ರೈತರು ನಡೆಸುತ್ತಿರುವ ಹೋರಾಟದ ಗೋಳು ಕೇಳುವವರೇ ಇಲ್ಲ

ಬೆಂಗಳೂರು, ಅ.19- ಭೋರ್ಗರೆದು ಸುರಿದ ಮಳೆಗೂ ಅನ್ನದಾತರ ಹೋರಾಟದ ಕಿಚ್ಚು ಆರಿಸಲು ಸಾಧ್ಯವಾಗಲಿಲ್ಲ. ನಿನ್ನೆ ರಾತ್ರಿಯಿಡೀ ಧೋ ಎಂದು ಸುರಿದ ಮಳೆಯಲ್ಲೂ ತಮ್ಮ ಹೋರಾಟ ಮುಂದುವರಿಸಿದ ರೈತರು ಬೇಡಿಕೆ ಈಡೇರುವವರೆಗೂ ಜಗ್ಗಲ್ಲ ಎಂಬ ಸಂದೇಶದ ಜತೆಗೆ ಉಪವಾಸ ಸತ್ಯಾಗ್ರಹದ ಎಚ್ಚರಿಕೆಯನ್ನೂ ಸರ್ಕಾರಕ್ಕೆ ರವಾನಿಸಿದ್ದಾರೆ.

ಮಹದಾಯಿಗಾಗಿ ಕಳೆದ ಮೂರು ದಿನಗಳಿಂದ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ರೈತರು ನಡೆಸುತ್ತಿರುವ ಹೋರಾಟದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಮಳೆಯಲ್ಲೂ ಮಹದಾಯಿಗಾಗಿ ಅಧಿಸೂಚನೆ ಹೊರಡಿಸುವಂತೆ ಕಳೆದ ಮೂರು ದಿನಗಳಿಂದ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರೈತರು ನಡೆಸುತ್ತಿರುವ ಹೋರಾಟದ ಗೋಳು ಕೇಳುವವರೇ ಇಲ್ಲದಂತಾಗಿರುವುದು ಶೋಚನೀಯ.

ಮಳೆ, ಚಳಿ ಎನ್ನದೆ ಅಹೋರಾತ್ರಿ ಹೋರಾಟ ನಡೆಸುತ್ತಿದ್ದು, ಮೂವರು ರೈತ ಮಹಿಳೆಯರು ತೀವ್ರ ಜ್ವರದಿಂದ ಅಸ್ವಸ್ಥರಾಗಿದ್ದು, ಅವರನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಕಳಸಾ ಬಂಡೂರಿ ಯೋಜನೆ ಅಧಿಸೂಚನೆಗೆ ರಾಜ್ಯಪಾಲರ ಭೇಟಿಗೆ  ನಿರಾಕರಣೆ ಮಾಡಿರುವುದರಿಂದ ಇಂದಿನಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

ರೈಲ್ವೆ ನಿಲ್ದಾಣದ ಬಳಿಯೇ ಉತ್ತರ ಕರ್ನಾಟಕ ಭಾಗದ ಐದು ಜಿಲ್ಲೆಗಳು, 13 ತಾಲ್ಲೂಕುಗಳಿಂದ ಆಗಮಿಸಿದ್ದ ನೂರಾರು ರೈತರು ಬೀಡುಬಿಟ್ಟಿದ್ದು, ಇವರಿಗೆ ಆಕಾಶವೇ ಹೊದಿಕೆ, ಭೂಮಿಯೇ ಹಾಸಿಗೆ ಎಂಬಂತಾಗಿದೆ.ತಮ್ಮ ಮಕ್ಕಳು-ಮರಿಗಳೊಂದಿಗೆ ಇಲ್ಲಿಯೇ ರೈತ ಮಹಿಳೆಯರು ದಿನದೂಡುತ್ತಿದ್ದರೂ ಯಾರೂ ಇವರ ಗೋಳನ್ನು ಆಲಿಸುತ್ತಿಲ್ಲ.

ರಾಜ್ಯಪಾಲರು ಕೂಡ ಇವರ ಸಮಸ್ಯೆಯನ್ನು ಆಲಿಸಲು ಒಪ್ಪಿಲ್ಲ. ಇವರ ಮನವಿಯನ್ನು ಕೂಡ ಸ್ವೀಕರಿಸಿಲ್ಲ. ಯಾವೊಬ್ಬ ಜನಪ್ರತಿನಿಧಿಯೂ ಕೂಡ ಇವರ ಬಳಿ ಬಂದು ಪರಿಸ್ಥಿತಿಯನ್ನು ಪರಾಮರ್ಶಿಸಿಲ್ಲ. ಕನಿಷ್ಟ ಪಕ್ಷ ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳಾದರೂ ಕೂಡ ಇವರ ಸಮಸ್ಯೆ ಕೇಳಲು ಮುಂದಾಗಿಲ್ಲ.

ಕಳೆದ ಮೂರೂವರೆ ವರ್ಷಗಳಿಂದ ಮಹದಾಯಿಗಾಗಿ ಆಗ್ರಹಿಸಿ ನರಗುಂದದಲ್ಲಿ ಹೋರಾಟ ನಡೆಸಿದ್ದೆವು.ನಮಗೇನು ಈ ನಾಲ್ಕು ದಿವಸದ ಹೋರಾಟ ದೊಡ್ಡದಲ್ಲ. ನಮಗೇನೇ ತೊಂದರೆಯಾದರೂ ಪರವಾಗಿಲ್ಲ. ನಮಗೆ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು.ನ್ಯಾಯಾಧೀಕರಣ ತೀರ್ಪು ನೀಡಿದೆ.ಅದರಂತೆ ಅಧಿಸೂಚನೆ ಹೊರಡಿಸಿ ಶೀಘ್ರ ನ್ಯಾಯ ಒದಗಿಸಬೇಕು.ನಮ್ಮ ಮನವಿಯನ್ನು ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸುತ್ತೇವೆ. ಅದನ್ನು ಅವರು ಸ್ವೀಕರಿಸಬೇಕು ಎಂಬುದು ಪ್ರತಿಭಟನಾಕಾರರ ಆಗ್ರಹವಾಗಿದೆ.ಇದು ನೆರವೇರುವವರೆಗೂ ನಾವು ಇಲ್ಲಿಂದ ತೆರಳುವುದಿಲ್ಲ ಎಂದು ಅವರು ಹೇಳಿದರು.

ಪ್ರತಿಭಟನೆಯ ನೇತೃತ್ವ ವಹಿಸಿರುವ ಕರ್ನಾಟಕ ರೈತಸೇನಾ ಅಧ್ಯಕ್ಷ ವೀರೇಶ ಸೊರಬದ ಮಾತನಾಡಿ, ನಿನ್ನೆಯವರೆಗೆ ರಾಜ್ಯಪಾಲರ ಭೇಟಿ ಮಾಡಲು ಪ್ರಯತ್ನಿಸಿದೆವು.ಈಗ ನಾವು ರಾಜ್ಯಪಾಲರನ್ನು ಭೇಟಿ ಮಾಡುವುದಿಲ್ಲ. ಅವರ ನಿಯೋಗವೇ ಬಂದು ನಮ್ಮನ್ನು ಭೇಟಿ ಮಾಡಬೇಕು.ಅಲ್ಲಿಯವರೆಗೆ ನಾವು ಇಲ್ಲಿಂದ ಕದಲುವುದಿಲ್ಲ. ಇಂದು ಭೇಟಿ ಮಾಡಿ ಮನವಿ ಸ್ವೀಕರಿಸದಿದ್ದರೆ ಇಂದಿನಿಂದ ನಾವು ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

ಬೇಡಿಕೆ ಈಡೇರುವವರೆಗೂ ನಮ್ಮ ಹೋರಾಟವನ್ನು ಹಿಂತೆಗೆದುಕೊಳ್ಳುವುದಿಲ್ಲ. ಅಧಿಸೂಚನೆಗಾಗಿ ಮನವಿ ಸಲ್ಲಿಸಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಈ ಸಂಬಂಧ ಪೆÇಲೀಸ್ ಆಯುಕ್ತರಿಗೆ, ಗೃಹ ಮಂತ್ರಿಗಳಿಗೆ ಪತ್ರವನ್ನು ಕೂಡ ಬರೆದಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಬೆಳಗ್ಗೆ 11 ಗಂಟೆವರೆಗೆ ಗಡುವು ನೀಡಿದ್ದೇವೆ.ಇಲ್ಲದಿದ್ದರೆ ಗಾಂಧಿ ಮಾರ್ಗದಲ್ಲಿ ನೀರಿಗಾಗಿ ಹೋರಾಟ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಮೂರು ದಿನಗಳಿಂದ ರೈತರಾದ ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟವನ್ನು ಕೇಳುವವರೇ ಇಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ನಾವು ಹೋರಾಟ ಮಾಡಿದರೆ ನಮ್ಮ ಭಾಗದ ಸಂಸದರು, ಜನಪ್ರತಿನಿಧಿಗಳು ನಮ್ಮ ಮೇಲೆ ಹಲ್ಲೆ, ಲಾಠಿ ಚಾರ್ಜ್ ಮಾಡಿಸುತ್ತಾರೆ.ಅದಕ್ಕೇ ರಾಜಧಾನಿಗೆ ಬಂದು ಹೋರಾಟ ಮಾಡುತ್ತಿದ್ದೇವೆ. ಏನಾದರೂ ಆಗಲಿ ನಮ್ಮ ಭಾಗದ ಜನರಿಗೆ ಕುಡಿಯುವ ನೀರು ಸಿಗಲಿ.ಅಷ್ಟೇ ನಮ್ಮ ಆಗ್ರಹ ಎಂದು ಹೇಳಿದರು.

 

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ