
ಬೆಂಗಳೂರು: ರವಿ ಬೆಳಗೆರೆ ಓರ್ವ ಖಡಕ್ ವ್ಯಕ್ತಿ. ಅವರು ಬರವಣಿಗೆ ಮೂಲಕ ಸಾಕಷ್ಟು ಜನರಿಗೆ ಸ್ಫೂರ್ತಿಯಾಗಿದ್ದಾರೆ. ಬೆಳ್ ಬೆಳಗ್ಗೆ ಬೆಳಗೆರೆ ಎನ್ನುವ ಕಾರ್ಯಕ್ರಮದ ಮೂಲಕ ಕಾಂಗ್ರೆಸ್ ಹಿರಿಯ ನಾಯಕ ಡಿಕೆ ಶಿವಕುಮಾರ್ ಸೇರಿ ಅನೇಕರ ವಿರುದ್ಧ ನೇರವಾಗಿ ಹರಿಹಾಯ್ದಿದ್ದಾರೆ. ಅವರ ಖಡಕ್ ಹೇಳಿಕೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಆದರೆ, ಅವರಲ್ಲೊಂದು ಮುಗ್ಧ ಮನಸ್ಸಿದೆ, ತಾಯಿಯನ್ನು ದೇವತೆಯಂತೆ ಕಾಣುವ ವ್ಯಕ್ತಿ ಅವರು ಎಂಬುದು ಅನಾವರಣಗೊಂಡಿದ್ದು ಬಿಗ್ ಬಾಸ್ ಮನೆಯಲ್ಲಿ.
ಹೌದು, ಬಿಗ್ ಬಾಸ್ ಮನೆಯಲ್ಲಿ ನಿನ್ನೆ ತಾಯಿ ಅಥವಾ ತಂದೆ ಬಗ್ಗೆ ಹೇಳಿಕೊಳ್ಳಬೇಕು ಎನ್ನುವ ಆದೇಶ ಬಂದಿತ್ತು. ಅಂತೆಯೇ ಎಲ್ಲರೂ ಒಂದು ಹಾಡನ್ನು ಹೇಳಿ ತಮ್ಮ ತಮ್ಮ ಪಾಲಕರ ಬಗ್ಗೆ ಹೇಳಿಕೊಂಡಿದ್ದರು. ಈ ವೇಳೆ ರವಿ ಬೆಳಗೆರೆ ಕೂಡ ತಮ್ಮ ತಾಯಿ ಬಗ್ಗೆ ಹೇಳಿಕೊಂಡಿದ್ದಾರೆ.
ರವಿ ಬೆಳಗೆರೆಗೆ ತಂದೆ ಇರಲಿಲ್ಲ. ಅವರು ತಾಯಿಯಲ್ಲೇ ತಂದೆ-ತಾಯಿಯನ್ನು ಕಂಡವರು. ಅವರು ತಾಯಿಯನ್ನು ದೇವರಂತೆ ಕಂಡವರು. ತಾಯಿಯ ಸೇವೆಯನ್ನು ಯಾವ ರೀತಿ ಮಾಡಿದ್ದೇನೆ, ತಾಯಿಯನ್ನು ಹೇಗೆ ಕಂಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ವೇಳೆ ಅವರು ತುಂಬಾನೇ ಭಾವುಕರಾದರು, ಅತ್ತರು. ರವಿ ಬೆಳಗೆರೆ ಅವರು ಅತ್ತಿದ್ದನ್ನು ನೋಡಿ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ನಿನ್ನೆಯ ಬಿಗ್ ಬಾಸ್ ಎಪಿಸೋಡ್ನಲ್ಲಿ ಬಹುತೇಕರು ಅತ್ತಿದ್ದಾರೆ. ಹೀಗಾಗಿ ನಿನ್ನೆಯ ಎಪಿಸೋಡ್ ತುಂಬಾನೇ ಭಾವುಕವಾಗಿತ್ತು. ವೀಕ್ಷಕರು ಕೂಡ ಕಣ್ಣೀರು ಹಾಕಿದ್ದರು.