ಬೆಂಗಳೂರು, ಅ.18- ಕಳಸಾ-ಬಂಡೂರಿ ಯೋಜನೆ ಶೀಘ್ರ ಅಧಿಸೂಚನೆಗೆ ಆಗ್ರಹಿಸಿ ರಾಜ್ಯಪಾಲರನ್ನು ಭೇಟಿ ಮಾಡಲು ಒತ್ತಾಯಿಸಿ ಕರ್ನಾಟಕ ರೈತ ಸೇನೆ ಅಹೋರಾತ್ರಿ ನಡೆಸುತ್ತಿರುವ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದೆ.
ಬಾಗಲಕೋಟೆ, ಧಾರವಾಡ, ಬೆಳಗಾವಿ, ಹಾವೇರಿ ಮತ್ತು ಗದಗ ಈ ಐದು ಜಿಲ್ಲೆ ಹಾಗೂ 13 ತಾಲೂಕುಗಳಿಂದ ಆಗಮಿಸಿರುವ ನೂರಾರು ರೈತರು ಸಂಗೊಳ್ಳಿರಾಯಣ್ಣ ರೈಲ್ವೇ ನಿಲ್ದಾಣದಲ್ಲೇ ಬೀಡು ಬಿಟ್ಟಿದ್ದು, ಮಹಾದಾಯಿ, ಕಳಸಾ-ಬಂಡೂರಿ ಯೋಜನೆಗೆ ಶೀಘ್ರ ಅಧಿಸೂಚನೆಗೆ ಆಗ್ರಹಿಸಿದ್ದಾರೆ.
ನಿನ್ನೆ ಹುಬ್ಬಳ್ಳಿಯಿಂದ ರೈಲಿನಲ್ಲಿ ಬಂದು ಪಾದಯಾತ್ರೆ ಮೂಲಕ ರಾಜಭವನದತ್ತ ಸಾಗಲು ನಿರ್ಧರಿಸಿದ್ದ ರೈತ ಹೋರಾಟಗಾರರನ್ನು ರೈಲ್ವೆ ನಿಲ್ದಾಣದಲ್ಲೇ ತಡೆಯಲಾಗಿತ್ತು.
ಆದರೆ, ಅಷ್ಟಕ್ಕೆ ವಾಪಾಸ್ ಹೋಗದ ಹೋರಾಟಗಾರರು ರಾತ್ರಿಯಿಡೀ ರೈಲು ನಿಲ್ದಾಣದಲ್ಲೇ ಕಳೆದಿದ್ದಾರೆ.ರಾತ್ರಿ ಪೂರ್ತಿ ನೆಲದ ಮೇಲೆ ಮಲಗಿದ್ದ ಪುರುಷರು, ಮಹಿಳೆಯರು, ಮಕ್ಕಳು ಚಳಿಯಲ್ಲಿ ನಡುಗುತ್ತಾ ಕುಳಿತಿದ್ದ ದೃಶ್ಯ ಕಂಡುಬಂದಿತು.
ರೈಲು ನಿಲ್ದಾಣದಲ್ಲಿ ಅಹೋರಾತ್ರಿ ಧರಣಿ ನಡೆಸಿರುವ ರೈತ ಹೋರಾಟಗಾರರು ಇಂದು ಕೂಡ ತಮ್ಮ ಹೋರಾಟ ಮುಂದುವರೆಸಿ, ರಾಜ್ಯಪಾಲರ ಭೇಟಿಗೆ ಪಟ್ಟು ಹಿಡಿದು ಕುಳಿತಿದ್ದಾರೆ. ಈವರೆಗೆ ಯಾವುದೇ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಹೋರಾಟಗಾರರನ್ನು ಭೇಟಿ ಮಾಡಿ ಮಾತುಕತೆ ನಡೆಸಿಲ್ಲ ಎಂದು ತಿಳಿದು ಬಂದಿದೆ.
ಈ ಕುರಿತು ಮಾತನಾಡಿರುವ ಕರ್ನಾಟಕ ರೈತ ಸೇನೆ ಅಧ್ಯಕ್ಷ ವಿರೇಶ ಸೊರಬದ ಅವರು, ಯೋಜನೆ ಅನುಷ್ಠಾನಕ್ಕೆ ಶೀಘ್ರ ಅಧಿಸೂಚನೆ ಹೊರಡಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ.ಈ ಬಗ್ಗೆ ರಾಜ್ಯಪಾಲರನ್ನು ಭೇಟಿಯಾಗುತ್ತೇವೆ ಎಂಬ ಆಶಾಭಾವನೆ ಹೊಂದಿದ್ದೇವೆ. ಒಂದು ವೇಳೆ ಭೇಟಿಯಾಗದಿದ್ದರೆ ಇದೇ ಸ್ಥಳದಲ್ಲಿ ಧರಣಿ ಮುಂದುವರೆಸುತ್ತೇವೆ. ಮಳೆ, ಚಳಿಗೆ ನಾವು ಹೆದರುವುದಿಲ್ಲ. ನಮಗೆ ನೀರು ಬೇಕು.ಕೇಂದ್ರ ಸರ್ಕಾರ ಕೂಡಲೇ ಅಧಿಸೂಚನೆ ಹೊರಡಿಸಬೇಕು.ರಾಜ್ಯಪಾಲರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುತ್ತೇವೆ. ನಮ್ಮ ಸಮಸ್ಯೆಗಳನ್ನು ತಿಳಿಸಲು ಇಲ್ಲಿಗೆ ಬಂದಿದ್ದೇವೆ. ಯಾವುದೇ ತ್ಯಾಗಕ್ಕೂ ಸಿದ್ಧ. ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು.ಕಳಸಾ-ಬಂಡೂರಿ ಯೋಜನೆ ಅಧಿಸೂಚನೆ ಜೊತೆ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ಉತ್ತರ ಕರ್ನಾಟಕದಲ್ಲಿ ನೆರೆ ಸಂತ್ರಸ್ತರಿಗೆ 15 ಲಕ್ಷ ರೂ.ವೆಚ್ಚದಲ್ಲಿ ಮನೆ ಕಟ್ಟಿಕೊಡಬೇಕು, ಸಂತ್ರಸ್ತರ ಮಕ್ಕಳಿಗೆ ಉಚಿತ ಶಿಕ್ಷಣದ ವ್ಯವಸ್ಥೆ ಮಾಡಬೇಕು.ಪ್ರತಿ ಹೆಕ್ಟೇರ್‍ಗೆ 2 ಲಕ್ಷ ರೂ.ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಮಹಾರಾಷ್ಟ್ರಕ್ಕೆ ನೀರು ಬಿಡುವುದಾಗಿ ಹೇಳಿದ್ದಾರೆ.ಕರ್ನಾಟಕಕ್ಕೆ ನೀರಿಲ್ಲ. ಈ ಸಂದರ್ಭದಲ್ಲಿ ಮಹಾರಾಷ್ಟ್ರಕ್ಕೆ ನೀರು ಬಿಡುತ್ತೇವೆ ಎಂದು ಹೇಳಿರುವುದು ಎಷ್ಟು ಸಮಂಜಸ. ಅವರು ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ಮಹಾರಾಷ್ಟ್ರ ಮುಖ್ಯಮಂತ್ರಿಯೋ ಎಂದು ಸೊರಬದ ಆಕ್ರೋಶ ವ್ಯಕ್ತಪಡಿಸಿದರು.