭಾರೀ ಮಳೆ ಆಗ್ತಿದ್ದು ಹೊನ್ನಾಳಿಯಲ್ಲಿ ಖಾಸಗಿ ಬಸ್‍ಸ್ಟ್ಯಾಂಡ್ ಜಲಾವೃತಗೊಂಡಿತ್ತು.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಮಳೆಯಿಂದಾಗಿ ಹೋಟೆಲ್, ಕಿರಾಣಿ ಅಂಗಡಿ, ಹಾರ್ಡ್ ವೇರ್ ಅಂಗಡಿಗಳಿಗೆ ನೀರು ನುಗ್ಗಿತ್ತು.ಜಲಾವೃತ ಗೊಂಡಿದ್ದರಿಂದ ಅಪಾರ ಪ್ರಮಾಣದಲ್ಲಿ ಬೆಲೆ ಬಾಳುವ ವಸ್ತುಗಳಿಗೆ ಹಾನಿ ಆಗಿದೆ. ಜಲಾವೃತಗೊಂಡ ಬಳಿಕ ಧಾವಿಸಿದ ಪಟ್ಟಣ್ಣ ಪಂಚಾಯ್ತಿ ಸಿಬ್ಬಂದಿ ನೀರು ಹೊರಹಾಕುವ ಪ್ರಯತ್ನ ಮಾಡಿದರು.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಆಲದಳ್ಳಿಯಲ್ಲಿ 10ಕ್ಕೂ ಹೆಚ್ಚು ಮನೆಗಳು ಕುಸಿದಿವೆ.

ತರೀಕೆರೆ, ಅಜ್ಜಂಪುರ ತಾಲೂಕಿನ ವಿವಿಧ ಗ್ರಾಮಗಳು ವರುಣನ ಅಬ್ಬರಕ್ಕೆ ನಲುಗಿ ಹೋಗಿವೆ. ನಿನ್ನೆ ಸುರಿದ ಭಾರೀ ಮಳೆಗೆ ಶಿವನಿ, ಅಜ್ಜಂಪುರ ಮುಂತಾದೆಡೆ ಬೆಳೆದ ಈರುಳ್ಳಿ ನೀರಿನಲ್ಲಿ ಕೊಚ್ಚಿ ಹೋಗಿದೆ. ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ