ನವದೆಹಲಿ,ಅ.16- ಬಿಜೆಪಿ ಸರ್ಕಾರದ ವೈಫಲ್ಯಗಳ ವಿರುದ್ದ ತೀವ್ರ ಹೋರಾಟ ನಡೆಸಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ಗೆಲ್ಲಿಸಿ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಸೂಚನೆ ನೀಡಿದ್ದಾರೆ.
ನವದೆಹಲಿಯಲ್ಲಿಂದು ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಸುಮಾರು 25 ನಿಮಿಷಗಳ ಕಾಲ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಮಹತ್ವದ ಸಮಾಲೋಚನೆ ನಡೆದಿದೆ. ಮುಂದಿನ ಎರಡು ತಿಂಗಳಲ್ಲಿ ಎದುರಾಗುವ ಉಪಚುನಾವಣೆಗಳ ಸಂಪೂರ್ಣ ಹೊಣೆಗಾರಿಕೆಯನ್ನು ಸೋನಿಯಾ ಅವರು ಸಿದ್ದರಾಮಯ್ಯನವರ ಹೆಗಲಿಗೆ ಹೊರಸಿದ್ದಾರೆ. ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಂಡು ಬನ್ನಿ ಎಂದು ಸೂಚನೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಕೆಪಿಸಿಸಿ ಪದಾಧಿಕಾರಿಗಳ ನೇಮಕಾತಿಯ ಬಗ್ಗೆಯೂ ಚರ್ಚೆ ನಡೆದಿದೆ. ಪಕ್ಷ ಸಂಘಟನೆಗೆ ಪದಾಧಿಕಾರಿಗಳ ನೇಮಕಾತಿ ಜರೂರಾಗಿ ಆಗಬೇಕಿದೆ ಎಂದು ಸಿದ್ದರಾಮಯ್ಯನವರು ಮನವಿ ಮಾಡಿದಾಗ, ಕೆಪಿಸಿಸಿಯಿಂದ ಪ್ರಸ್ತಾವನೆ ಬಂದರೆ ಅದಕ್ಕೆ ವಿಳಂಬ ಮಾಡದೆ ಅಂಗೀಕಾರ ನೀಡುವುದಾಗಿ ಸೋನಿಯಾ ಗಾಂಧಿ ಭರವಸೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ, ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ನಾಯಕರನ್ನು ಬೆದರಿಸುವ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿ ಜೈಲಿನಲ್ಲಿಡಲಾಗಿದೆ. ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಮನೆ ಮೇಲೆ ಆದಾಯ ತೆರಿಗೆ ದಾಳಿಯಾಗಿದೆ. ಕಾಂಗ್ರೆಸ್ ನಾಯಕ ಕೆ.ಎನ್.ರಾಜಣ್ಣ ಅವರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ. ಈ ರೀತಿ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.
ಇದಕ್ಕೆಲ್ಲ ಮುಂದಿನ ದಿನಗಳಲ್ಲಿ ಜನರೇ ಉತ್ತರ ಕೊಡುತ್ತಾರೆ. ಸಂಕಷ್ಟದಲ್ಲಿರುವ ನಾಯಕರ ಹಿಂದೆ ಕಾಂಗ್ರೆಸ್ ಪಕ್ಷವಿದೆ. ಯಾರೂ ಧೈರ್ಯ ಕಳೆದುಕೊಳ್ಳಬೇಡಿ ಎಂದು , ಸೋನಿಯಾ ಗಾಂಧಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಪ್ರವಾಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರದ ನಿಷ್ಕ್ರಿಯತೆ, ಕೇಂದ್ರ ಸರ್ಕಾರ ಅನುದಾನ ನೀಡದೇ ಇರುವುದು ಸೇರಿದಂತೆ ಹಲವಾರು ವಿಷಯಗಳನ್ನ ಸಿದ್ದರಾಮಯ್ಯ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ.
ಇದೇ ಸಂದರ್ಭದಲ್ಲಿ ತಮ್ಮನ್ನು ವಿಪಕ್ಷ ನಾಯಕನ್ನಾಗಿ ನೇಮಕ ಮಾಡಿದ್ದಕ್ಕಾಗಿ ಸಿದ್ದರಾಮಯ್ಯನವರು ಸೋನಿಯಾ ಗಾಂಧಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.