ಬೆಳಗಾವಿ,ಅ.16- ಡಿಸೆಂಬರ್ 5ರಂದು ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಮಗೆ ಮಹತ್ವದ್ದಾಗಿದೆ. ಪ್ರತಿ ಕ್ಷೇತ್ರಗಳನ್ನು ಗೆಲ್ಲಲು ಒಬ್ಬೊಬ್ಬ ಸಚಿವರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತಿಂಗಳ ಅಂತ್ಯಕ್ಕೆ ಆಯಾ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ಕೊಡಲಿದ್ದೇವೆ. ನಮಗೆ ಈ ಚುನಾವಣೆ ಅತ್ಯಂತ ಪ್ರತಿಷ್ಠೆಯಾಗಿರುವುದರಿಂದ 15 ಕ್ಷೇತ್ರಗಳನ್ನು ಗೆಲ್ಲಲೇಬೇಕು.
ಒಂದೊಂದು ಕ್ಷೇತ್ರಕ್ಕೂ ಒಬ್ಬೊಬ್ಬ ಸಚಿವರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡುತ್ತೇವೆ. ಎಲ್ಲ ಕಡೆಯೂ ಬಿಜೆಪಿ ಗೆಲ್ಲಲಿದೆ. ಸುಭದ್ರ ಸರ್ಕಾರಕ್ಕಾಗಿ ಮತದಾರರು ನಮ್ಮ ಪಕ್ಷವನ್ನು ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಈಗಾಗಲೇ ಯಾವ ಯಾವ ಕ್ಷೇತ್ರಕ್ಕೆ ಯಾರನ್ನು ನೇಮಕ ಮಾಡಬೇಕು ಎಂಬುದರ ಬಗ್ಗೆ ಪಕ್ಷದ ವಲಯದಲ್ಲಿ ಚರ್ಚೆ ನಡೆಸಲಾಗಿದೆ. ಕಾರ್ಯಕರ್ತರು ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸ ಮಾಡುತ್ತಿದ್ದಾರೆ. ನನಗೆ 100ಕ್ಕೆ ನೂರರಷ್ಟು ವಿಶ್ವಾಸವಿದ್ದು, 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರು.
22ರಂದು ಸುಪ್ರೀಂಕೋರ್ಟ್ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯಲಿದೆ. ಈಗಾಗಲೇ ಅವರ ಪರ ವಕೀಲರು ಸಮರ್ಥವಾಗಿ ವಾದ ಮಂಡಿಸಿರುವುದರಿಂದ ನ್ಯಾಯ ಸಿಗುವ ವಿಶ್ವಾಸವಿದೆ.
ಅಂತಿಮ ತೀರ್ಪು ಬಂದ ನಂತರ ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ತೀರ್ಮಾನಿಸಲಾಗುವುದು. ನಾವು ಅನರ್ಹರಿಗೆ ಅನ್ಯಾಯ ವಾಗಲು ಬಿಡುವುದಿಲ್ಲ. ಅವರಿಗೆ ಟಿಕೆಟ್ ಕೊಡುವ ಬಗ್ಗೆ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ನಾನು ಕೂಡ ರಾಷ್ಟ್ರೀಯ ನಾಯಕರ ಜೊತೆ ಮಾತುಕತೆ ನಡೆಸಿದ್ದೇನೆ. ನ್ಯಾಯಾಲಯದ ತೀರ್ಪು ಬಂದ ನಂತರ ರಾಜ್ಯಾಧ್ಯಕ್ಷರು, ಉಸ್ತುವಾರಿಗಳು, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಜೊತೆ ಮಾತುಕತೆ ನಡೆಸಲಿದ್ದೇವೆ. ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಿ ಉಪಚುನಾವಣೆಯನ್ನು ಎದುರಿಸುತ್ತೇವೆ ಎಂದು ಹೇಳಿದರು.