ಮೈಸೂರು: ನಾಯಕರಿಬ್ಬರು ಆಣೆ ಪ್ರಮಾಣ ಸುದ್ದಿ ರಾಜ್ಯಾ ರಾಜಕೀಯದಲ್ಲಿ ದೊಡ್ಡ ಮಟ್ಟದ ಗದ್ದಲವನ್ನೇ ಎಬ್ಬಿಸಿತ್ತು. ಕೊನೆಗೆ ಹೇಳಿದಂತೆಯೇ ಇಬ್ಬರೂ ನಾಯಕರು ಇಂದು ಬೆಳಗ್ಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದಾರೆ. ಆದರೆ, ಕೊನೆ ಕ್ಷಣದಲ್ಲಿ ಮಾತಿನವರೆಸೆ ಬದಲಿಸಿದ ಹೆಚ್. ವಿಶ್ವನಾಥ್ ತಾನು ಆಣೆ ಮಾಡಲ್ಲ ಎಂದದ್ದು ಇದೀಗ ಗೊಂದಲಕ್ಕೆ ಕಾರಣವಾಗಿದೆ.
ಇಷ್ಟು ದಿನ ವಿಧಾನಸಭೆ, ಸಾರ್ವಜನಿಕ ಸಭೆಗಳು ಮತ್ತು ಪತ್ರಿಕಾಗೋಷ್ಠಿಗೆ ಮಾತ್ರ ಸೀಮಿತವಾಗಿದ್ದ ಶಾಸಕ ಸಾ.ರಾ. ಮಹೇಶ್ ಹಾಗೂ ಅನರ್ಹ ಶಾಸಕ ಹೆಚ್. ವಿಶ್ವನಾಥ್ ನಡುವಿನ ವ್ಯಯಕ್ತಿಕ ಕೆಸರೆರಚಾಟಕ್ಕೆ ಮೈಸೂರಿನ ಇತಿಹಾಸ ಪ್ರಸಿದ್ಧ ಚಾಮುಂಡಿ ದೇವಾಲಯವೂ ಸಹ ಸಾಕ್ಷಿಯಾದ ಘಟನೆ ಇಂದು ನಡೆದಿದೆ.
ಕಳೆದ ಜೂನ್ ತಿಂಗಳಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡೆದಿದ್ದ ಹುಣಸೂರು ಶಾಸಕ ಹೆಚ್. ವಿಶ್ವನಾಥ್ ಒಳಗೊಂಡ 17 ಜನ ಕಾಂಗ್ರೆಸ್-ಜೆಡಿಎಸ್ ಶಾಸಕರು ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಮುಂಬೈಗೆ ಹಾರಿದ್ದರು. ಪರಿಣಾಮ ಸಮ್ಮಿಶ್ರ ಸರ್ಕಾರವೇ ಉರುಳಿತ್ತು. ಈ ವೇಳೆ ಅಂದಿನ ಸಿಎಂ ಕುಮಾರಸ್ವಾಮಿ ಬಹುಮತ ಸಾಬೀತುಪಡಿಸುವ ಚರ್ಚೆಯ ವೇಳೆ ಮಾತನಾಡಿದ್ದ ಮಾಜಿ ಸಚಿವ ಸಾ.ರಾ. ಮಹೇಶ್ “ಹೆಚ್. ವಿಶ್ವನಾಥ್ 25 ಕೋಟಿ ಹಣಕ್ಕೆ ತಮ್ಮನ್ನು ಮಾರಿಕೊಂಡಿದ್ದಾರೆ” ಎಂದು ಆರೋಪ ಹೊರಿಸಿದ್ದರು.
ಸಾ.ರಾ. ಮಹೇಶ್ ಅವರ ಈ ಆರೋಪ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಲ್ಲದೆ ಕಳೆದ ಮೂರು ತಿಂಗಳಿನಿಂದ ಈ ಇಬ್ಬರೂ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದರು. ಆದರೆ, ಮೊನ್ನೆ ಪತ್ರಿಕಾಗೋಷ್ಠಿ ನಡೆಸಿ ಸಾ.ರಾ. ಮಹೇಶ್ ಗೆ ಸವಾಲೆಸೆದಿದ್ದ ವಿಶ್ವನಾಥ್, “ನಾನು ಮಾರಿಕೊಂಡಿದ್ದು ಸತ್ಯವೇ ಆಗಿದ್ದರೆ, ತಾಯಿ ಚಾಮುಂಡಿ ಪಾದದಲ್ಲಿ ಬಂದು ಆಣೆ ಪ್ರಮಾಣ ಮಾಡಿ” ಎಂದಿದ್ದರು.
ಮರುದಿನವೇ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸವಾಲನ್ನು ಸ್ವೀಕರಿಸಿದ್ದ ಸಾರಾ ಮಹೇಶ್ ಗುರುವಾರ ಬೆಳಗ್ಗೆ 9 ಗಂಟೆಗೆ ನಾನೂ ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ತಾಯಿಯ ಪಾದದಲ್ಲಿ ಆಣೆ ಪ್ರಮಾಣ ಮಾಡ್ತೀನಿ” ಎಂದು ತಿಳಿಸಿದ್ದರು.
ಪರಿಣಾಮ ನಾಯಕರಿಬ್ಬರು ಆಣೆ ಪ್ರಮಾಣ ಸುದ್ದಿ ರಾಜ್ಯಾ ರಾಜಕೀಯದಲ್ಲಿ ದೊಡ್ಡ ಮಟ್ಟದ ಗದ್ದಲವನ್ನೇ ಎಬ್ಬಿಸಿತ್ತು. ಕೊನೆಗೆ ಹೇಳಿದಂತೆಯೇ ಇಬ್ಬರೂ ನಾಯಕರು ಇಂದು ಬೆಳಗ್ಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದಾರೆ. ಆದರೆ, ಕೊನೆ ಕ್ಷಣದಲ್ಲಿ ಮಾತಿನವರೆಸೆ ಬದಲಿಸಿದ ಹೆಚ್. ವಿಶ್ವನಾಥ್ ತಾನು ಆಣೆ ಮಾಡಲ್ಲ ಎಂದದ್ದು ಇದೀಗ ಗೊಂದಲಕ್ಕೆ ಕಾರಣವಾಗಿದೆ. ಅಲ್ಲದೆ, ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ವರಸೆ ಬದಲಿಸಿದ ಹೆಚ್. ವಿಶ್ವನಾಥ್, ಮಾಧ್ಯಮದ ಮೇಲೂ ಗರಂ
ನಾನು ನನ್ನನ್ನು ಮಾರಿಕೊಂಡಿಲ್ಲ. ತಾಯಿ ಚಾಮುಂಡಿ ತಾಯಿಯ ಮೇಲೆ ಆಣೆ ಮಾಡ್ತೀನಿ ಎಂದು ಹೇಳುತ್ತಿದ್ದ ಹೆಚ್. ವಿಶ್ವನಾಥ್, ಇಂದು ಚಾಮುಂಡಿ ದೇವಾಲಯಕ್ಕೇನೋ ಬಂದಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ನಾನು ಆಣೆ ಮಾಡಲ್ಲ ಎಂದು ನುಣುಚಿಕೊಳ್ಳಲು ಪ್ರಯತ್ನಿಸಿದರು.
ಈ ಕುರಿತು ಮಾಧ್ಯಮದ ಎದುರು ಪ್ರತಿಕ್ರಿಯೆ ನೀಡಿದ ಅವರು, “ನಾನು ತಾಯಿಯ ಪಾದಕ್ಕೆ ಆಣೆ ಪ್ರಮಾಣ ಮಾಡಲ್ಲ. ನಾನು ನನ್ನನ್ನು ಮಾರಿಕೊಂಡಿಲ್ಲ. ಸಾ.ರಾ. ಮಹೇಶ್ ನನ್ನ ಮೇಲೆ ಮಾಡಿರುವ ಆರೋಪ ಸತ್ಯವಾದರೆ ನನ್ನನ್ನು ಕೊಂಡುಕೊಂಡವನನ್ನೂ ಕರೆದುಕೊಂಡು ಬರಲಿ. ಹಾಗೆ ಕರೆದುಕೊಂಡು ಬರದಿದ್ದರೆ ಅವರು ಮಾಡಿದ ಆರೋಪ ಸುಳ್ಳು ಎಂದು ಸಾಬೀತಾಗುತ್ತದೆ. ಆದರೆ, ನಾನು ಮಾತ್ರ ಆಣೆ ಮಾಡಲ್ಲ” ಎಂದು ಪಟ್ಟು ಹಿಡಿದು ನಿಂತಿದ್ದರು. ಅಲ್ಲದೆ ಸಾರಾ ಮಹೇಶ್ ಒಬ್ಬ ಹೇಡಿ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದರು.
ಈ ನಡುವೆ ನೀವು ಹಣ ಪಡೆಯದಿದ್ದರೆ ತಾಯಿ ಪಾದದಲ್ಲಿ ಆಣೆ ಮಾಡಬಹುದಲ್ಲವೇ? ಎಂಬ ಮಾಧ್ಯಮಗಳ ಪ್ರಶ್ನೆಗೆ ಗರಂ ಆದ ವಿಶ್ವನಾಥ್ ಮಾಧ್ಯಮದವರ ದರ್ಪ ಪ್ರದರ್ಶಿಸಿದ ಘಟನೆಗೆ ಇಂದಿನ ಆಣೆ ಪ್ರಮಾಣ ಪ್ರಸಂಗ ಸಾಕ್ಷಿಯಾಗಿದೆ.
ಹಳ್ಳಿ ಹಕ್ಕಿಗಾಗಿ ದೇವಾಲಯದ ಒಳಗೆ ಕಾದು ಕುಳಿತಿರುವ ಸಾ.ರಾ. ಮಹೇಶ್
ಇನ್ನೂ ದೇಗುಲಕ್ಕೆ ಆಗಮಿಸುತ್ತದ್ದತೆ ತಾಯಿ ಚಾಮುಂಡಿಯ ದರ್ಶನ ಪಡೆದ ಸಾ.ರಾ. ಮಹೇಶ್ ಅನರ್ಹ ಶಾಸಕ ಹೆಚ್. ವಿಶ್ವನಾಥ್ 25 ಕೋಟಿ ಹಣಕ್ಕೆ ತನನ್ನು ಮಾರಿಕೊಂಡಿರುವುದು ಸತ್ಯ ಎಂದು ದೇವಿಯ ಮುಂದೆ ಪ್ರಮಾಣ ಮಾಡಿದ್ದಾರೆ. ಅಲ್ಲದೆ, ಹೆಚ್. ವಿಶ್ವನಾಥ್ ಅವರು ಒಳಗೆ ಬಂದು ಪ್ರಮಾಣ ಮಾಡಲಿ ಎಂದು ಕಾದು ಕುಳಿತಿದ್ದಾರೆ.
ಆದರೆ, ಹೆಚ್. ವಿಶ್ವನಾಥ್ ‘ನನ್ನನ್ನು 25 ಕೋಟಿ ಕೊಟ್ಟು ಕೊಂಡು ಕೊಂಡವನು ಚಾಮುಂಡಿ ಬೆಟ್ಟಕ್ಕೆ ಬರುವ ತನಕ ನಾನು ಆಣೆ ಪ್ರಮಾಣ ಮಾಡಲ್ಲ’ ಎಂದು ಪಟ್ಟು ಹಿಡಿದಿದ್ದಾರೆ.
ಒಟ್ಟಾರೆ ಈ ಇಬ್ಬರೂ ನಾಯಕರ ಕಿತ್ತಾಟದಿಂದಾಗಿ ರಾಜ್ಯದ ಪ್ರಮುಖ ಪ್ರವಾಸಿ ತಾಣವಾದ ಚಾಮುಂಡಿ ಬೆಟ್ಟದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಹರಸಾಹಸ ಪಡಬೇಕಾದ ಸ್ಥಿತಿ ಎದುರಾಗಿದೆ. ಅಲ್ಲದೆ, ಈ ಪ್ರಸಂಗದಿಂದಾಗಿ ಬೆಟ್ಟಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ಪ್ರವೇಶ ನಿರ್ಬಂಧಿಸಿರುವ ಕಾರಣ ಸಾರ್ವಜನಿಕರಿಗೂ ತೊಂದರೆ ಎದುರಾಗಿದೆ.