ಬೆಂಗಳೂರು, ಅ.19-ಅಸಂಘಟಿತ ವಲಯದ ಚಾಲಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ರೂಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ಸಂಯುಕ್ತ ಶಾಲಾ ಹಾಗೂ ಲಘು ವಾಹನ ಚಾಲಕರ ಸಂಘ ಸಿರೂರು ಪಾರ್ಕ್ ಮೈದಾನದ ಗುಂಡೂರಾವ್ ಸಭಾಗಂಣದಲಿ ಹಮ್ಮಿಕೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಪಿ. ಎಸ್. ಷಣ್ಮುಗಂ ಮಾತನಾಡಿ ಶಾಲಾ ವಾಹನ ಚಾಲಕರು ಕೆಲವು ದಶಕಗಳಿಂದ ಶಾಲಾ ಮಕ್ಕಳನ್ನು ಮನೆಯಿಂದ ಶಾಲೆಗೆ ಹಾಗೂ ಶಾಲೆಯಿಂದ ಮನೆಗೆ ಸುರಕ್ಷಿತವಾಗಿ ಕೊಂಡೊಯ್ಯವ ಜವಾಬ್ದಾರಿಯುತ ಸೇವೆಯಲ್ಲಿ ತೊಡಗಿದ್ದಾರೆ. ಇಂತಹ ಚಾಲಕರು ಕೆಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.ಆದ್ದರಿಂದ ಶಾಲಾ ಒಡೆತನದ ವಾಹನಗಳಿಗೆ ನಿಗದಿ ಪಡಿಸಿರುವ ತೆರಿಗೆಯನ್ನೇ ಖಾಸಗಿ ವಾಹನಗಳಿಗೂ ನಿಗದಿ ಪಡಿಸಬೇಕು ಎಂದು ಆಗ್ರಹಿಸಿದರು.
2013ರಲ್ಲಿ ರಾಜ್ಯ ಸಾರಿಗೆ ಇಲಾಖೆ ಶಾಲಾ ಮಕ್ಕಳ ಸುರಕ್ಷತೆ ಹಾಗೂ ಶಾಲಾ ವಾಹನ ಚಾಲಕರ ಹಿತದೃಷ್ಟಿಯಿಂದ ಕರ್ನಾಟಕ ಸ್ಕೂಲ್ ಕ್ಯಾಬ್ ಸ್ಕೀಮ್ ಆದೇಶವನ್ನು ಹೊರಡಿಸಿತ್ತು.ಒಂದೆಡೆ ಅದು ಸಮರ್ಪಕವಾಗಿಲ್ಲ. ಮತ್ತೊಂದೆಡೆ 6 ವರ್ಷಗಳಾದರೂ, ಸಹ ಅದನ್ನು ಜಾರಿಗೆ ತರಲು ಸರ್ಕಾರ ವಿಫಲವಾಗಿದೆ.ಈ ಹಿನ್ನಲೆಯಲ್ಲಿ ಕೂಡಲೇ ರಾಜ್ಯ ಸರ್ಕಾರವು ಸರಿಯಾದ ನಿಯಮಾವಳಿಗಳನ್ನು ರೂಪಿಸಿ ಶಾಲಾ ಮಕ್ಕಳ ಸುರಕ್ಷತೆ ಹಾಗೂ ಚಾಲಕರ ಜೀವನೋಪಾಯಕ್ಕೆ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.
ಖಾಸಗಿ ಶಾಲಾ ವಾಹನಗಳಿಗೂ ಸಹ ಶಾಲಾ ಪರ್ಮಿಟ್ ನೀಡಬೇಕು.ಖಾಸಗಿ ಶಾಲಾ ವಾಹನಗಳಿಗೆ ಶಾಲೆಗಳ ಸಮೀಪದಲ್ಲೇ ಪಾರ್ಕಿಂಗ್ ಸ್ಥಳ ಖಾತ್ರಿಪಡಿಸಬೇಕು.ಭಾರತ ಮೋಟಾರ್ ವಾಹನ ಕಾಯ್ದೆ ಗೆ ತಂದಿರುವ ತಿದ್ದುಪಡಿ ಹಿಂಪಡೆಯಬೇಕು ಎಂದು ಪಿ.ಎಸ್. ಷಣ್ಮುಗಂ ಆಗ್ರಹಿಸಿದರು.
ಮಹದಾಯಿ ಇಡೀ ರಾಜ್ಯದ ಸಮಸ್ಯೆ- ಕೇಂದ್ರ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ
ಕಲಬುರ್ಗಿ, ಅ.19- ಅಂತಾರಾಜ್ಯ ಮಹದಾಯಿ ನದಿ ಕೇವಲ ಉತ್ತರ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಅದು ರಾಜ್ಯದ ಸಮಸ್ಯೆ. ವಿವಾದವನ್ನು ಬಗೆಹರಿಸಲು ಪಕ್ಷಾತೀತ ಬೆಂಬಲ ಅಗತ್ಯ ಎಂದು ಕೇಂದ್ರ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಹುಬ್ಬಳ್ಳಿ-ಧಾರವಾಡ ಮತ್ತು ಗದಗ ಭಾಗದ ಮಹದಾಯಿ ಹೋರಾಟಗಾರರನ್ನು ಭೇಟಿ ಮಾಡಿ ರಾಜ್ಯಪಾಲರು ಮನವಿ ಸ್ವೀಕರಿಸಬೇಕೆಂದು ಆಗ್ರಹಿಸಿದ್ದಾರೆ.
ಮಹದಾಯಿ ಕೇವಲ ಮೂರ್ನಾಲ್ಕು ಜಿಲ್ಲೆಗಳ ಸಮಸ್ಯೆ ಅಲ್ಲ. ಇಡೀ ರಾಜ್ಯದ ಸಮಸ್ಯೆ.ಪಕ್ಷಾತೀತವಾಗಿ ವಿವಾದ ಬಗೆಹರಿಸಲು ಎಲ್ಲರೂ ಬೆಂಬಲ ನೀಡಬೇಕು ಎಂದರು.
ಈ ಹಿಂದೆ ನಾವು ಅಧಿಕಾರದಲ್ಲಿದ್ದಾಗ ಮಹದಾಯಿ ವಿವಾದದ ಕುರಿತು ಚರ್ಚೆ ಮಾಡಿದ್ದೆವು.ಗೋವಾಗೆ ಬಹಳಷ್ಟು ನೀರು ಹರಿದು ಹೋಗುತ್ತಿದೆ.ಅದರಲ್ಲಿ ನಮ್ಮ ಪಾಲಿನ 8 ಟಿಎಂಸಿ ನೀರು ಬಳಸಿಕೊಂಡು ಕುಡಿಯುವ ನೀರು ಪೂರೈಸುವ ಯೋಜನೆ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ಇಚ್ಚಿಸಿತ್ತು.ಆದರೆ, ಗೋವಾ ಸರ್ಕಾರ ಅದಕ್ಕೆ ಸಹಕರಿಸಿರಲಿಲ್ಲ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ಅಲ್ಲಿ ಒಳ್ಳೆಯ ವಾತಾವರಣವಿದೆ. ಕಾಂಗ್ರೆಸ್ ನೇತೃತ್ವದ ಮೈತ್ರಿ ಕೂಟ ಅಧಿಕಾರಕ್ಕೆ ಬರಲಿದೆ.ಎನ್‍ಸಿಪಿ, ಸಿಪಿಎಂ ಒಗ್ಗೂಡಿ ಚುನಾವಣೆ ಎದುರಿಸಿದ್ದೇವೆ. ಬಹಿರಂಗ ಚುನಾವಣೆ ಪ್ರಚಾರ ಇಂದು ಅಂತ್ಯಗೊಂಡಿದೆ.ಅಲ್ಲಿನ ಜನ ಬಿಜೆಪಿ ಸರ್ಕಾರದ ವಿರುದ್ಧ ರೊಚ್ಚಿಗೆದಿದ್ದಾರೆ.ಆಡಳಿತ ವಿರೋಧಿ ಹೆಚ್ಚಾಗಿದೆ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಮಹಾರಾಷ್ಟ್ರದಲ್ಲಿ 2200 ಉದ್ದಿಮೆಗಳು ಮುಚ್ಚಿ ಹೋಗಿವೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್ ಸರ್ಕಾರ ಐದು ವರ್ಷದಲ್ಲಿ ಏನನ್ನೂ ಮಾಡಲಿಲ್ಲ. ನಿಮ್ಮ ಸಾಧನೆಗಳ ಪಟ್ಟಿ ಕೊಡಿ ಎಂದರೆ ಜಮ್ಮು-ಕಾಶ್ಮೀರದಲ್ಲಿ 370 ವಿಧಿ ರದ್ದು ಮಾಡಿದ್ದನ್ನು ಹೇಳುತ್ತಾರೆ.ಆ ಕಿಯಾ, ಓ ಕಿಯಾ ಎಂದು ರಾಷ್ಟ್ರೀಯ ವಿಷಯಗಳನ್ನು ಚರ್ಚೆ ಮಾಡುತ್ತಾರೆ.ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸಾಧನೆ ಏನು ಎಂದು ಬಾಯಿ ಬಿಡುತ್ತಿಲ್ಲ ಎಂದು ಕಿಡಿಕಾರಿದರು.
ವೀರ ಸಾವರ್ಕರ್ ಅವರಿಗೆ ಭಾರತ ರತ್ನ ಕೊಡಲು ಶಿಫಾರಸು ಮಾಡುವುದಾಗಿ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವ ಬಗ್ಗೆ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ವಿಧಾನಸಭೆ ಚುನಾವಣೆ ಮುಗಿಯಿಲಿ.ಅನಂತರ ಮಾತನಾಡುತ್ತೇನೆ ಎಂದು ಖರ್ಗೆ ಪ್ರತಿಕ್ರಿಯಿಸಿದರು.