ದೀಪಾವಳಿ ಸಂದರ್ಭದಲ್ಲೇ ಉಗ್ರರ ದಾಳಿಯ ಆತಂಕ

ನವದೆಹಲಿ, ಅ.17: ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಡಗರ, ಸಂಭ್ರಮದ ಮೇಲೆ ಭಯೋತ್ಪಾದಕರ ಕರಾಳ ಛಾಯೆ ಆವರಿಸುವ ಆತಂಕ ಎದುರಾಗಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಉತ್ತರ ಪ್ರದೇಶದ ಗೋರಖ್‍ಪುರ್‍ನಲ್ಲಿ ಐವರು ಉಗ್ರಗಾಮಿಗಳು ನುಸುಳಿರುವುದು ದೃಢಪಟ್ಟಿದ್ದು, ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ದೀಪಾವಳಿ ಸಂದರ್ಭದಲ್ಲೇ ಭಾರೀ ಆಸ್ಫೋಟನೆಗಳ ಮೂಲಕ ರಕ್ತಪಾತವೆಸಗಲು ಸಜ್ಜಾಗಿದ್ದಾರೆ ಎಂಬ ಆಘಾತಕರ ಮಾಹಿತಿಯನ್ನು ಗುಪ್ತಚರ ಮೂಲಗಳು ತಿಳಿಸಿವೆ.
ಪ್ರವಾಸಿಗರ ಸೋಗಿನಲ್ಲಿ ನುಸುಳಿರುವ ಪಾಕಿಸ್ತಾನಿ ಬೆಂಬಲಿತ ಉಗ್ರಗಾಮಿಗಳು ಗೋರಖ್‍ಪುರ್‍ನಿಂದ ದೆಹಲಿ ಪ್ರವೇಶಿಸಿರುವ ಸಾಧ್ಯತೆಯಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ವ್ಯಾಪಕ ಶೋಧ ನಡೆಸಲಾಗುತ್ತಿದೆ.
ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳು, ಸಿಡಿಮದ್ದುಗಳು, ಬಾಣ ಬಿರಿಸುಗಳ ಆರ್ಭಟಗಳ ನಡುವೆ ಸ್ಫೋಟಕಗಳನ್ನು ಆಸ್ಫೋಟಿಸಿ ಸಾವು-ನೋವು ಉಂಟು ಮಾಡುವುದು ಉಗ್ರರ ಗುರಿಯಾಗಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ, ನವದೆಹಲಿ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಪ್ರಮುಖ ನಗರಗಳಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.
ಪ್ರತಿಬಾರಿ ದೀಪಾವಳಿ ಸಂದರ್ಭದಲ್ಲಿ ಉಗ್ರರ ದಾಳಿಯ ಆತಂಕ ಸಾಮಾನ್ಯ. ಆದರೆ ಈ ಸಲ ಗುಪ್ತಚರ ದಳ ನೀಡಿರುವ ಎಚ್ಚರಿಕೆಯನ್ನು ಲಘುವಾಗಿ ಪರಿಗಣಿಸುವಂತಿಲ್ಲ, ಏಕೆಂದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ಧತಿ ನಂತರ ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನ ಕೃಪಾಪೋಷಿತ ಭಯೋತ್ಪಾದಕರು ಹವಣಿಸುತ್ತಿದ್ದು ನಾನಾ ಕುತಂತ್ರ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಹಿಂದೆಂದಿಗಿಂತಲೂ ಭದ್ರತಾ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಜನನಿಬಿಡ ಸ್ಥಳಗಳು, ದೇವಸ್ಥಾನ, ಮಠ-ಮಂದಿರ, ಪ್ರವಾಸಿತಾಣಗಳು, ಶಾಪಿಂಗ್ ಮಾಲ್‍ಗಳು, ರೈಲು ಮತ್ತು ಬಸ್ ನಿಲ್ದಾಣಗಳು ಹಾಗೂ ಸೇನೆ ನೆಲೆಗಳಿಗೆ ಬಿಗಿ ಪಹರೆ ಒದಗಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ