ಬೆಂಗಳೂರು, ಅ.19: ಕಳಸಾ ಬಂಡೂರಿ ಯೋಜನೆಗೆ ಅಧಿಸೂಚನೆ ಹೊರಡಿಸಲು ಆಗ್ರಹಿಸುತ್ತಿರುವ ರೈತರ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಮೂರನೇ ದಿನ ಶನಿವಾರ ಪ್ರತಿಭಟನೆ ಮುಂದುವರೆಸಿದ್ದು ರಾಜ್ಯಪಾಲರ ಭೇಟಿಗೆ ಬಿಗಿಪಟ್ಟು ಹಿಡಿದಿದ್ದಾರೆ. ಮಳೆಯನ್ನು ಲೆಕ್ಕಿಸದೇ ಪ್ರತಿಭಟನೆ ನಡೆಸುತ್ತಿರುವ ರೈತರು ಈ ವಿಷಯದಲ್ಲಿ ರಾಷ್ಟ್ರಪತಿ ಮತ್ತು ರಾಜ್ಯಪಾಲರು ಮಧ್ಯ ಪ್ರವೇಶಿಬೇಕೆಂದು ಬಿಗಿ ಪಟ್ಟು ಹಿಡಿದರು. ಇದಕ್ಕಾಗಿ ಬೆಳಗ್ಗೆ 11 ಗಂಟೆವರೆಗೂ ಡೆಡ್ ಲೈನ್ ಕೊಟ್ಟಿದ್ದರು. ಜೊತೆಗೆ ರಾಜ್ಯಪಾಲರನ್ನ ಭೇಟಿ ಮಾಡಿಸುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಪತ್ರವನ್ನ ಬರೆದಿದ್ದಾರೆ. ರಾಜ್ಯಪಾಲರನ್ನ ಖುದ್ದು ಭೇಟಿ ಮಾಡಿಸುವಂತೆ ರೈತ ಮುಖಂಡರು ಬಿಗಿ ಪಟ್ಟು ಹಿಡಿದಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಡಿಸಿಎಂ ಕಾರಜೋಳ ಭೇಟಿ
ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆಗೆ ಕಳೆದ ಮೂರು ದಿನಗಳಿಂದ ಒಬ್ಬನ್ನೇ ಒಬ್ಬ ಜನಪ್ರತಿನಿಧಿ ಭೇಟಿ ನೀಡಿರಲಿಲ್ಲ. ಆದರೆ ಶನಿವಾರ ಬೆಳಗ್ಗೆ ಡಿಸಿಎಂ ಗೋವಿಂದ ಕಾರಜೋಳ ಭೇಟಿ ನೀಡಿದ್ದಾರೆ. ಪ್ರತಿಭಟನೆಯನ್ನ ಹಿಂಪಡೆಯುವಂತೆ ಗೋವಿಂದ ಕಾರಜೋಳ ಮನವೊಲಿಸಿದರು. ಆದರೆ ರೈತರು ಸಚಿವರ ಮನವಿಯನ್ನ ನಿರಾಕರಿಸಿದರು. ಈ ಹಿನ್ನಲೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಆಪ್ತಕಾರ್ಯದರ್ಶಿಗೆ ಕರೆ ಮಾಡಿ ಮಾತನಾಡಿದ್ದಾರೆ. ನಾನೆ ರೈತರ ಮನವಿಯನ್ನ ಹಿಡಿದು ರಾಜ್ಯಪಾಲರ ಬಳಿ ಹೋಗುವುದಾಗಿ ಹೇಳಿದ್ದಾರೆ.