ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭಾ ಚುನಾವಣೆ-ಇಂದು ಪ್ರಚಾರ ಅಂತ್ಯ

ಮುಂಬೈ/ಚಂಡಿಗಢ, ಅ.19- ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ಹೈವೋಲ್ಟೇಜ್ ವಿಧಾನಸಭಾ ಚುನಾವಣೆ ಪ್ರಚಾರ ಇಂದು ಸಂಜೆ ಅಂತ್ಯಗೊಂಡಿದ್ದು, ಮತದಾನಕ್ಕೆ ಕಾಲಗಣನೆ ಆರಂಭವಾಗಿದೆ.
ಈ ಎರಡೂ ರಾಜ್ಯಗಳಲ್ಲೂ ಪ್ರಮುಖ ರಾಜಕೀಯ ಪಕ್ಷಗಳ ಧುರೀಣರು ಮತದಾರರನ್ನು ಓಲೈಸುವ ಕೊನೆ ನಿಮಿಷಗಳ ಕಸರತ್ತು ನಡೆಸಿದರು.
ಮಹಾರಾಷ್ಟ್ರದ 288 ಮತ್ತು ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಅ.21 ಸೋಮವಾರ ಚುನಾವಣೆ ನಡೆಯಲಿದೆ. ಇದೇ ವೇಳೆ 17 ರಾಜ್ಯಗಳ ಎರಡು ಲೋಕಸಭಾ ಕ್ಷೇತ್ರಗಳು ಮತ್ತು 51 ವಿಧಾನಸಭಾ ಕ್ಷೇತ್ರಗಳಿಗೂ ಅಂದೇ ಮತದಾನವಾಗಲಿದೆ.
288 ಸದಸ್ಯ ಬಲದ ಮಹಾರಾಷ್ಟ್ರದಲ್ಲಿ ಒಟ್ಟು 3,237 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ 262 ಮಹಿಳಾ ಉಮೇದುವಾರರು. ಬಹು ಜನ ಸಮಾಜ ಪಕ್ಷವು ಈ ಬಗ್ಗೆ ಗರಿಷ್ಠ 262 ಹುರಿಯಾಳುಗಳನ್ನು ಅಖಾಡಕ್ಕಿಳಿಸಿದೆ. ಅಲ್ಲದೆ, 1,400 ಅಭ್ಯರ್ಥಿಗಳೂ ಸಹ ಸ್ಪರ್ಧೆಯಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ ವಾರ್ಧಾ ಅತ್ಯಂತ ಪುಟ್ಟ ಮತ್ತು ಪನ್ವೆಲ್ ಅತಿ ದೊಡ್ಡ ವಿಧಾನಸಭಾ ಕ್ಷೇತ್ರವಾಗಿದೆ.
ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಅ.21ರಂದು ಚುನಾವಣೆ ನಡೆಯಲಿದ್ದು, ಒಟ್ಟು 1169 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಇವರಲ್ಲಿ 104 ಮಹಿಳಾ ಸ್ಪರ್ಧಿಗಳೂ ಸಹ ತಮ್ಮ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ನಮೌಲ್ ಮತ್ತು ಬಾದಾಶಾಪುರ್ ಈ ರಾಜ್ಯದ ಅತಿ ಚಿಕ್ಕ ಮತ್ತು ಅತ್ಯಂತ ದೊಡ್ಡ ವಿಧಾನಸಭಾ ಕ್ಷೇತ್ರಗಳಾಗಿವೆ.
ಈ ಎರಡೂ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಜತೆ ಬಿಹಾರದ ಸಮಷ್ಟಿಪುರ ಮತ್ತು ಮಹಾರಾಷ್ಟ್ರದ ಸತಾರ ಲೋಕಸಭೆ ಹಾಗೂ ವಿವಿಧ ರಾಜ್ಯಗಳ 51 ವಿಧಾನಸಭೆಗಳಿಗೆ ಉಪ ಚುನಾವಣೆ ನಡೆಯಲಿದೆ.
ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂಧ್ರ ಸಚಿವರಾದ ಅಮಿತ್ ಷಾ, ರಾಜನಾಥ್ ಸಿಂಗ್, ಮುಖ್ಯಮಂತ್ತಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಪಕ್ಷದ ಅಗ್ರಮಾನ್ಯ ನಾಯಕರು ಬಿರುಸಿನ ಚುನಾವಣಾ ಪ್ರಚಾರ ಮಾಡಿದರು.
ಕಾಂಗ್ರೆಸ್ ಪರವಾಗಿ ರಾಹುಲ್‍ಗಾಂಧಿ, ಪಕ್ಷದ ವರಿಷ್ಠರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಮುಖಂಡರು ಬೃಹತ್ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಅ.24 ಗುರುವಾರ ಈ ಎರಡೂ ರಾಜ್ಯಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಫಲಿತಾಂಶ ಲಭ್ಯವಾಗಲಿದೆ.
ಎರಡೂ ರಾಜ್ಯಗಳಲ್ಲೂ ಬಿಜೆಪಿ ಜಯ- ಸಮೀಕ್ಷೆ : ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಮತ್ತೊಮ್ಮೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಈಗಾಗಲೇ ಸಮೀಕ್ಷೆಗಳು ಹೇಳಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ