ಸರ್ಕಾರದ ಆಡಳಿತದಲ್ಲಿ ಮುಖ್ಯಮಂತ್ರಿ ಪುತ್ರ ಬಿ.ವೈ. ವಿಜಯೇಂದ್ರ ಹಸ್ತಕ್ಷೇಪ

ಬೆಂಗಳೂರು,ಅ.18- ಸರ್ಕಾರದ ಆಡಳಿತದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಹಸ್ತಕ್ಷೇಪ ಮತ್ತೆ ಶುರುವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಈ ರೀತಿ ಸುದ್ದಿ ಬಿತ್ತರಗೊಳ್ಳುತ್ತಿದ್ದಂತೆ ಟ್ವೀಟ್ ಮೂಲಕ ಸಮಜಾಯಿಷಿ ನೀಡಿ ತೇಪೆ ಹೆಚ್ಚುವ ಕೆಲಸವನ್ನು ವಿಜಯೇಂದ್ರ ಮಾಡಿದ್ದಾರೆ.

ನಗರದ ಬಿಎಂಆರ್‍ಡಿ ಕಚೇರಿಯಲ್ಲಿ ಲಂಡನ್‍ನಿಂದ ಆಗಮಿಸಿದ್ದ ಸಂಚಾರ ತಜ್ಞರೊಂದಿಗೆ, ಬೆಂಗಳೂರಿನ ವಾಹನದಟ್ಟಣೆ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಬಿಪ್ಯಾಕ್ ಸಭೆ ನಡೆಯಿತು.ಇದರಲ್ಲಿ ವಿಜಯೇಂದ್ರ ಕೂಡ ಭಾಗಿಯಾಗಿದ್ದು ಭಾರೀ ಟೀಕೆಗೊಳಗಾಗಿತ್ತು.

ಇದರಿಂದ ಎಚ್ಚೆತ್ತ ವಿಜಯೇಂದ್ರ ಕೂಡಲೇ ಟ್ವೀಟ್ ಮಾಡಿ, ಬಿಪ್ಯಾಕ್ ಆಯೋಜಿಸಿದ್ದ ಚರ್ಚೆ ಕಾರ್ಯಕ್ರಮದಲ್ಲಿ ಮಿತ್ರರಾದ ಆರ್.ಕೆ. ಮಿಶ್ರಾ, ಯುನೈಟೆಡ್ ವೇ ಸಂಸ್ಥೆಯ ಪ್ರಶಾಂತ್ ಪ್ರಕಾಶ್ ಮೊದಲಾದವರೊಂದಿಗೆ ನಗರದ ಒಬ್ಬ ಸಾಮಾನ್ಯ ನಾಗರಿಕನಾಗಿ ಭಾಗವಹಿಸಿದ್ದೆ ಎಂದು ಸಮಜಾಯಿಷಿ ನೀಡಿದ್ದಾರೆ.

ಈ ಸಭೆಯಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ್, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಹಲವಾರು ಉನ್ನತ ಅಧಿಕಾರಿಗಳು, ಪರಿಣಿತರು, ತಜ್ಞರು, ಸಕ್ರಿಯ ನಾಗರಿಕರು ಪಾಲ್ಗೊಂಡಿದ್ದರು.

ಬೆಂಗಳೂರು ನಗರದ ವಾಹನದಟ್ಟಣೆ ಸಮಸ್ಯೆ ಎದುರಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆ ನಡೆಯಿತು ಎಂದು  ಹೇಳುವ ಮೂಲಕ ಸಭೆಯಲ್ಲಿ ಭಾಗಿಯಾಗಿರುವುದಕ್ಕೆ  ಸ್ಪಷ್ಟೀಕರಣ ನೀಡಿರುವ ವಿಜಯೇಂದ್ರ, ವಿವಾದಕ್ಕೆ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ