ಕುಣಿಗಲ್,ಅ.18- ಹಿಂದಿನ ಸಮ್ಮಿಶ್ರ ಸರ್ಕಾರ ಐದು ವರ್ಷಗಳಿಗೆ ಆಗುವಷ್ಟು ಯೋಜನೆಯನ್ನು ರೂಪಿಸಿದ್ದರೂ ಆ ಯೋಜನೆಗಳಿಗೆ ಹಣವಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಲೋಕೋಪಯೋಗಿ ಇಲಾಖೆ ಮತ್ತು ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಇಂದು ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಸಂತ್ರಸ್ತರ ನೆರವಿಗಾಗಿ ಹೆಚ್ಚಿನ ಹಣವನ್ನು ಉಪಯೋಗಿಸಲಾಗಿದೆ. ಜನವರಿ, ಫೆಬ್ರವರಿ ತಿಂಗಳಲ್ಲಿ ಹಣದ ಪರಿಸ್ಥಿತಿ ಸುಧಾರಿಸಲಿದೆ. ಆದ್ದರಿಂದ ಶಾಸಕರು ಅನುದಾನದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ .ಯಾವುದೇ ಶಾಸಕರಿಗೂ ಅನುದಾನ ನೀಡುವಲ್ಲಿ ತಾರತಮ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಶಾಸಕರ ಅನುದಾನವನ್ನು ವಾಪಸ್ ಪಡೆದಿಲ್ಲ. ಈ ಕುರಿತ ಆರೋಪಗಳೆಲ್ಲವೂ ಸುಳ್ಳು ಎಂದು ಹೇಳಿದರು.
ಯಡಿಯೂರು ಸಿದ್ದಲಿಂಗೇಶ್ವರ ದೇವಾಲಯದ ಅಭಿವೃದ್ದಿಗೆ ಕಂಕಣಬದ್ಧವಾಗಿದ್ದೇನೆ. 2008ರಲ್ಲಿ ಸುಮಾರು 80 ಕೋಟಿ ಅನುದಾನ ಮಂಜೂರು ಮಾಡಿದ್ದೆ. ಈಗಲೂ 40 ಕೋಟಿ ರೂಪಾಯಿಗಳನ್ನು ದೇವಾಲಯದ ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದೇನೆ. ಹಂತ ಹಂತವಾಗಿ ಮೂಲ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಶ್ರೀ ಕ್ಷೇತ್ರವನ್ನು ರಾಜ್ಯದಲ್ಲೇ ಅತ್ಯುನ್ನತ ಶ್ರೇಣಿಯ ದೇವಾಲಯವನ್ನಾಗಿ ಮಾಡುವುದು ನನ್ನ ಜವಾಬ್ದಾರಿ.ಧಾರ್ಮಿಕ ದತ್ತಿ ಇಲಾಖೆ ಮತ್ತು ದೇವಾಲಯ ಟ್ರಸ್ಟ್ ಹಾಗೂ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ದೇವಾಲಯದ ಆಡಳಿತ ಮಂಡಳಿ ಯಾವುದೇ ಲೋಪದೋಷ ಎಸಗಿದರೆ ಅಂಥವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ನೇರಹೊಣೆ ಎಂದು ಎಚ್ಚರಿಸಿದರು.
ಕುಣಿಗಲ್ ಕ್ಷೇತ್ರದ ಅಭಿವೃದ್ಧಿಯಲ್ಲೂ ಕೂಡ ರಾಜಕೀಯ ಮಾಡದೆ ಪಕ್ಷಾತೀತವಾಗಿ ಸಹಕಾರ ನೀಡುತ್ತೇನೆ. ಈ ಬಗ್ಗೆ ಸ್ಥಳೀಯ ಶಾಸಕರು ಅನುಮಾನಪಡುವ ಅಗತ್ಯವಿಲ್ಲ ಎಂದು ಹೇಳಿದರು.
ನಮ್ಮ ಸರ್ಕಾರ ಮೂರುವರೆವರ್ಷ ಅಧಿಕಾರ ಪೂರ್ಣಗೊಳಿಸಲಿದೆ ರಾಜ್ಯದ ಎಲ್ಲ ವರ್ಗಗಳಿಗೂ ತಲುಪಬೇಕಾದ ಯೋಜನೆಗಳನ್ನು ಕಲ್ಪಿಸಿಕೊಡುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದರು.
ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ನಮ್ಮ ಕುಲದೇವರಾಗಿದ್ದು, ಅಧಿಕಾರ ಬಂದಾಗ ಮಾತ್ರ ನಾನು ದೇವಾಲಯಕ್ಕೆ ಭೇಟಿ ನೀಡುವುದಿಲ್ಲ. ಒಬ್ಬ ಭಕ್ತನಾಗಿ ಯಾವಾಗಲೂ ಭೇಟಿ ನೀಡಿ ಪೂಜೆ ಸಲ್ಲಿಸುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ.ರಂಗನಾಥ್, ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಮಾಜಿ ಸಚಿವ ಸೊಗಡು ಶಿವಣ್ಣ, ಸಂಸದ ಜಿ.ಎಸ್.ಬಸವರಾಜ್ ಸೇರಿದಂತೆ ಮುಖಂಡರು, ಗದುಗಿನ ತೋಂಟದ ಶ್ರೀ ಸಿದ್ದರಾಮ ಮಹಾಸ್ವಾಮೀಜಿ, ಬಾಳೆಹೊನ್ನೂರು ಶಾಖಾ ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಕೃಷ್ಣಕುಮಾರ್ ಮುಂತಾದವರು ಇದ್ದರು.