ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿದ್ದ ಮನವಿಯನ್ನು ತಿರಸ್ಕರಿಸಿರುವ ಸರ್ಕಾರ

ಬೆಂಗಳೂರು,ಅ.18- ಕಾವೇರಿ ನಿವಾಸ ತಮಗೆ ನೀಡುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿದ್ದ ಮನವಿಯನ್ನು ತಿರಸ್ಕರಿಸಿರುವ ಸರ್ಕಾರ ರೇಸ್ ಕೋರ್ಸ್ ರಸ್ತೆಯ ರೇಸ್ ವ್ಯೂ ಕಾಟೇಜ್-2ನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.

ಸಿದ್ದರಾಮಯ್ಯ ವಾಸವಿದ್ದ ಕಾವೇರಿ ನಿವಾಸವನ್ನು ನಿಯಮದಂತೆ  ಮುಖ್ಯಮಂತ್ರಿಗೇ ನೀಡಲು ನಿಶ್ಚಯಿಸಲಾಗಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ಕಾವೇರಿ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ನಂತರ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಯಾವುದೇ ಶಾಸನಬದ್ಧ ಹುದ್ದೆ ಇಲ್ಲದೇ ಇದ್ದರೂ ಸಹ ಕಾವೇರಿ ನಿವಾಸದಲ್ಲೇ  ತಂಗಿದ್ದರು.

ಬಿಎಸ್‍ವೈಗೆ ಒಲಿದ ಕಾವೇರಿ: ಸಿಎಂ ಯಡಿಯೂರಪ್ಪನವರಿಗೆ ಹಂಚಿಕೆಯಾಗಿದ್ದ ಬಿಎಸ್‍ವೈ ಅವರ ಲಕ್ಕಿ ಹೌಸ್  ಎಂದೇ ಹೇಳಲಾಗುತ್ತಿದ್ದ ರೇಸ್ ವ್ಯೂ ಕಾಟೇಜ್ -2ನ್ನು ಈಗ ಸಿದ್ದರಾಮಯ್ಯನವರಿಗೆ ನೀಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

ರೇಸ್‍ಕೋರ್ಸ್ ನಿವಾಸದ ಬದಲು ಸಿಎಂ ಗೃಹ ಕಚೇರಿ ಕೃಷ್ಣಾದ ಪಕ್ಕದಲ್ಲೇ ಇರುವ ಕಾವೇರಿ ನಿವಾಸದಲ್ಲಿ ವಾಸ್ತವ್ಯ ಹೂಡಿದರೆ, ಪೂರ್ಣಾವಧಿ ಮುಗಿಸಬಹುದು ಎಂಬ ಕಲ್ಪನೆಯ ಜೊತೆಗೆ ಗೃಹ ಕಚೇರಿಗೆ ತೆರಳಲು ಅನಗತ್ಯ ಸಂಚಾರ ದಟ್ಟಣೆ ತಪ್ಪಿಸಲು ಕಡಿವಾಣ ಹಾಕಬಹುದು  ಎಂಬ ಕಾರಣಕ್ಕಾಗಿ ಬಿಎಸ್‍ವೈ ಕಾವೇರಿಗಾಗಿ ಬೇಡಿಕೆ ಇರಿಸಿದ್ದರು. ಅದರಂತೆ ಕಾವೇರಿ ನಿವಾಸವನ್ನು ಸಿಎಂ ಬಿಎಎಸ್‍ವೈಗೆ ಹಂಚಿಕೆ ಮಾಡಲಾಗಿದೆ.

ಇದೀಗ ಕಾವೇರಿ ನಿವಾಸ ಬದಲಾವಣೆಗೆ ಮುಖ್ಯಮಂತ್ರಿ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಯಾವುದೇ ಕಾರಣಕ್ಕೂ ಕಾವೇರಿ ನಿವಾಸ ಬಿಡಲ್ಲ ಅದನ್ನು ಸಿದ್ದರಾಮಯ್ಯಗೆ ಹಂಚಿಕೆ ಮಾಡಲು ಪರಿಗಣಿಸುವ ಅಗತ್ಯವಿಲ್ಲ. ಅವರಿಗೆ ರೇಸ್‍ಕೋರ್ಸ್ ರಸ್ತೆ ನಿವಾಸ ಹಂಚಿಕೆ ಮಾಡಿ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸೂಚನೆ ನೀಡಲಾಗಿದೆ  ಎಂದು  ಹೇಳಲಾಗಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹೊರಡಿಸಿರುವ ಆದೇಶದಂತೆ, ಮುಖ್ಯಮಂತ್ರಿಗಳಿಗೆ ಹಂಚಿಕೆ ಮಾಡಲಾಗಿದ್ದ ರೇಸ್ ಕೋರ್ಸ್ ರಸ್ತೆಯ ರೇಸ್ ವ್ಯೂ ಕಾಟೇಜ್-2ನ್ನು ಸಿದ್ದರಾಮಯ್ಯನವರಿಗೆ ಹಂಚಿಕೆ ಮಾಡಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿಯೇ ಹಲವು ವರ್ಷಗಳಿಂದ ವಾಸವಿದ್ದಾರೆ.ಅವರಿಗೆ ರೇಸ್ ವ್ಯೂ ಕಾಟೇಜ್‍ಗೆ ಹೋಗಲು ಇಷ್ಟವಿಲ್ಲದ ಕಾರಣವೇ ಕಾವೇರಿ ನಿವಾಸಕ್ಕೆ ಬೇಡಿಕೆ ಇಟ್ಟಿದ್ದರು.

ಆದರೆ ಈಗ ರೇಸ್ ವ್ಯೂ ಕಾಟೇಜ್-2ನ್ನು  ನೀಡಲಾಗಿದೆ. ಇದನ್ನು ಅವರು ಸ್ವೀಕರಿಸುತ್ತಾರೆಯೋ ಅಥವಾ ಖಾಸಗಿ ನಿವಾಸದಲ್ಲಿ ವಾಸವಿರುತ್ತಾರೆಯೋ ನೋಡಬೇಕಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ