ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ಶಿರೋಳ ಗ್ರಾಮದಲ್ಲಿನ ದಲಿತ ಕುಟುಂಬದ ತಂದೆ-ಮಗನ ಜೋಡಿ ಕೊಲೆ ಪ್ರಕರಣ ಸಂಬಂಧ ಬೀದಿಗಿಳಿದು ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಸುತ್ತಿವೆ.
ಶವವನ್ನು ಮನೆಯವರಿಗೆ ಹಸ್ತಾಂತರ ಮಾಡದ ಪೊಲೀಸರು ಮತ್ತು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕ್ಷೇತ್ರದಲ್ಲಿ ಈ ಜೋಡಿ ಕೊಲೆ ನಡೆದಿದ್ದು, ಕಾರಜೋಳ ಅವರ ವಿರುದ್ಧ ದಿಕ್ಕಾರ ಕೂಗಿ ರಾಜೀನಾಮೆಗೆ ಆಗ್ರಹಿಸಿ ಈ ಪ್ರತಿಭಟನೆ ನಡೆಯುತ್ತಿದೆ.
ಶಿರೋಳ ಗ್ರಾಮದಲ್ಲಿ ತಳಗೇರಿ ಕುಟುಂಬದ ತಂದೆ ಮಳಿಯಪ್ಪ ಮತ್ತು ಮಗ ವಿಠ್ಠಲ ಕೊಲೆಯಾಗಿದ್ದರು.
ಮಂಗಳವಾರ ಮಧ್ಯಾಹ್ನ ಸ್ಮಶಾನದ ಬಳಿ ತೆರಳುತ್ತಿದ್ದವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಶವಪರೀಕ್ಷೆಗಾಗಿ ಪೊಲೀಸರು ಶವಗಳನ್ನುಬಾಗಲಕೋಟೆ ಜಿಲ್ಲಾಸ್ಪತ್ರೆ ತಂದಿದ್ದರು.
ಕೊಲೆಯನ್ನು ಖಂಡಿಸಿ ಜಿಲ್ಲಾಡಳಿತ ಭವನದ ಮುಂದೆ ಶವಗಳನಿಟ್ಟು ಪ್ರತಿಭಟನೆ ಮಾಡಲು ಸಂಬಂಧಿಕರು ಮತ್ತು ದಲಿತ ಸಂಘಟನೆಗಳು ನಿರ್ಧರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಶವಗಳನ್ನು ಬೇರೆಡಗೆ ಸ್ಥಳಾಂತರಿಸಿದ್ದರು.
ವಿಚಾರ ತಿಳಿದು ರೊಚ್ಚಿಗೆದ್ದಿರುವ ಮೃತರ ಸಂಬಂಧಿಕರು ಮತ್ತು ದಲಿತ ಸಂಘಟನೆಗಳು, ಬಾಗಲಕೋಟೆ ಜಿಲ್ಲಾಸ್ಪತ್ರೆ ಎದುರು ರಸ್ತೆ ತಡೆ ನಡೆಸಿ ಬೊಬ್ಬೆ ಇಟ್ಟು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ.
ಜೊತೆಗೆ ಪೊಲೀಸರ ಕ್ರಮ ಖಂಡಿಸಿ, ನವನಗರ ಪೊಲೀಸ್ ಠಾಣೆಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದಾರೆ. ‘ನಮಗೆ ಶವ ತಂದುಕೊಡಿ, ಶವಗಳನ್ನು ಕಳ್ಳತನ ಮಾಡಿದ್ದೀರಿ. ನಮಗೆ ವಿಚಾರ ತಿಳಿಸದೆ ಹೇಗೆ ಶವಗಳನ್ನು ಸ್ಥಳಾಂತರ ಮಾಡಿದ್ದೀರಿ?’ ಎಂದು ಮಹಿಳೆಯರು ಬೊಬ್ಬೆ ಹೊಡೆದು ಠಾಣೆ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೋಲಿಸ್ ಬಂದೂಬಸ್ತ್ ಏರ್ಪಡಿಸಲಾಗಿದೆ.